ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟ ಐವರ ದಾರುಣ ಸಾವು, ಅನೇಕರಿಗೆ ಗಾಯ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಘಟನೆ
ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎಂದು ಕೆಲ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ತಡರಾತ್ರಿ ನೂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ.
ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ವರದಿಗಳ ಪ್ರಕಾರ, (ಡಿ. 25) ನಿನ್ನೆ ರಾತ್ರಿ 10:00 ಗಂಟೆಯ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಸುಮಾರು ಐದು ಕಿಲೋಮೀಟರ್ ದೂರದವರೆಗೂ ಕೇಳಿ ಬಂದಿದೆ. ಬೇಲಾ ಕೈಗಾರಿಕಾ ಪ್ರದೇಶದಲ್ಲಿ (Bela Industrial area) ನಡೆದ ಸ್ಫೋಟದಿಂದ ಈ ಕಾರ್ಖಾನೆ ಪಕ್ಕದಲ್ಲಿದ್ದ ಗಿರಣಿ ಕೂಡ ಹಾನಿಗೊಳಗಾಗಿದೆ. ಗಿರಣಿಯೊಳಗಡೆ ಒಳಗೆ ಮಲಗಿದ್ದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ : ಇಬ್ಬರ ದುರ್ಮರಣ
ಕಾರ್ಖಾನೆಯ ಅವಶೇಷಗಳ ಅಡಿಯಿಂದ ಹಲವಾರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಗಾಯಗೊಂಡ ಐದು ಜನರನ್ನು ಶ್ರೀಕೃಷ್ಣ ವೈದ್ಯಕೀಯ ಕಾಲೇಜು (Sri Krishna Medical College) ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಜಾಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಕಾಂತ್ (Jayant Kant) ಅವರು ಹೇಳಿದ್ದಾರೆ.
Blast In Chemical Factory: ಗುಜರಾತ್‌ನ ವಡೋದರಾದಲ್ಲಿ ಸ್ಫೋಟ : ನಾಲ್ವರ ದಾರುಣ ಸಾವು
ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಅವಶೇಷಗಳನ್ನು ತೆಗೆದು ಹಾಕುತ್ತಿದ್ದಾರೆ. ಸಾವಿನ ನಿಖರ ಸಂಖ್ಯೆಯನ್ನು ಇನ್ನೂ ಖಚಿತಪಡಿಸಲಾಗಿಲ್ಲ ಎಂದು ಸುದ್ದಿಯೊಂದು ವರದಿ ಮಾಡಿದೆ. ಇಂದು (ಡಿ.26) ಮಧ್ಯಾಹ್ನ, ಬಾಯ್ಲರ್ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಣವ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ (ಡಿ.24) ಗುಜರಾತ್‌ನ ವಡೋದರಾದಲ್ಲಿ ರಾಸಾಯನಿಕ ಫ್ಯಾಕ್ಟರಿಯೊಂದರಲ್ಲಿ ಸ್ಫೋಟ ಸಂಭವಿಸಿತ್ತು. ಈ ದುರಂತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದರು. ಗುಜರಾತ್‌ನ ವಡೋದರಾದ ಜಿಐಡಿಸಿ ಪ್ರದೇಶದಲ್ಲಿ ಶುಕ್ರವಾರ ರಾಸಾಯನಿಕ ಕಾರ್ಖಾನೆಯ ಬಾಯ್ಲರ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿತ್ತು. ದುರಂತದಲ್ಲಿ ನಾಲ್ಕು ವರ್ಷದ ಬಾಲಕಿ ಸೇರಿದಂತೆ ಇತರ ಮೂವರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರಲ್ಲಿ, ಕಾರ್ಮಿಕರು ಮತ್ತು ಸ್ಫೋಟ ಸಂಭವಿಸಿದಾಗ ಆ ಪ್ರದೇಶದಿಂದ ಹಾದು ಹೋಗುತ್ತಿದ್ದ ಜನರು ಸೇರಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸಾಜಿದ್ ಬಲೋಚ್ ಹೇಳಿದರು. ದುರಂತದಲ್ಲಿ ಮೃತಪಟ್ಟ ನಾಲ್ವರು ಸ್ಫೋಟದ ವೇಳೆ ದೂರಕ್ಕೆ ಹಾರಲ್ಪಟ್ಟ ವಸ್ತುಗಳು ಸಾಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದರು.
ಗುಜರಾತ್‌ನಲ್ಲಿ ಬಾಯ್ಲರ್ ಸ್ಫೋಟಕ್ಕೂ ಒಂದು ದಿನ ಮೊದಲು (ಡಿ.23 ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಮಧ್ಯಾಹ್ನ 12:22 ರ ಸುಮಾರಿಗೆ ಪಂಜಾಬ್‌ನ ಲೂಧಿಯಾನದ ನ್ಯಾಯಾಲಯದ ಸಂಕೀರ್ಣದಲ್ಲಿ ಹಠಾತ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿ ನಾಲ್ವರು ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಬಾತ್‌ರೂಮ್‌ನ ಗೋಡೆಗೆ ಹಾನಿಯಾಗಿದ್ದು, ಹತ್ತಿರದ ಕಿಟಕಿಗಳ ಗಾಜುಗಳು ಛಿದ್ರಗೊಂಡಿದ್ದವು.
