ಬುಧವಾರ ನಗರದ ದುಬಾರಿ ಕೊಂಧ್ವಾ ಪ್ರದೇಶದಲ್ಲಿರುವ ತನ್ನ ಫ್ಲಾಟ್‌ಗೆ ಡೆಲಿವರಿ ಬಾಯ್‌ನಂತೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದರು.
ನವದೆಹಲಿ (ಜು.5): ಈ ವಾರದ ಆರಂಭದಲ್ಲಿ ಪುಣೆ ನಗರಕ್ಕೆ ಆಘಾತ ಮೂಡಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ನಾಟಕೀಯ ತಿರುವು ಸಿಕ್ಕಿದೆ. ಕೊರಿಯರ್ ಡೆಲಿವರಿ ಏಜೆಂಟ್ ಎಂದು ತನ್ನ ಫ್ಲ್ಯಾಟ್‌ಗೆ ಬಂದಿದ್ದ ಬವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು 22 ವರ್ಷದ ಮಹಿಳಾ ಟೆಕ್ಕಿ ದೂರು ನೀಡಿದ್ದರು. ಆದರೆ, ಆಕೆಯ ದೂರಿನ ಪ್ರಮುಖ ಅಂಶಗಳು ಸಂಪೂರ್ಣ ಸುಳ್ಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆಕೆಗೆ ಆರೋಪಿ ಅಪರಿಚಿತನಲ್ಲ. ಬದಲಾಗಿ ಮಹಿಳೆಯ ಆಪ್ತ ಸ್ನೇಹಿತ ಎನ್ನುವುದು ತನಿಖೆಯ ಬಳಿಕ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಬುಧವಾರ ನಗರದ ದುಬಾರಿ ಕೊಂಧ್ವಾ ಪ್ರದೇಶದಲ್ಲಿರುವ ತನ್ನ ಫ್ಲಾಟ್‌ಗೆ ಡೆಲಿವರಿ ಬಾಯ್‌ನಂತೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರಂಭದಲ್ಲಿ ಆರೋಪಿಸಿದ್ದರು. ಅವನು ತನ್ನ ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಲ್ಲದೆ, 'ನಾನು ಮತ್ತೆ ಬರುತ್ತೇನೆ' ಎಂದು ಸಂದೇಶ ಟೈಪ್ ಮಾಡಿ ನಾಪತ್ತೆಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಳು.
ಆದರೆ, ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶುಕ್ರವಾರ ಇಡೀ ಕೇಸ್‌ನಲ್ಲಿ ಕೊರಿಯರ್ ಬಾಯ್, ಡೆಲಿವರಿ ಏಜೆಂಟ್ ವಿಚಾರವನ್ನು ತಳ್ಳಿಹಾಕಿದರು. ಆಕೆಯ ಫ್ಲ್ಯಾಟ್‌ಗೆ ಯಾವುದೇ ಬಲವಂತದ ಪ್ರವೇಶವಾಗಿಲ್ಲ. ಆಕೆ ಹೇಳಿದಂತೆ ಯಾವುದೆ ಕೆಮಿಕಲ್ ಸಿಂಪಡಣೆ ಆಗಿಲ್ಲ. ಅಪರಿಚಿತ ವ್ಯಕ್ತಿಗಳು ಒಳನುಗ್ಗಿಲ್ಲ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಆಕೆಯ ಅನುಮತಿಯೊಂದಿಗೆ ಒಳಗೆ ಬಂದಿದ್ದ ವ್ಯಕ್ತಿ ಪರಿಚಿತನಾಗಿದ್ದ ಎಂದು ತಿಳಿಸಿದ್ದಾರೆ.
ಇದಲ್ಲದೆ, ದೂರಿನಲ್ಲಿ ಸಾಕ್ಷಿಯಾಗಿ ಬಳಸಲಾದ ಸೆಲ್ಫಿಯನ್ನು ಸಹ ತಿರುಚಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೂಲತಃ ಇಬ್ಬರೂ ವ್ಯಕ್ತಿಗಳ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾದ ಈ ಚಿತ್ರವನ್ನು ನಂತರ ಮಹಿಳೆ ಪುರುಷನ ಮುಖದ ಒಂದು ಭಾಗವನ್ನು ಮಾತ್ರ ತೋರಿಸಲು ಎಡಿಟ್ ಮಾಡಿದ್ದಾರೆ.
ಆತ ಕಳಿಸಿದ್ದಾನೆ ಎನ್ನಲಾದ ಎಸ್‌ಎಂಎಸ್ ಕೂಡ ಸುಳ್ಳು. ಬೆದರಿಕೆ ಸಂದೇಶವನ್ನು ಆಕೆಯೇ, ಆಕೆಯ ಫೋನ್‌ನಲ್ಲಿ ಟೈಪ್ ಮಾಡಿದ್ದಳು. ಆತ ಫ್ಲ್ಯಾಟ್‌ನಿಂದ ಹೊರಹೋದ ಬಳಿಕ ಹೀಗೆ ಮಾಡಿದ್ದಳು ಎಂದಿದ್ದಾರೆ.
"ನಮ್ಮ ತಾಂತ್ರಿಕ ವಿಶ್ಲೇಷಣೆಯು ಆ ವ್ಯಕ್ತಿಯ ಮೊಬೈಲ್ ಸ್ಥಳ ಆಕೆಯ ನಿವಾಸದಲ್ಲಿ ಇರುವುದನ್ನು ದೃಢಪಡಿಸಿತು ಮತ್ತು ಹೌಸಿಂಗ್ ಸೊಸೈಟಿಯ ಸಿಸಿಟಿವಿ ದೃಶ್ಯಾವಳಿಗಳು ಆತ ಕಟ್ಟಡವನ್ನು ಪ್ರವೇಶಿಸುವುದನ್ನು ತೋರಿಸಿದವು" ಎಂದು ಕುಮಾರ್ ಹೇಳಿದರು. "ಸಿಸಿಟಿವಿಯಲ್ಲಿ ಆ ವ್ಯಕ್ತಿಯ ಸ್ಪಷ್ಟ ಚಿತ್ರ ತೋರಿಸಲ್ಪಟ್ಟಿದ್ದರೂ, ಆಕೆ ಆತನ ಪರಿಚಯವಿಲ್ಲ ಎಂದು ನಿರಾಕರಿಸಿದಳು, ಇದು ನಮ್ಮ ಕೆಲಸವನ್ನು ಹೆಚ್ಚು ಕಷ್ಟಕರವಾಗಿಸಿತು." ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆ ವ್ಯಕ್ತಿಯ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ಅಂತಿಮವಾಗಿ ಬನೇರ್‌ನ ಒಂದು ಸಂಸ್ಥೆಯ ಬಳಿ ಆತನನ್ನು ಬಂಧಿಸಿದರು. ಬಂಧನದ ವೇಳೆ ಅವನು , ತಾವಿಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದರು, ಸಮುದಾಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು ಮತ್ತು ಈ ಹಿಂದೆ ಹಲವು ಬಾರಿ ಆಕೆಯ ಮನೆಗೆ ಭೇಟಿ ನೀಡಿದ್ದ ಎಂದು ತಿಳಿಸಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಆ ಸಂಜೆ ತಾನು ಲೈಂಗಿಕ ಸಂಭೋಗಕ್ಕೆ ಸಿದ್ಧವಾಗಿರಲಿಲ್ಲ ಎಂದು ಮಹಿಳಾ ಪೊಲೀಸರಿಗೆ ತಿಳಿಸಿದಳು, ಆದರೆ ಆ ವ್ಯಕ್ತಿ ತನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಮೇಲಿನ ಸಿಟ್ಟಿನಿಂದ ನಾನು ರೇಪ್ ಕೇಸ್ ದಾಖಲಿಸಿದ್ದೆ ಎಂದಿದ್ದಾಳೆ.
"ಅತ್ಯಾಚಾರ ಆರೋಪ ಇನ್ನೂ ತನಿಖೆ ಹಂತದಲ್ಲಿದ್ದರೂ, ಡೆಲಿವರಿ ಬಾಯ್ ಆಗಿದ್ದ, ಅಪರಿಚಿತ ವ್ಯಕ್ತಿಯ ಮೂಲ ನಿರೂಪಣೆಯನ್ನು ಕಟ್ಟುಕಥೆ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ಆಯುಕ್ತ ಕುಮಾರ್ ಹೇಳಿದರು. "ಇದು ತನಿಖೆಯನ್ನು ದಾರಿ ತಪ್ಪಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿತ್ತು."
ಎರಡೂ ಕುಟುಂಬಗಳು ಪರಸ್ಪರ ಪರಿಚಿತರಾಗಿದ್ದರು ಮತ್ತು ಆರೋಪಿಯು ಹೆಚ್ಚು ಅರ್ಹ ವೃತ್ತಿಪರ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ಲೈಂಗಿಕ ಕ್ರಿಯೆಯು ಸಮ್ಮತಿಯಿಂದ ನಡೆದಿದೆಯೇ ಅಥವಾ ಬಲವಂತದಿಂದ ನಡೆದಿದೆಯೇ ಎಂಬುದನ್ನು ಇನ್ನೂ ಮೌಲ್ಯಮಾಪನ ಮಾಡಲಾಗುತ್ತಿದೆ ಮತ್ತು ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಮಹಿಳೆಯ ವಿರುದ್ಧ ಸಂಭಾವ್ಯ ಆರೋಪಗಳ ಕುರಿತು ಇನ್ನೂ ಯಾವುದೇ ಕಾನೂನು ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.