ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್ ನೀರು ಬಿಡುಗಡೆ.
ಬೆಂಗಳೂರು (ಆ.5): ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೊರ್ಗಿ ಗ್ರಾಮದ ಮನೆವೊಂದಕ್ಕೆ ಹಾನಿಯಾಗಿ ₹80,000 ನಷ್ಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 104.40 ಮಿ.ಮೀ. ಮಳೆ ದಾಖಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸಣ್ಣದಾಗಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿಯಾಗಿ ಸುರಿದಿದೆ. ಚನ್ನಗಿರಿ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಸಮವಾಗಿವೆ.
ಕಣ್ಮನ ಸೆಳೆದ ಹೊಗೇನಲ್ ಜಲಪಾತ:
ಕಬಿನಿ ಜಲಾಶಯದಿಂದ ಮಂಗಳವಾರ 25,000 ಕ್ಯುಸೆಕ್ ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ರುದ್ರ ರಮಣೀಯವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ಈ ಜಲಪಾತವು ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು.
ಇದೀಗ ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡಿದ್ದು, ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ಶೂಟ್ ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.
ರೈತರಿಗೆ ಬಿತ್ತನೆಗೆ ಇದು ಅನುಕೂಲವಾಗಿದ್ದು, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲು ಮಳೆ ಪೂರಕವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆ-ಕಾಲೇಜು, ಕಚೇರಿಗಳು ಬಿಡುವ ವೇಳೆಯಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಗೆ ತೆರಳಲು ಜನರು ಪರದಾಡಿದರು. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ್ತಿದ್ದರಿಂದ ವಾಹನ ಸವಾರರಿಗೆ ದಾರಿ ಕಾಣದಂತಾಗಿತ್ತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.
ಸಂಚಾರ ಸ್ಥಗಿತ:
ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 8.90 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 7147 ಕ್ಯುಸೆಕ್ ನೀರಿನ ಒಳಹರಿವು ಇದ್ದು, 6291 ಕ್ಯುಸೆಕ್ ಹೊರ ಹರಿವು ಕಂಡುಬಂತು.


