ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಿರುಗಾಳಿಯಲ್ಲಿ ಟಿಎಂಸಿ ಈಗ ಪೂರ್ಣ ಕೊಚ್ಚಿ ಹೋಗಿದೆ. ಫಾಲ್ಟಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಬರೋಬ್ಬರಿ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದುಕೊಂಡಿದೆ.
ಕೋಲ್ಕತಾ (ಮೇ.24) ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆದರೂ ಫಾಲ್ಟಾ ಕ್ಷೇತ್ರದಲ್ಲಿ ಮರುಚುನಾವಣೆ ಘೋಷಣೆಯಾಗಿತ್ತು. ಟಿಎಂಸಿ ಪ್ರಾಬಲ್ಯದ ಈ ಕ್ಷೇತ್ರವನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಬಿಜೆಪಿ ಅಭ್ಯರ್ಥಿ ದೇಬಾಂಶು ಪಂಡ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಫಾಲ್ಟಾ ಶಾಸಕರಾಗಿದ್ದಾರೆ. ಚುನಾವಣೆಗೆ 2 ದಿನ ಇರುವಾಗಲೇ ಇಲ್ಲಿನ ಹಾಲಿ ಶಾಸಕ, ಟಿಎಂಸಿ ನಾಯಕ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದು ಚುನಾವಣೆಗೆ ಪ್ರಮುಖ ತಿರುವು ನೀಡಿತ್ತು. ಇದೀಗ ಟಿಎಂಸಿ ಅತ್ಯಂತ ಪ್ರಾಬಲ್ಯ ಕ್ಷೇತ್ರಗಳಲ್ಲಿ ಒಂದಾಗಿದ್ದ ಫಾಲ್ಟಾ ಬಿಜೆಪಿ ತೆಕ್ಕೆಗೆ ಸೇರಿಕೊಂಡಿದೆ.

1.49 ಲಕ್ಷ ಮತ ಪಡೆದ ಬಿಜೆಪಿ ಅಭ್ಯರ್ಥಿ
ದೇಬಾಂಶು ಪಂಡ ಒಟ್ಟು 1,49,66 ಮತಗಳನ್ನು ಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಸಿಪಿಐ(ಎಂ) ಅಭ್ಯರ್ಥಿ ಸಂಭು ನಾಥ್ ಕುರ್ಮಿ 40,645 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಜೆಪಿಯ ದೇಬಾಂಶು ಬರೋಬ್ಬರಿ 1,09,021 ಮತಗಳ ಅಂತರದಿಂದ ಗೆದ್ದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ 10,000 ಮತಗಳನ್ನು ಪಡೆದಿದ್ದಾರೆ.
2011ರಿಂದ ಫಾಲ್ಟಾ ಕ್ಷೇತ್ರದಲ್ಲಿ ಟಿಎಂಸಿ ಪ್ರಾಬಲ್ಯ ಸಾಧಿಸಿದೆ. ಪ್ರತಿ ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರದಲ್ಲಿ ಟಿಎಂಸಿ ಗೆದ್ದುಕೊಂಡು ಬಂದಿದೆ. ಆದರೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆ ಎದ್ದಿದೆ. ಭರ್ಜರಿ ಗೆಲುವಿನೊಂದಿಗೆ ಸುವೇಂದು ಅದಿಕಾರಿ ಮುಖ್ಯಮಂತ್ರಿಯಾಗಿ ಆಡಳಿತ ಆರಂಭಿಸಿದ್ದಾರೆ. ಫಾಲ್ಟಾ ಕ್ಷೇತ್ರದ ಗೆಲುವಿನೊಂದಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯೆ 208ಕ್ಕೆ ಏರಿಕೆಯಾಗಿದೆ.
ಭವಿಷ್ಯ ನುಡಿದಿದ್ದ ಸುವೇಂದು ಅಧಿಕಾರಿ
ಫಾಲ್ಟಾ ಕ್ಷೇತ್ರದಲ್ಲಿ ಮರುಚುನಾವಣೆ ಘೋಷಣೆಯಾದ ಬಳಿಕ ಸುವೇಂದು ಅಧಿಕಾರಿ ಮಹತ್ವದ ಭವಿಷ್ಯ ನುಡಿದಿದ್ದರು. ಫಾಲ್ಟಾ ಕ್ಷೇತ್ರದಲ್ಲಿ ಇದುವರೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪ್ರಾಬಲ್ಯ ಸಾಧಿಸಿದೆ. ಆದರೆ ಈ ಬಾರಿ ಬಿಜೆಪಿ ಈ ಕ್ಷೇತ್ರ ಗೆಲ್ಲಲಿದೆ. ಕೇವಲ ಗೆಲುವಲ್ಲ, ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಇದರಂತೆ ಫಾಲ್ಟಾ ಕ್ಷೇತ್ರ ಬಿಜೆಪಿ ತೆಕ್ಕೆ ಸೇರಿಕೊಂಡಿದೆ.
ಜಹಾಂಗೀರ್ ಖಾನ್ ಹಿಂದೆ ಸರಿದ ಬೆನ್ನಲ್ಲೇ ಟಿಎಂಸಿಯಲ್ಲಿ ಕೋಲಾಹಲ
ಜಹಾಂಗೀರ್ ಖಾನ್ ಚುನಾವಣೆಗೆ ಎರಡು ದಿನ ಇರುವಾಗ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಇದು ಟಿಎಂಸಿ ಪಕ್ಷದ ನಿರ್ಧಾರವಲ್ಲ, ವೈಯುಕ್ತಿತ ನಿರ್ಧಾರ ಎಂದು ತೃಣಮೂಲ ಕಾಂಗ್ರೆಸ್ ಸ್ಪಷ್ಟಪಡಿಸಿತ್ತು. ಇದೇ ವಿಚಾರವಾಗಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನಗೊಂಡಿದ್ದರು. ಟಿಎಂಸಿಯಿಂದ ಕೆಲ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಚರ್ಚೆಗಳ ನಡುವೆ ಸ್ಪರ್ಧೆಯಿಂದ ಹಿಂದೆ ಸರಿದ ಘಟನೆ ನಡೆದಿತ್ತು. ಇದು ಮಮತಾ ಬ್ಯಾನರ್ಜಿಗೆ ತೀವ್ರ ಇರಿಸು ಮುರಿಸು ತಂದಿತ್ತು.


