Asianet Suvarna News Asianet Suvarna News

Delhi Liquor Policy Case: 'ಸ್ಟಿಂಗ್ ಆಪರೇಷನ್' ವಿಡಿಯೋ ಹಂಚಿಕೊಂಡ ಬಿಜೆಪಿ

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸ್ಟಿಂಗ್ ಆಪರೇಷನ್‌ ವಿಡಿಯೋವನ್ನು ಹಂಚಿಕೊಂಡಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಕೆಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

bjp shares video of sting operation of delhi excise policy on aap ash
Author
First Published Sep 5, 2022, 2:21 PM IST

ದೆಹಲಿ ಮದ್ಯ ನೀತಿ (Delhi Liquor Policy) ಪ್ರಕರಣ ಕುರಿತು ಬಿಜೆಪಿ - ಎಎಪಿಯಿಂದ ಆರೋಪ - ಪ್ರತ್ಯಾರೋಪಗಳು ಕೇಳಿಬರುತ್ತಲೇ ಇವೆ. ಈ ನಡುವೆ,  ಭಾರಿ ಬೆಳವಣಿಗೆಯೊಂದರಲ್ಲಿ, ಭಾರತೀಯ ಜನತಾ ಪಕ್ಷವು (Bharatiya Janata Party) (ಬಿಜೆಪಿ) ಸೋಮವಾರ 'ಕುಟುಕು ಕಾರ್ಯಾಚರಣೆ'ಯ ವಿಡಿಯೋವನ್ನು ಹಂಚಿಕೊಂಡಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಈ ನೀತಿಯ ಅಡಿಯಲ್ಲಿ ಹಣವನ್ನು ಹೇಗೆ ಸಂಗ್ರಹಿಸುತ್ತಿದೆ ಎಂಬುದನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮದ್ಯ ನೀತಿ ಪ್ರಕರಣದ ಆರೋಪಿಯ ತಂದೆ ದೆಹಲಿ ಸರ್ಕಾರದಿಂದ ಅಬಕಾರಿ ಸುಂಕ ಸಂಗ್ರಹದ ಬಗ್ಗೆ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ಸೋಮವಾರ ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ. 

ಈ ವಿಡಿಯೋ ಹಂಚಿಕೊಳ್ಳುವಾಗ, "ಎಎಪಿ ಮದ್ಯ ಹಗರಣದಲ್ಲಿ ಆರೋಪಿ ಸಂಖ್ಯೆ 13 ನೇ ಆರೋಪಿ ಸನ್ನಿ ಮರ್ವಾ ಅವರ ತಂದೆ ಕುಲ್ವಿಂದರ್ ಮರ್ವಾಹ್ ಅವರ ಈ ವಿಡಿಯೋ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ಹರಡುತ್ತಿರುವ ಪ್ರತಿಯೊಂದು ಸುಳ್ಳನ್ನು ಮುಚ್ಚಿಹಾಕುತ್ತದೆ. ಮದ್ಯ ಮಾಫಿಯಾಗಳು ಮತ್ತು ಮಧ್ಯವರ್ತಿಗಳಿಂದ ದೆಹಲಿ ತೊಂದರೆ ಅನುಭವಿಸುತ್ತಿರುವಾಗ ಇಬ್ಬರು ಸಂಗ್ರಹಿಸಿದ ಕಪ್ಪು ಹಣದ ಮೊತ್ತವನ್ನು ಊಹಿಸಿ’’ ಎಂದು ಮಾಳವಿಯಾ ಟ್ವೀಟ್‌ ಮಾಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಅಬಕಾರಿ ನೀತಿ 2021-22 ಅನ್ನು ದೆಹಲಿ ಸರ್ಕಾರವು ಜುಲೈನಲ್ಲಿ ಹಿಂಪಡೆದುಕೊಂಡಿದೆ. 

ಅಧಿಕಾರದ 'ಅಮಲು' ನಿಮಗೂ ತಟ್ಟಿತಲ್ಲ..! ಕೇಜ್ರಿವಾಲ್‌ ಸರ್ಕಾರದ ಮದ್ಯನೀತಿಯ ಬಗ್ಗೆ ಅಣ್ಣಾ ಹಜಾರೆ ಭಾವುಕ ಪತ್ರ!

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅಬಕಾರಿ ಖಾತೆಯನ್ನು ಹೊಂದಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ನೀತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಾಗೂ, ತನಿಖಾ ಸಂಸ್ಥೆಯಿಂದ ಕ್ಲೀನ್ ಚಿಟ್ ಪಡೆದುಕೊಂಡಿರುವುದಾಗಿಯೂ ಈ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿಯಾಗಿರುವ ಸಿಸೋಡಿಯಾ ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅಬಕಾರಿ ನೀತಿ ಹಿಂತೆಗೆದುಕೊಳ್ಳುವ ಹಿಂದಿನ ಕಾರಣಗಳನ್ನು ಕೇಜ್ರಿವಾಲ್ ಮತ್ತು ಸಿಸೋಡಿಯಾ ಇಬ್ಬರೂ ಸ್ಪಷ್ಟಪಡಿಸಿಲ್ಲ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಹೇಳಿದ್ದಾರೆ. ಅಬಕಾರಿ ನೀತಿ 2021-22 ರ ಅಡಿಯಲ್ಲಿ ಆದಾಯ ಏಕೆ ಕಡಿಮೆಯಾಗಿದೆ ಎಂಬುದರ ಕುರಿತು ಉತ್ತರಿಸಿಲ್ಲ ಎಂದೂ ಅವರು ಹೇಳಿದರು.

"ಹಳೆಯ ಅಬಕಾರಿ ನೀತಿಯಡಿ, ದೆಹಲಿಯ ಮದ್ಯ ಮಾರಾಟವು ತಿಂಗಳಿಗೆ 132 ಲಕ್ಷ ಲೀಟರ್ ಮತ್ತು ಸರ್ಕಾರದ ಆದಾಯ 5,068 ಕೋಟಿ ರೂ. ಇತ್ತು. ಆದರೆ, ಅಬಕಾರಿ ನೀತಿ 2021-22 ರಲ್ಲಿ, ಮಾಸಿಕ ಮದ್ಯ ಮಾರಾಟವು ಸುಮಾರು 245 ಲಕ್ಷ ಲೀಟರ್‌ಗಳಿಗೆ ದ್ವಿಗುಣಗೊಂಡಿದೆ.  ಆದಾಯವು ಮಾತ್ರ 4,465 ಕೋಟಿ ರೂಗೆ ಕುಸಿದಿದೆ’’ ಎಂದು ಆರ್‌ಟಿಐ ಉತ್ತರವನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'

ದೆಹಲಿ ಮುಖ್ಯಮಂತ್ರಿ ವಿರುದ್ಧ ರಾಜೀವ್‌ ಚಂದ್ರಶೇಖರ್‌ ಆಕ್ರೋಶ
ಇನ್ನೊಂದೆಡೆ, ಈ ವಿಡಿಯೋವನ್ನು ಟ್ವೀಟ್‌ ಮಾಡಿಕೊಂಡಿರುವ ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ರಾಜಕೀಯದಲ್ಲಿ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ರಾಜಕಾರಣಿ ಕೇಜ್ರಿವಾಲ್  ಮದ್ಯ ಉದ್ಯಮದಿಂದ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಅಸಹ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೂಡ ಎಎಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರದ ಅಮಲು ನಿಮಗೂ ತಟ್ಟಿತಲ್ಲ ಎಂದು ಕೇಜ್ರಿವಾಲ್‌ ಸರ್ಕಾರದ ಮದ್ಯ ನೀತಿಯ ಬಗ್ಗೆ ಅಣ್ಣಾ ಹಜಾರೆ ಭಾವನಾತ್ಮಕ ಪತ್ರ ಬರೆದಿದ್ದರು.

Follow Us:
Download App:
  • android
  • ios