Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'
ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ರೇಡ್ ಆದ ಬಳಿಕ ಗುಜರಾತ್‌ನಲ್ಲಿ ಎಎಪಿಯ ಮತ ಹಂಚಿಕೆ ಶೇ. 4 ರಷ್ಟು ಹೆಚ್ಚಿದೆ. ಸಿಸೋಡಿಯಾ ಬಂಧನದ ನಂತರ ಅದು ಶೇ. 6 ಕ್ಕೆ ಹೆಚ್ಚಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly Election) ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ನಾಯಕ (Aam Aadmi Party) ಹಾಗೂ ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮೇಲೆ ಸಿಬಿಐ (CBI) ರೇಡ್‌ನಿಂದ ಗುಜರಾತ್‌ನಲ್ಲಿ ಎಎಪಿಯ ಶೇಕಡಾವಾರು ಮತ ಹೆಚ್ಚಾಗಲಿದೆ, ಹಾಗೂ ದೆಹಲಿ ಉಪ ಮುಖ್ಯಮಂತ್ರಿಯನ್ನು (Delhi Deputy Chief Minister) ಬಂಧಿಸಿದರೆ ಪಕ್ಷದ ಶೇಕಡಾವಾರು ಮತ ಮತ್ತಷ್ಟು ಹೆಚ್ಚಾಗಲಿದೆ ಎಂದೂ ಹೇಳಿದ್ದಾರೆ. ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷವನ್ನು ನೋಯಿಸುವುದು ಕೇಂದ್ರದ ಯೋಜನೆಯಾಗಿದೆ. ಆದರೆ, ಅದರಿಂದ ಬಿಜೆಪಿಗೇ (BJP) ಹಿನ್ನೆಡೆಯಾಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲಿನ ಸಿಬಿಐ ಕ್ರಮವನ್ನು ಕೇಜ್ರಿವಾಲ್ ಖಂಡಿಸಿದ್ದಾರೆ.
"ಮನೀಷ್ ಸಿಸೋಡಿಯಾ ಮೇಲಿನ ರೇಡ್ ನಂತರ ಗುಜರಾತ್‌ನಲ್ಲಿ ಎಎಪಿಯ (AAP) ಮತ ಹಂಚಿಕೆಯು ಶೇಕಡಾ 4 ರಷ್ಟು ಹೆಚ್ಚಾಗಿದೆ. ಹಾಗೂ, ಅವರನ್ನು ಬಂಧಿಸಿದ ಬಳಿಕ ಅದು ಶೇಕಡಾ 6 ಕ್ಕೆ ಹೆಚ್ಚಾಗುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ನಡುವೆ ಕೇಜ್ರಿವಾಲ್ ಹೇಳಿದ್ದಾರೆ. ಅಲ್ಲದೆ, "ಅವರನ್ನು ಎರಡು ಬಾರಿ ಬಂಧಿಸಿದರೆ, ನಾವು ಗುಜರಾತ್‌ನಲ್ಲಿ ಸರ್ಕಾರ ರಚಿಸಬಹುದು" ಎಂದೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದಕ್ಕೆ, ಎಎಪಿ ಶಾಸಕರು ಮೇಜು ಕುಟ್ಟುವ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ.
ಆಪ್‌ಗೆ ಇನ್ನೊಂದು ಸಂಕಷ್ಟ: ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ..?
"ಆಪರೇಷನ್ ಕಮಲ (Operation Lotus) ವಿಫಲವಾಗುತ್ತದೆ ಎಂಬುದನ್ನು ಸಾಬೀತುಪಡಿಸಲು ನಾವು ಇಂದು [ದೆಹಲಿ ವಿಧಾನಸಭೆಯಲ್ಲಿ] ವಿಶ್ವಾಸಮತ ಯಾಚನೆ ಮಾಡಿದ್ದೇವೆ.. ನಮ್ಮ ಯಾವುದೇ ಶಾಸಕರು ಪಕ್ಷವನ್ನು ಬದಲಾಯಿಸಿಲ್ಲ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಈ ಮಧ್ಯೆ, 62 ಎಎಪಿ ಶಾಸಕರ ಪೈಕಿ 59 ಮಂದಿ ವಿಶ್ವಾಸಮತಕ್ಕೆ ಹಾಜರಾಗಿದ್ದರು. ಗೈರುಹಾಜರಾದ ಮೂವರಲ್ಲಿ ಇಬ್ಬರು ವಿದೇಶದಲ್ಲಿದ್ದು, ಮತ್ತೊಬ್ಬ ಶಾಸಕ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಒಟ್ಟಾರೆಯಾಗಿ, 58 ಶಾಸಕರು ವಿಶ್ವಾಸ ಮತದ ಪರವಾಗಿ ಮತ ಹಾಕಿದರು.
ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಆಮ್ ಆದ್ಮಿ ಪಕ್ಷ ಅಥವಾ ಎಎಪಿ ಸರ್ಕಾರ ಮಾಡಿದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಗಳಿಕೊಂಡಿದ್ದಾರೆ. "ನನ್ನ ಇಬ್ಬರೂ ಮಕ್ಕಳು ಐಐಟಿಯಲ್ಲಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) (Indian Institute of Technology) ಓದಿದ್ದಾರೆ. ನಾನು ಭಾರತದ ಪ್ರತಿ ಮಗುವಿಗೆ ಅದೇ ರೀತಿಯ ಶಿಕ್ಷಣ ನೀಡಲು ಬಯಸುತ್ತೇನೆ" ಎಂದು ಅವರು ಹೇಳಿದರು.
ಎಎಪಿ ಶಾಲೆಗಳನ್ನು ಸುಧಾರಿಸಲು ಹೆಚ್ಚಿನದನ್ನು ಮಾಡಿಲ್ಲ ಎಂಬ ವಿರೋಧ ಪಕ್ಷದ ಬಿಜೆಪಿಯ ಆರೋಪಗಳ ನಡುವೆ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಖರ್ಚು ಮಾಡುವುದು ಕೇಜ್ರಿವಾಲ್ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಇನ್ನು, ಈ ವಿಚಾರದಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡಿದ ಅರವಿಂದ್ ಕೇಜ್ರಿವಾಲ್, "ಸಂಪೂರ್ಣ ಭ್ರಷ್ಟ ಪಕ್ಷಕ್ಕೆ ವಿದ್ಯಾವಂತರ ಕೊರತೆಯಿದೆ. ಆದರೆ ಪ್ರಾಮಾಣಿಕ ಪಕ್ಷವು ಉತ್ತಮ ಶಿಕ್ಷಣ, ನಿಜವಾದ ಐಐಟಿ ಪದವಿಗಳನ್ನು ಹೊಂದಿದೆ" ಎಂದು ಹೇಳಿದರು.
‘’40 ಶಾಸಕರಿಗೆ ಬಿಜೆಪಿ ಆಮಿಷ: ಆಪರೇಷನ್ ಕಮಲ ವಿಫಲವಾಗಲೆಂದು ರಾಜ್‌ಘಾಟ್ ಬಳಿ ಪ್ರಾರ್ಥನೆ’’
ಅರವಿಂದ್ ಕೇಜ್ರಿವಾಲ್ ಸರ್ಕಾರವು ಶಾಲೆಗಳ ಮರುನಿರ್ಮಾಣದ ವೆಚ್ಚವನ್ನು ಹೆಚ್ಚಿಸಿದ್ದರೂ, ಆ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವನ್ನು ಬಿಜೆಪಿ ಮಾಡಿದ್ದು, ಇದನ್ನು "ಶಾಲಾ ಹಗರಣ" (School Scam) ಎಂದು ಹೇಳಿಕೊಂಡಿದೆ. ಅಲ್ಲದೆ, ಎಎಪಿ ಸರ್ಕಾರವು 500 ಹೊಸ ಶಾಲೆಗಳನ್ನು ನಿಜವಾಗಿಯೂ ನಿರ್ಮಿಸಿಲ್ಲ, ಕೇವಲ ಸುಳ್ಳು ಭರವಸೆ ನೀಡಿದೆ ಎಂದು ಸಹ ಬಿಜೆಪಿ ಆರೋಪಿಸಿದೆ.