ಇಂಡಿ ಒಕ್ಕೂಟದಲ್ಲಿರುವ ಡಿಎಂಕೆ ಪದೇ ಪದೇ ಹಿಂದೂ, ಸನಾತನ ಧರ್ಮ, ಹಿಂದೂ ಆಚರಣೆ, ಸಂಪ್ರದಾಯಗಳನ್ನು ವ್ಯಂಗ್ಯವಾಡುತ್ತಿದೆ. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. ಗೋ ಮೂತ್ರ ರಾಜ್ಯದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ ಎಂದು ಡಿಎಂಕೆ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕೆರಳಿದೆ
ನವದೆಹಲಿ(ಡಿ.05) ತಮಿಳುನಾಡು ಡಿಎಂಕೆ ಪಕ್ಷದ ನಾಯಕರು ಪದೇ ಪದೇ ಹಿಂದೂ ಸಂಸ್ಕೃತಿಯನ್ನು, ಸನಾತನ ಧರ್ಮವನ್ನು ಅವಮಾನಿಸುವ ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿದ್ದಾರೆ. ತಮಿಳುನಾಡು ಸಿಎಂ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ನಾಶಕ್ಕೆ ಕರೆಕೊಟ್ಟು ವಿವಾದ ಇನ್ನೂ ತಣ್ಣಗಾಗಿಲ್ಲ. ಇದರ ಬೆನ್ನಲ್ಲೇ ಡಿಎಂಕೆ ಮತ್ತೊಬ್ಬ ನಾಯಕ, ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಸೆಂಥಿಲ್, ಬಿಜೆಪಿ ಕೇವಲ ಗೋ ಮೂತ್ರ ರಾಜ್ಯದಲ್ಲಿ ಗೆಲುವು ಸಾಧಿಸಿದೆ ಎಂದಿದ್ದಾರೆ. ಈ ಮೂಲಕ ಉತ್ತರ ರಾಜ್ಯಗಳು ಗೋ ಮೂತ್ರ ರಾಜ್ಯಗಳು ಎಂದಿದ್ದಾರೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಿಲ್ ಕುರಿತು ಚರ್ಚೆ ವೇಳೆ ಮಾತನಾಡಿದ ಸೆಂಥಿಲ್ ಕುಮಾರ್, ಬಿಜೆಪಿ ಕೇವಲ ಹಿಂದಿ ಭಾಷೆ ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ರಾಜ್ಯಗಳನ್ನು ನಾವು ಗೋ ಮೂತ್ರ ರಾಜ್ಯಗಳು ಎಂದು ಕರೆಯುತ್ತೇವೆ ಎಂದಿದ್ದಾರೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಪೂರ್ಣ ವಿಫಲವಾಗಿದೆ. ತಮಿಳುನಾಡು, ತೆಲಂಗಾಣ ಹಾಗೂ ಕೇರಳದಲ್ಲಿ ಬಿಜೆಪಿ ಯಾವತ್ತಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಇನ್ನು ಕರ್ನಾಟಕದ ಜನತೆಯೂ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ, ಮತ್ತೆ ವಿವಾದ ಸೃಷ್ಟಿಸಿದ ಸ್ಟಾಲಿನ್!
ಕೇಂದ್ರ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಯಾವುದೇ ಅಧಿಕಾರ ಚಲಾವಣೆ ಸಾಧ್ಯವಿಲ್ಲ. ಹೀಗಾಗಿ ಈ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವ ಹುನ್ನಾರ ಕೇಂದ್ರ ಬಿಜೆಪಿಯಲ್ಲಿರುವ ಸಾಧ್ಯತೆಗಳಿವೆ ಎಂದು ಸೆಂಥಿಲ್ ಕುಮಾರ್ ಆರೋಪ ಮಾಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ಡಿಎಂಕೆ ಪಕ್ಷ, ಡಿಎಂಕೆ ನಾಯಕನ ಜೊತೆಗೆ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದೆ. ಇಂಡಿ ಒಕ್ಕೂಟದ ಪಕ್ಷದ ನಾಯಕ ಮತ್ತೆ ಭಾರತದ ಹಿಂದೂವನ್ನು ಅಪಮಾನಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಹುಲ್ ಗಾಂಧಿ ಒಪ್ಪುತ್ತಾರೆಯೇ? ಎಷ್ಟು ದಿನ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಭಾರತೀಯರನ್ನು ನಿಂದಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ.
ಡಿಎಂಕೆ ನಾಯಕರ ಈ ರೀತಿಯ ವರ್ತನೆಯಿಂದ ಈಗಾಗಲೇ ತಮಿಳುನಾಡು ಮುಳುಗುತ್ತಿದೆ.ಈಗಾಗಲೇ ಉತ್ತರ ಭಾರತದ ನಮ್ಮ ಸಹೋದರರನ್ನು ಪಾನಿಪೂರಿ ಮಾರಾಟಗಾರರು, ಶೌಚಾಲಯ ನಿರ್ಮಾಣಗಾರರು ಎಂದು ನಿಂದಿಸಿದ್ದಾರೆ. ಇದೀಗ ಇಂಡಿ ಒಕ್ಕೂಟದ ಮಿತ್ರ ಪಕ್ಷ, ತಮಿಳುನಾಡಿನ ಆಡಳಿತ ಪಕ್ಷದ ನಾಯಕ ಗೋ ಮೂತ್ರ ರಾಜ್ಯ ಎಂದು ಕರೆದಿರುವುದು ದುರಂತ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.
ಸನಾತನ ಧರ್ಮ ವಿರುದ್ಧ ಹೇಳಿಕೆ: ಉದಯನಿಧಿ, ರಾಜಾಗೆ ಸುಪ್ರೀಂಕೋರ್ಟ್ ನೋಟಿಸ್
