ಸನಾತನ ಧರ್ಮ ವಿರುದ್ಧ ಹೇಳಿಕೆ: ಉದಯನಿಧಿ, ರಾಜಾಗೆ ಸುಪ್ರೀಂಕೋರ್ಟ್ ನೋಟಿಸ್
ಸನಾತನ ಧರ್ಮ ನಿರ್ಮೂಲನೆ’ ಆಗಬೇಕೆಂದು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್, ಎ. ರಾಜಾ ಹಾಗೂ ಇತರ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಸಲ್ಲಿಸಲಾದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತಮಿಳುನಾಡು ಸರ್ಕಾರ ಮತ್ತು ಉದಯನಿಧಿಗೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ (ಸೆಪ್ಟೆಂಬರ್ 23, 2023): ‘ಸನಾತನ ಧರ್ಮ ನಿರ್ಮೂಲನೆ’ ಆಗಬೇಕೆಂದು ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಡಿಎಂಕೆ ಮುಖಂಡ ಎ. ರಾಜಾ ಹಾಗೂ ಇತರ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಸಲ್ಲಿಸಲಾದ ಮನವಿಯ ಕುರಿತು ಸುಪ್ರೀಂ ಕೋರ್ಟ್, ಶುಕ್ರವಾರ ತಮಿಳುನಾಡು ಸರ್ಕಾರ ಮತ್ತು ಉದಯನಿಧಿಗೆ ನೋಟಿಸ್ ಜಾರಿ ಮಾಡಿದೆ.
ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿ. ಜಗನ್ನಾಥ್ ಎಂಬುವವರು ಮಾಡಿದ್ದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠ, ಈ ನೋಟಿಸ್ ಜಾರಿ ಮಾಡಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು ಅವರು, ‘ಈ ಧರ್ಮ ಒಳ್ಳೆಯದಲ್ಲ, ಅನ್ಯ ಧರ್ಮ ಒಳ್ಳೆಯದು ಎಂದು ಹೇಳುವಂತೆ ಸಚಿವರು ಶಾಲಾ ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಇದು ಸಲ್ಲದು. ಇಂಥ ಹೇಳಿಕೆಗಳನ್ನು ನೀಡದಂತೆ ಸ್ಟಾಲಿನ್‌ಗೆ ಸೂಚಿಸಬೇಕು ಹಾಗೂ ಎಫ್‌ಐಆರ್ ದಾಖಲಿಸಲು ಆದೇಶಿಸಬೇಕು’ ಎಂದು ಕೋರಿದರು.
ಇದನ್ನು ಓದಿ: ಬೇರೆ ಧರ್ಮದ ಬಗ್ಗೆ ಮಾತನಾಡಲು ಧೈರ್ಯವಿದೆಯೇ?: ಉದಯನಿಧಿ ಸ್ಟಾಲಿನ್ ವಿರುದ್ಧ ನಿರ್ಮಲಾ ಸೀತಾರಾಮನ್ ಚಾಟಿ
ಸನಾತನ ಧರ್ಮ ಡೆಂಘೀ ಹಾಗೂ ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು. ಸನಾತನ ಧರ್ಮ ಕುಷ್ಠರೋಗದಂತೆ ಎಂದು ರಾಜಾ ಛೇಡಿಸಿದ್ದರು. ಇತರ ಕೆಲವು ಡಿಎಂಕೆ ನಾಯಕರು ಈ ಹೇಳಿಕೆಗಳನ್ನು ಸಮರ್ಥಿಸಿಕೊಂಡು, ವಿವಾದ ಹುಟ್ಟುಹಾಕಿದ್ದರು.
ಸಂಸದರು ದೇವರ ಮೂರ್ತಿ ಇದ್ದಂತೆ, ಅವರಿಗೆ ಶಕ್ತಿಯಿಲ್ಲ: ರಾಹುಲ್ ವಿವಾದಿತ ಹೇಳಿಕೆ
ಸಂಸದರು ದೇವಸ್ಥಾನಗಳಲ್ಲಿರುವ ಮೂರ್ತಿ ಇದ್ದಂತೆ, ಅವರಿಗೆ ಆ ಮೂರ್ತಿಗಳಂತೆ ಯಾವುದೇ ಶಕ್ತಿ ಇಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಮಹಿಳಾ ಮೀಸಲು ಮಸೂದೆ ಅಂಗೀಕಾರ ಕುರಿತಂತೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ‘ಸಂಸತ್ತಿನಲ್ಲಿ, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಸಂಸದರರನ್ನು ದೇವಾಲಯದ ಮೂರ್ತಿಗಳನ್ನಾಗಿ ಮಾಡಲಾಗಿದೆ. ಅವರಿಗೆ ಕಾನೂನು ರಚನೆಯಲ್ಲಿ ಭಾಗವಹಿಸುವ ಅಧಿಕಾರ ಇಲ್ಲ. ದೇಗುಲದ ಮೂರ್ತಿಗಳಂತೆ ಯಾವ ಸಂಸದರಿಗೂ ಶಕ್ತಿ ಇಲ್ಲ. ಆಡಳಿತ ನಡೆಸುವಲ್ಲಿ ಇವರ ಕೊಡುಗೆ ಏನೂ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಆಯ್ತು, ಈಗ ರಾಮಚರಿತಮಾನಸ್ ವಿರುದ್ಧ I.N.D.I.A ಕೂಟ ವಾಗ್ದಾಳಿ: ಬಿಹಾರ ಶಿಕ್ಷಣ ಸಚಿವರ ವಿವಾದ
ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥದ್ದೊಂದು ಹೇಳಿಕೆ ಮೂಲಕ ಹಿಂದೂ ಮೂರ್ತಿಗಳಿಗೆ ಶಕ್ತಿ ಇಲ್ಲ ಎಂದು ವಾದಿಸಿದ್ದಾರೆ. ದೇವರ ಮೂರ್ತಿಗಳಿಗೆ ಶಕ್ತಿ ಇಲ್ಲವಾದಲ್ಲಿ ರಾಹುಲ್ ದೇಗುಲಗಳಿಗೆ ಭೇಟಿ ನೀಡುವುದು ಏಕೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್