ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು ತಮ್ಮ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ತಮಗೆ ಅವಕಾಶ ನೀಡಿದ ಪಕ್ಷದ ಹಿರಿಯ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದ ಶಹಜಾದ್ ಪೂನಾವಾಲಾ ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ವರ್ಗಾಯಿಸಿದ್ದಾರೆ. ಹಾಗೆಯೇ ರಾಜೀನಾಮೆ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಅತ್ಯಂತ ನಮ್ರತೆ, ಪ್ರೀತಿ ಮತ್ತು ಕೃತಜ್ಞತೆಯಿಂದ ಮತ್ತೊಮ್ಮೆ ನನ್ನ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸುತ್ತಿದ್ದೇನೆ. ಈ ಬಾರಿ ರಾಜೀನಾಮೆ ಸ್ವೀಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿಗೆ ಅಧಿಕೃತ ವಿದಾಯ
ಇತ್ತೀಚೆಗಷ್ಟೇ ಶಹಜಾದ್ ಪೂನಾವಾಲಾ ತಮ್ಮ ಎಕ್ಸ್ ಖಾತೆಯ ಪ್ರೊಫೈಲ್ ಅಪ್‌ಡೇಟ್ ಮಾಡಿಕೊಂಡಿದ್ದು, ಅಲ್ಲಿದ್ದ ಬಿಜೆಪಿ ಎಂಬ ಪದವನ್ನು ತೆಗೆದಿದ್ದರು. ಈ ಸಣ್ಣ ಬದಲಾವಣೆ ತೀವ್ರ ಚರ್ಚಗೆ ಗ್ರಾಸವಾಗಿತ್ತು. ಇದೀಗ ಶಹಜಾದ್ ಪೂನಾವಾಲಾ ಬಿಜೆಪಿಯಿಂದ ಹೊರ ಬರುತ್ತಿರೋದನ್ನು ದೃಢಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಗೃಹ ಸಚಿವ ಅಮಿತ್ ಶಾ, ಬಿಎಲ್ ಸಂತೋಷ್, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಮತ್ತು ಇಡೀ ಸಂಘ ಪರಿವಾರ ಸೇರಿದಂತೆ ಎಲ್ಲಾ ಹಿರಿಯ ನಾಯಕರಿಗೆ ಪೂನಾವಾಲ ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು, ತಮಗೆ ನೀಡಿದ ಮಾರ್ಗದರ್ಶನ, ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞನಾಗಿರುತ್ತೇನೆ ಎಂದಿ ಹೇಳಿಕೊಂಡಿದ್ದಾರೆ. ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಪಸ್ಮಾಂಡ್ ಮುಸ್ಲಿಂ ನನ್ನಂತಹವನ ಇಲ್ಲಿಯವರೆಗಿನ ಜೀವನ ಸಾಮಾನ್ಯವಾಗಿರಲಿಲ್ಲ. ಬಿಜೆಪಿ ನೀಡಿದ ರಾಷ್ಟ್ರೀಯ ವಕ್ತಾರನ ಸ್ಥಾನ ಮತ್ತು ಜವಾಬ್ದಾರಿಯನ್ನು ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪಕ್ಷ ನನ್ನ ರಾಜೀನಾಮೆಯನ್ನು ತಕ್ಷಣ ಸ್ವೀಕರಿಸಲು ನಿರಾಕರಿಸಿದ್ದು, ನನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದು ಭಾವನಾತ್ಮಕವಾಗಿತ್ತು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಗಂಭೀರವಾಗಿ ಚಿಂತನೆ ನಡೆಸಿದ ಬಳಿಕ ಅಂತಿಮವಾಗಿ ನನ್ನ ರಾಷ್ಟ್ರೀಯ ವಕ್ತಾರ ಸ್ಥಾನ ಮತ್ತು ಬಿಜೆಪಿಯ ಸಕ್ರಿಯ ಪ್ರಾಥಮಿಕ ಸದಸ್ಯತ್ವದಿಂದ ಕೆಳಗಿಳಿಯಲು ಬಯಸುತ್ತೇನೆ ಎಂದು ನಿರ್ಧರಿಸಿದ್ದೇನೆ ಎಂಬ ಮಾಹಿತಿಯನ್ನು ಶಹಜಾದ್ ಪೂನಾವಾಲಾ ಹಂಚಿಕೊಂಡಿದ್ದಾರೆ.


