ಬಿಜೆಪಿ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ, ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಪ್ರಮುಖ ಜವಾಬ್ದಾರಿಗಳು ನೀಡಿರಲಿಲ್ಲ. ಇತ್ತೀಚೆಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚೆನ್ನೈ (ಫೆ.03) ಬಿಜೆಪಿ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ನಾಯಕ ಅಣ್ಣಾಮಲೈ ನಿರ್ಧಾರ ಹಲವರಿಗೆ ಶಾಕ್ ಕೊಟ್ಟಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಣ್ಣಾಮಲೈಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಅಣ್ಣಾಮಲೈ ತಮ್ಮ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳ ಚನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಅಣ್ಣಾಮಲೈಗೆ ವಹಿಸಲಾಗಿತ್ತು. ಆದರೆ ಅಣ್ಣಾಮಲೈ ರಾಜೀನಾಮೆ ನೀಡಿ ಜವಾಬ್ದಾರಿಯಿಂದ ಹೊರಬಂದಿದ್ದಾರೆ.

ಅಣ್ಣಾಮಲೈ ರಾಜೀನಾಮೆಗೆ ಕಾರಣವೇನು?

ರಾಜೀನಾಮೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅಣ್ಣಾಮಲೈ ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನ ತಂದೆಗೆ ಅನಾರೋಗ್ಯವಿದೆ. ಹೀಗಾಗಿ ನಾನು ಕೊಯಂಬತ್ತೂರಿನಲ್ಲೇ ಉಳಿದುಕೊಂಡಿದ್ದೇನೆ. ತಂದೆಯ ಆರೈಕೆ, ಆರೋಗ್ಯ ಕಾಳಜಿ ಪ್ರಮುಖ ಆದ್ಯತೆಯಾಗಿರುವ ಕಾರಣ ಕೊಯಂಬತ್ತೂರಿನಲ್ಲಿ ಉಳಿಯಬೇಕಾಗಿದೆ. ಹೀಗಾಗಿ 6 ಕ್ಷೇತ್ರಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಸಾಧ್ಯವಾಗಿದೆ. ಈ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ಬಿಜೆಪಿ ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಹಿರಿಯ ನಾಯಕರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 41 ವಿಧಾನಸಭಾ ಕ್ಷೇತ್ರಗಳಿದೆ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಈ ಪೈಕಿ ಕೆ ಅಣ್ಣಾಮಲೈಗೆ ಸಿಂಗನಲ್ಲೂರು, ಮದುರೆ ದಕ್ಷಿಣ, ವಿರುಂಗಂಪಾಕಂ, ಕಾರೈಕುಡಿ, ಶ್ರೀವೈಕಂಠಮ್, ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಅಣ್ಣಾಮಲೈಗೆ ನೀಡಲಾಗಿತ್ತು.

ತಮ್ಮ ನಿರ್ಧಾರವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂಥಿರನ್‌ಗೆ ತಿಳಿಸಿರುವುದಾಗಿ ಅಣ್ಣಾಮಲೈ ಹೇಳಿದ್ದಾರೆ. ಕೊಯಂಬತ್ತೂರಿನಲ್ಲಿರುವ ಸಿಂಗನಲ್ಲೂರು ಕ್ಷೇತ್ರ ಸೇರಿದಂತೆ 6 ಕ್ಷೇತ್ರಗಳಿಗೆ ಬಿಜೆಪಿ ಹೊಸ ಉಸ್ತುವಾರಿಗಳನ್ನು ನೇಮಕ ಮಾಡಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

2026ರ ಚುನಾವಣೆಗೆ ಸ್ಪರ್ಧಿಸಲ್ವಾ ಅಣ್ಣಾಮಲೈ?

ಸುದ್ದಿಗೋಷ್ಠಿ ವೇಳೆ ಪ್ರಮುಖವಾಗಿ ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಅಣ್ಣಾಮಲೈ ಸ್ಪರ್ಧಿಸುತ್ತಾರಾ ಅನ್ನೋ ಪ್ರಶ್ನೆ ಎದುರಾಗಿತ್ತು. ಈ ಕುರಿತು ಉತ್ತರಿಸಿದ ಅಣ್ಣಾಮಲೈ, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಪಕ್ಷದ ನಿರ್ಧಾರ ನೋಡಿಕೊಂಡು ಘೋಷಿಸುವುದಾಗಿ ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೊಯಂಬತ್ತೂರು ಜನತೆಗೆ ಯಾವುದ ಮನವಿಗೆ ನಾನು ಸಿಗುವಂತಿರಬೇಕು. ಹೀಗಾಗಿ ಸದ್ಯ ಬಾಡಿಗೆ ಮನೆ ಮಾಡಿದ್ದೇನೆ. ಜನರ ಮನವಿಗಳು, ದೂರುಗಳಿಗೆ ಸ್ಪಂದಿಸಲು ಅನೂಕೂಲವಾಗುವಂತೆ ಬಾಡಿಗೆ ಮನೆ ಮಾಡಿದ್ದೇನೆ. ಪಕ್ಷದ ನಿರ್ಧಾರದ ಪ್ರಕಾರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.