Asianet Suvarna News Asianet Suvarna News

ದೇಶ ತನ್ನ ಸ್ವಂತ ಆಸ್ತಿ ಎಂಬಂತೆ ಬಿಜೆಪಿ ವರ್ತಿಸ್ತಿದೆ: ಹೆಸರು ಬದಲಾವಣೆಗೆ ಮೆಹಬೂಬಾ ಆಕ್ರೋಶ

ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಮರು ನಾಮಕರಣ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆಗೆ ಯಾರು ಏನಂದರು ಎಂಬ ಡಿಟೇಲ್ಸ್‌ ಇಲ್ಲಿದೆ.

BJP is acting like the country is its own property PDP Mehbooba angry over name change akb
Author
First Published Sep 6, 2023, 8:19 AM IST

ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಮರು ನಾಮಕರಣ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆಗೆ ಯಾರು ಏನಂದರು ಎಂಬ ಡಿಟೇಲ್ಸ್‌ ಇಲ್ಲಿದೆ.

ಭಾರತವನ್ನು ಆಸ್ತಿ ಎಂದುಕೊಂಡಿದೆ

ಬಿಜೆಪಿಯು ಭಾರತವನ್ನು ತನ್ನದೇ ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿದೆ. ಭಾರತದ ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೊಂದು ದೇಶದ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಭಾರತದ ಇತರ ಹೆಸರನ್ನು ತೆಗೆದು ಹಾಕುವ ಮೂಲಕ ದೇಶದ ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಬಿಜೆಪಿ ಕೆಳಮಟ್ಟಕ್ಕೆ ಕೊಂಡೊಯ್ದಿದೆ. ಇದು ಅದರ ಸಣ್ಣತನ ಮತ್ತು ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಜಮ್ಮು ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ (Mehbooba Mufti)ಹೆಸರು ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ಮೇಲೆ ಮೋದಿ ಆಕ್ರಮಣ

ದೇಶದ ಒಕ್ಕೂಟ ವ್ಯವಸ್ಥೆಯು ಪ್ರಧಾನಿ ಮೋದಿ ಸರ್ಕಾರದ (Modi Government) ಆಕ್ರಮಣಕ್ಕೆ ಒಳಗಾಗಿದೆ. ಮೋದಿ ಇತಿಹಾಸ ತಿರುಚಿ ದೇಶ ವಿಭಜಿಸುತ್ತಿದ್ದಾರೆ. ಭಾರತ ಇಂಡಿಯಾ ಆಗಿತ್ತು. ಅದು ರಾಜ್ಯಗಳ ಒಕ್ಕೂಟವಾಗಿತ್ತು. ಆದರೀಗ ಅದು ಆಕ್ರಮಣಕ್ಕೆ ಒಳಗಾಗಿದೆ ಎಂದು ಇನ್ಮುಂದೆ ನಾವು ಸಂವಿಧಾನದ 1ನೇ ವಿಧಿಯಲ್ಲಿ ಓದಬೇಕಾಗಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jai Ram Ramesh), ದೇಶದ ಹೆಸರು ಬದಲಾಯಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ರಾಷ್ಟ್ರಪತಿ ಪ್ರಯಾಣಿಸುವ ವಿಮಾನದ ಮೇಲೂ ರಾರಾಜಿಸಿದ ಭಾರತ ಹೆಸರು

ದೇಶದ ಹೆಸರು ಬದಲಿಸುವ ಹಕ್ಕಿಲ್ಲ

ದೇಶದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ದೇಶದ ಹೆಸರಿಗೆ ಸಂಬಂಧಿಸಿದ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಏಕೆ ಇಷ್ಟುಗೊಂದಲಕ್ಕೊಳಗಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಸಂವಿಧಾನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ (Sharad Pawar) ಹೇಳಿದ್ದಾರೆ

ವಿಪಕ್ಷ ಕೂಟದ ಹೆಸರು ಬದಲಾದ್ರೆ?

ವಿಪಕ್ಷಗಳ ಒಕ್ಕೂಟವು ತಮ್ಮ ಮೈತ್ರಿಕೂಟದ ಹೆಸರನ್ನು ‘ಭಾರತ’ ಎಂದು ಬದಲಾಯಿಸಿದರೆ ಬಿಜೆಪಿ ದೇಶದ ಹೆಸರನ್ನೇ ಬದಲಾಯಿಸುತ್ತದೆಯೇ? ಇದು ದೇಶದ್ರೋಹವಾಗಿದೆ. ಇಂಡಿಯಾ ಕೂಟದಿಂದ ಬಿಜೆಪಿ ವಿಚಲಿತವಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು  ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆರೋಪಿಸಿದ್ದಾರೆ.

ಇದ್ದಕ್ಕಿದ್ದಂತೆ ಬದಲಾವಣೆ ಏಕೆ?

ನಾವು ದೇಶವನ್ನು ಭಾರತ ಎಂದು ಕರೆಯುತ್ತೇವೆ, ಇಂಗ್ಲಿಷ್‌ನಲ್ಲಿ ಇಂಡಿಯಾ ಎನ್ನುತ್ತೇವೆ. ಇದರಲ್ಲಿ ಹೊಸತೇನಿದೆ? ಜಗತ್ತು ನಮ್ಮನ್ನು ಇಂಡಿಯಾ ಎಂದೇ ಭಾವಿಸಿದೆ. ದೇಶದ ಹೆಸರನ್ನು ಬದಲಾಯಿಸಲು ಇದ್ದಕ್ಕಿದ್ದಂತೆ ಏನಾಯಿತು? ದೇಶದಲ್ಲಿ ಇತಿಹಾಸವನ್ನು ಮತ್ತೆ ಬರೆಯಲಾಗುತ್ತಿದೆ ಎಂದು ಟಿಎಂಸಿ ನಾಯಕಿ (TMC) ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಹೇಳಿದ್ದಾರೆ.

ಸಂವಿಧಾನ ರಚನೆ ವೇಳೆಯೂ ದೇಶದ ಹೆಸರಿನ ಬಗ್ಗೆ ಆಗಿತ್ತು ಭಾರಿ ಚರ್ಚೆ

ವಿಪಕ್ಷ ಕೂಟಕ್ಕೆ ಹೆದರಿ ಹೆಸರು ಬದಲು

ಬಿಜೆಪಿಯ ಸರ್ವಾಧಿಕಾರತ್ವದ ವಿರುದ್ಧ ಒಗ್ಗೂಡಿದ ವಿಪಕ್ಷಗಳ ‘ಇಂಡಿಯಾ’ ಹೆಸರಿನ ಮೈತ್ರಿಕೂಟಕ್ಕೆ ಹೆದರಿ ಬಿಜೆಪಿಯು ದೇಶದ ‘ಇಂಡಿಯಾ’ ಎಂಬ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಭಾರತವನ್ನು ಬದಲಾಯಿಸುವುದಾಗಿ ಬಿಜೆಪಿ ಹೇಳಿದೆ. ಆದರೆ 9 ವರ್ಷಗಳಲ್ಲಿ ನಮಗೆ ಸಿಕ್ಕಿದ್ದು ಹೆಸರು ಬದಲಾವಣೆಯಷ್ಟೇ. ‘ಇಂಡಿಯಾ’ ಕೂಟ ಬಿಜೆಪಿಯನ್ನು ಓಡಿಸಲಿದೆ ಎಂದು ತಮಿಳುನಾಡು ಸಿಎಂ ಡಿಎಂಕೆ ನಾಯಕ (DMK Leader) ಎಂ.ಕೆ ಸ್ಟಾಲಿನ್‌ (M.K. Stalin)ಹೇಳಿದ್ದಾರೆ.

ಬಿಜೆಪಿಯನ್ನು ಹೊರಹಾಕಲಾಗುತ್ತದೆ

ಇಂಡಿಯಾ ಮೈತ್ರಿಕೂಟದಿಂದ ಬಿಜೆಪಿ ಇಷ್ಟೊಂದು ಗೊಂದಲಕ್ಕೆ ಸಿಲುಕುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಕೂಟ ರಚನೆಯಾದ ಕೆಲವೇ ವಾರದಲ್ಲಿ ‘ರಿಪಬ್ಲಿಕ್‌ ಆಫ್‌ ಇಂಡಿಯಾ’ವನ್ನು ‘ರಿಪಬ್ಲಿಕ್‌ ಆಫ್‌ ಭಾರತ್‌’ ಎಂದು ಬದಲಾಯಿಸಲು ನಿರ್ಣಯಿಸಲಾಗುತ್ತಿದೆ. ದೇಶದ ಜನರು ಬಿಜೆಪಿಯನ್ನು ಆದಷ್ಟು ಬೇಗ ಹೊರಹಾಕುತ್ತಾರೆ ಎಂದು ಆರ್‌ಜೆಪಿ ನಾಯಕ ಮನೋಜ್‌ ಝಾ (Manoj Jha)ಹೇಳಿದ್ದಾರೆ.

ಮೋದಿ ತುಘಲಕ್‌, ಹಿಟ್ಲರ್‌ ಮಿಶ್ರಣ

ಪ್ರತಿಪಕ್ಷದ ಭಯಕ್ಕೆ ಬಿಜೆಪಿ ಇಂಡಿಯಾ ಹೆಸರನ್ನು ಬದಲಿಸುತ್ತಿದೆ. ಪ್ರಧಾನಿ ಮೋದಿ ತುಘಲಕ್‌ ಮತ್ತು ಹಿಟ್ಲರ್‌ ಮಿಶ್ರಣವಾಗಿದ್ದಾರೆ. ನೋಟುಬಂದಿ ಬಳಿಕ ಸರ್ಕಾರ ‘ನಾಮ್‌ಬಂದಿ’ಯತ್ತ ಸಾಗುತ್ತಿದೆ. ನೋಟು ಅಮಾನ್ಯದಿಂದಾದ ಪರಿಣಾಮವೇ ಈಗಲೂ ಆಗಲಿದೆ. ಮೋದಿ ಆಡಳಿತವು ನಿರಂಕುಶಪ್ರಭುತ್ವದ ಪ್ರಯೋಗಾಲಯವಾಗಿದೆ ಎಂದು ಸಿಪಿಐ ನಾಯಕ ದೀಪಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.

ನಮ್ಮ ದೇಶದ ಹೆಸರು ಭಾರತ

ನಮ್ಮ ದೇಶದ ಹೆಸರು ಭಾರತ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವು ಭಾರತದ ಹೆಸರನ್ನೇ ಭಾರತ ಎಂದು ಬದಲಾಯಿಸದಿದ್ದರೆ ಇನ್ನೇನು ಬಳಸುತ್ತೇವೆ? ಮುಂದೊಂದು ದಿನ ಕಾಂಗ್ರೆಸ್‌ ಸನಾತನ ಧರ್ಮವನ್ನು ನಾಶ ಮಾಡಲು ಬಯಸುತ್ತದೆ. ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು ಎಂದು  ಕೇಂದ್ರ ಎಲೆಕ್ಟ್ರಾನಿಕ್ಸ್‌ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಭಾರತ ಸೋಲಿಸಲು ಇಂಡಿಯಾ ಹೆಸರು

ನನ್ನ ನಿರೀಕ್ಷೆ ಈಗ ನಿಜವಾಗಿದೆ ಕಾಂಗ್ರೆಸ್‌ ಪಕ್ಷ ‘ಭಾರತ’ದ ಬಗ್ಗೆ ತೀವ್ರ ದ್ವೇಷವನ್ನು ಹೊಂದಿದೆ. ಭಾರತವನ್ನು ಸೋಲಿಸಬೇಕು ಎಂಬ ಕಾರಣಕ್ಕಾಗಿಯೇ ಉದ್ದೇಶಪೂರ್ವಕವಾಗಿ ತನ್ನ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರನ್ನು ಇಟ್ಟುಕೊಂಡಿದೆ ಎಂದು  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Follow Us:
Download App:
  • android
  • ios