Asianet Suvarna News Asianet Suvarna News

ಪ್ರಧಾನಿ ರಾಷ್ಟ್ರಪತಿ ಪ್ರಯಾಣಿಸುವ ವಿಮಾನದ ಮೇಲೂ ರಾರಾಜಿಸಿದ ಭಾರತ ಹೆಸರು

ದೇಶದ ಹೆಸರನ್ನು ಇನ್ನುಮುಂದೆ ಅಧಿಕೃತವಾಗಿ ‘ಭಾರತ’ ಎಂದು ಮಾತ್ರ ಬಳಸುವಂತೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿದೆ ಎಂಬ ಊಹಾಪೋಹಗಳು ಭಾರೀ ಸಂಚಲನ ಸೃಷ್ಟಿಸಿವೆ. ‘ಇಂಡಿಯಾ’ ಎಂಬ ಪದವನ್ನು ಶಾಶ್ವತವಾಗಿ ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.

The name of India is also emblazoned on the plane in which the Prime Minister and the President travel akb
Author
First Published Sep 6, 2023, 7:39 AM IST

ನವದೆಹಲಿ: ದೇಶದ ಹೆಸರನ್ನು ಇನ್ನುಮುಂದೆ ಅಧಿಕೃತವಾಗಿ ‘ಭಾರತ’ ಎಂದು ಮಾತ್ರ ಬಳಸುವಂತೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿದೆ ಎಂಬ ಊಹಾಪೋಹಗಳು ಭಾರೀ ಸಂಚಲನ ಸೃಷ್ಟಿಸಿವೆ. ‘ಇಂಡಿಯಾ’ ಎಂಬ ಪದವನ್ನು ಶಾಶ್ವತವಾಗಿ ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಕೇಂದ್ರ ಸರ್ಕಾರದ ಎರಡು ಕ್ರಮಗಳಿಂದಾಗಿ ಈ ಊಹಾಪೋಹಗಳು ಹರಡಿವೆ. 1.ಮುಂಬರುವ ಜಿ20 ಶೃಂಗಸಭೆಯ ಔತಣಕೂಟ ಸಂಬಂಧ ಕೇಂದ್ರ ಸರ್ಕಾರ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇದುವರೆಗಿನ ಸಂಪ್ರದಾಯವಾದ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ‘ ಎಂಬುದರ ಬದಲಾಗಿ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ನಮೂದಿಸಲಾಗಿದೆ. 2.ಸೆ.7ರಂದು ಆಸಿಯಾನ್‌ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ನೋಟ್‌ನಲ್ಲಿ ‘ಪ್ರೈಮ್‌ ಮಿನಿಸ್ಟರ್‌ ಆಫ್‌ ಇಂಡಿಯಾ’ ಬದಲು ‘ಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತ್‌’ ಎಂದು ಬರೆಯಲಾಗಿದೆ.

ಇವು ಕೇಂದ್ರ ಸರ್ಕಾರ ಸಂವಿಧಾನದಲ್ಲಿನ ‘ಇಂಡಿಯಾ’ ಎಂಬ ಪದವನ್ನು ಬದಲಾಯಿಸಿ, ಮುಂಬರುವ ದಿನಗಳಲ್ಲಿ ಕೇವಲ ‘ಭಾರತ್‌’ ಎಂದು ಮಾತ್ರವೇ ಬಳಸುವ ಉದ್ದೇಶದ ಸುಳಿವು ಎಂಬ ವಿಶ್ಲೇಷಣೆ ಕೇಳಿಬಂದಿದೆ. ಈ ಕುರಿತು ಕೇಂದ್ರ ಸರ್ಕಾರ (Union govt) ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಆಮಂತ್ರಣ ಪತ್ರಿಕೆಯನ್ನು ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra pradhan) ಅವರು, ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ’ ಎಂದ ಟಿಪ್ಪಣಿ ಬರೆದು ‘ಜೈ ಹೋ’ ಎಂದಿದ್ದಾರೆ. ‘ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಯತ್ನ ಇದು. ಯಾವತ್ತೋ ಆಗಬೇಕಿತ್ತು. ಇಂದು ಕೈಗೂಡಿದೆ’ ಎಂದೂ ಹೇಳಿದ್ದಾರೆ.

ಜೊತೆಗೆ ಹಲವು ಬಿಜೆಪಿ ನಾಯಕರು ಕೂಡಾ ಈ ಬದಲಾವಣೆಯನ್ನು ಮುಕ್ತಕಂಠದಿಂದ ಸ್ವಾಗತಿಸುವ ಮೂಲಕ ಮುಂಬರುವ ದಿನಗಳ ಬದಲಾವಣೆಯ ಮನ್ಸೂಚನೆ ನೀಡಿದ್ದಾರೆ. ಆದರೆ ಇಂಥದ್ದೊಂದು ಸಾಧ್ಯತೆಯನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ.

ಬದಲಾವಣೆಗೆ ಆಗ್ರಹ:

ಇತ್ತೀಚೆಗೆ ವಿಪಕ್ಷಗಳ ಹೊಸ ಮೈತ್ರಿಕೂಟವು ತನ್ನ ಹೆಸರನ್ನು ‘ಇಂಡಿಯಾ’ (INDIA)ಎಂದು ಘೋಷಿಸಿತ್ತು. ನಂತರ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸಿ ಎಂಬ ಕೂಗು ತೀವ್ರಗೊಂಡಿತ್ತು. ಬಿಜೆಪಿ ಸಂಸದ ನರೇಶ ಬನ್ಸಲ್‌ (Naresh Bansal) ಅವರು, ‘ಇಂಡಿಯಾ ಹೆಸರು ವಸಾಹತುಶಾಹಿ ಗುಲಾಮಗಿರಿಯನ್ನು ಸಂಕೇತಿಸುತ್ತದೆ’ ಎಂದು ವಾದಿಸಿ ಸಂವಿಧಾನದಿಂದ ‘ಇಂಡಿಯಾ’ವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ಅವರಿಗೆ ಕೆಲವು ಸಂಸದರ ಬೆಂಬಲ ದೊರಕಿತ್ತು. ಬಳಿಕ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು, ದೇಶಕ್ಕೆ ‘ಇಂಡಿಯಾ’ ಎನ್ನಬೇಡಿ. ‘ಭಾರತ’ ಎನ್ನಿರಿ ಎಂದಿದ್ದರು. ಇದು ದೇಶದ ಹೆಸರು ಬದಲಿಸುವ ಯತ್ನಕ್ಕೆ ಮುನ್ನುಡಿ ಎಂದು ಹೇಳಲಾಗಿದೆ.

ದೇಶಕ್ಕೆ ಭಾರತ, ಇಂಡಿಯಾ ಹೆಸರು ಹೇಗೆ ಬಂತು? ಇದೀಗ ಬದಲಾವಣೆ ಚರ್ಚೆ ಯಾಕ ...

ವಿಶೇಷವೆಂದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಪ್ರಯಾಣಕ್ಕೆ ಬಳಸಲಾಗುವ ವಿಶೇಷ ವಿಮಾನದ (Special Flight) ಮೇಲೆ ‘ಭಾರತ್‌’ ಎಂಬ ಹೆಸರನ್ನು ಚಿತ್ರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ 2022ರ ಆ.15ರಂದು, ಕೆಂಪುಕೋಟೆ ಮೇಲೆ ಭಾಷಣ ಮಾಡಿ 5 ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದರು. ಅವುಗಳಲ್ಲಿ ಒಂದು ಗುಲಾಮಗಿರಿಯ ಪ್ರತಿಯೊಂದು ಜಾಡಿನಿಂದಲೂ ಸ್ವಾತಂತ್ರ್ಯ ಪಡೆಯಬೇಕು ಎಂಬುದಾಗಿತ್ತು. ಇದು ದೇಶದ ಸ್ಥಳೀಯ ಗುರುತನ್ನು ಅಳವಡಿಸಿಕೊಳ್ಳುವ ಸಾಂಕೇತಿಕ ಸೂಚನೆಯಾಗಿತ್ತು ಎಂದು ಹೇಳಲಾಗಿದೆ. 2022ರಲ್ಲೂ ಗುಜರಾತ್‌ ಬಿಜೆಪಿ ಸಂಸದರೊಬ್ಬರು ಇಂಡಿಯಾ ಹೆಸರು ಬದಲಿಸಲು ಆಗ್ರಹಿಸಿದ್ದರು.

ಸಂಸತ್‌ನ ವಿಶೇಷ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ?

ಕೇಂದ್ರ ಸರ್ಕಾರ ಸೆ.18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಅಧಿವೇಶನದ ಕಾರ್ಯಸೂಚಿ ಏನು ಎಂಬುದರ ಬಗ್ಗೆ ಸರ್ಕಾರ ಇದುವರೆಗೂ ಎಲ್ಲೂ ಮಾಹಿತಿ ನೀಡಿಲ್ಲ. ಅದರಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತ ಮಸೂದೆ ಮಂಡನೆಯಾಗಬಹುದು ಎಂಬ ಮಾತುಕೇಳಿಬಂದಿತ್ತು. ಇದೀಗ ಇಂಡಿಯಾ ಹೆಸರನ್ನು ಭಾರತ್‌ ಎಂದು ಬದಲಾಯಿಸುವ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios