Asianet Suvarna News Asianet Suvarna News

ಸಂವಿಧಾನ ರಚನೆ ವೇಳೆಯೂ ದೇಶದ ಹೆಸರಿನ ಬಗ್ಗೆ ಆಗಿತ್ತು ಭಾರಿ ಚರ್ಚೆ

ಸಂವಿಧಾನದ ರಚನೆಯ ಸಮಯದಲ್ಲೂ ಹಲವು ನಾಯಕರು ಭಾರತ ಎಂಬ ಹೆಸರಿಡಲು ಸೂಚನೆ ನೀಡಿದ್ದರು. ಆದರೂ ಇಂಡಿಯಾ ಎಂಬುದಕ್ಕೆ ಬಹುಮತ ಬಂದ ಕಾರಣ ಅದನ್ನೇ ಇಡಲಾಯಿತು.

There was a huge debate about the name of the country even during the constitution writing akb
Author
First Published Sep 6, 2023, 7:14 AM IST

ನವದೆಹಲಿ: ದೇಶದ ಹೆಸರನ್ನು ಭಾರತ ಅಥವಾ ಇಂಡಿಯಾ ಎಂದು ಇಡಬೇಕೇ ಎಂಬುದರ ಕುರಿತಾಗಿ ಸಂವಿಧಾನವನ್ನೂ ಅಳವಡಿಸಿಕೊಳ್ಳುವ ಮೊದಲಿನಿಂದಲೂ ಚರ್ಚೆಗಳು ನಡೆದಿವೆ. ಸಂವಿಧಾನದ ರಚನೆಯ ಸಮಯದಲ್ಲೂ ಹಲವು ನಾಯಕರು ಭಾರತ ಎಂಬ ಹೆಸರಿಡಲು ಸೂಚನೆ ನೀಡಿದ್ದರು. ಆದರೂ ಇಂಡಿಯಾ ಎಂಬುದಕ್ಕೆ ಬಹುಮತ ಬಂದ ಕಾರಣ ಅದನ್ನೇ ಇಡಲಾಯಿತು.

ಸಂವಿಧಾನದ ಕರಡು ತಯಾರಿಸಲು 1947ರ ಆ.29ರಂದು ಡಾ.ಬಿ.ಆರ್‌.ಅಂಬೇಡ್ಕರ್‌ (Dr.B.R Ambedkar) ಅವರಿಂದ ಸಮಿತಿ ರಚನೆ ಮಾಡಲಾಯಿತು. ಕರಡು ತಯಾರಾದ ಬಳಿಕ 1949 ಸೆ.18ರಂದು ನಡೆದ ಮೊದಲ ಸಂಸತ್‌ ಅಧಿವೇಶನದಲ್ಲಿ ಇಂಡಿಯಾ ಬದಲಿಗೆ ಭಾರತ ಎಂಬ ಹೆಸರು ಇಡುವಂತೆ ಬೇಡಿಕೆಗಳನ್ನು ಸಲ್ಲಿಸಲಾಯಿತು. ಮೊದಲ ವಿಧಿಯಲ್ಲಿ ಭಾರತ ಅಥವಾ ಇಂಗ್ಲೀಷ್‌ನಲ್ಲಿ ಇಂಡಿಯಾ ಎಂದು ಬರೆದು, ಅದು ರಾಜ್ಯಗಳ ಒಕ್ಕೂಟ ಎಂದು ನಮೂದಿಸಬೇಕು ಎಂದು ಫಾರ್ವರ್ಡ್‌ ಬ್ಲಾಕ್‌ ನಾಯಕ ಹರಿ ವಿಷ್ಣು ಕಾಮತ್‌ ಬೇಡಿಕೆ ಸಲ್ಲಿಸಿದ್ದರು. ಅಲ್ಲದೇ ಹಿಂದೂಸ್ಥಾನ, ಹಿಂದ್‌ ಮತ್ತು ಭರತಭೂಮಿ ಅಥವಾ ಭರತವರ್ಷ (Bharata varsha)ಎಂಬ ಹೆಸರನ್ನು ಇಡಬಹುದು ಎಂದು ಅವರು ಸೂಚಿಸಿದ್ದರು.

ಇಂಡಿಯಾ ಹೆಸರು ಬೇಡ ಬದಲಿಗೆ ಭಾರತ ಅಥವಾ ಭರತವರ್ಷ ಎಂದು ಹೆಸರಿಡುವಂತೆ ಕಾಂಗ್ರೆಸ್‌ ಸಂಸದ ಹರಿಗೋವಿಂದ್‌ ಪಂತ್‌ ಸೂಚಿಸಿದ್ದರು. ಭಾರತ ಅದನ್ನು ಇಂಡಿಯಾ ಎಂದು ಗುರುತಿಸಲಾಗುತ್ತದೆ ಎಂದು ಬರೆಯಲು ಸೇತ್‌ ಗೋವಿಂದ ದಾಸ್‌ (Seth Govind das) ಹೇಳಿದ್ದರು. ಭಾರತ್‌ ದಟ್‌ ಈಸ್‌ ಇಂಡಿಯಾ ಎಂದು ಬದಲಿಸುವಂತೆ ಸಂಸದ ಕಮಲಾಪತಿ ತ್ರಿಪಾಠಿ ಹೇಳಿದ್ದರು. ಅಂದಿನ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್‌ (Babu Rajendra Prasad) ಅವರು ದೇಶದ ಹೆಸರನ್ನು ಮತಕ್ಕೆ ಹಾಕಿದಾಗ, ಇಂಡಿಯಾ ದಟ್‌ ಈಸ್‌ ಭಾರತ ಎಂಬ ಹೆಸರಿಗೆ ಬಹುಮತ ದೊರೆತ ಕಾರಣ ಅದನ್ನೇ ಅಳವಡಿಸಿಕೊಳ್ಳಲಾಯಿತು.

ದೇಶದ ಹೆಸರನ್ನು 'ಇಂಡಿಯಾ' ಬದಲು ಭಾರತ ಎಂದು ಮರುನಾಮಕರಣ?

ಭಾರತಕ್ಕೇಕೆ 2 ಹೆಸರು?

ದೇಶ ವಿಭಜನೆಯ (India Partition) ಸಮಯದಲ್ಲಿ ದೇಶಕ್ಕೆ ಯಾವ ಹೆಸರು ಇಡಬೇಕೆಂಬುದು ಬಹುಚರ್ಚಿತ ವಿಷಯವಾಗಿತ್ತು. ಕಾರಣ, ದೇಶ ವಿಭಜನೆ ಕೋಮು ಗಲಭೆಗಳಿಗೂ ಕಾರಣವಾಗಿತ್ತು. ಮುಂಬರುವ ವರ್ಷಗಳಲ್ಲಿ ದೇಶದ ಐಕ್ಯತೆ ಮತ್ತು ಸ್ಥಿರತೆ ಬಗ್ಗೆ ಸಾಕಷ್ಟು ಅನುಮಾನಗಳು ಇದ್ದವು. ಇಂಥ ಹೊತ್ತಿನಲ್ಲೇ ದೇಶಕ್ಕೆ ಕೇವಲ ಭಾರತ ಎಂಬ ಒಂದೇ ಹೆಸರನ್ನು ಇಟ್ಟರೆ ಅದು ಮುಸ್ಲಿಮರ ಆಕ್ಷೇಪಕ್ಕೆ ಕಾರಣವಾಗಬಹುದು. ಕಾರಣ ಭಾರತ್‌ (Bharat) ಎಂಬ ಪದ ಹೆಚ್ಚು ಹಿಂದೂ ಆಗಿದೆ. ಹೀಗಾಗಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ತೊಡೆದು ಹಾಕಲು ಇಂಡಿಯಾ (India) ಮತ್ತು ಭಾರತ್‌ ಎಂಬ ಎರಡೂ ಹೆಸರು ಇಟ್ಟಿರಬಹುದು ಎಂದು ಪತ್ರಕರ್ತ ವಿ.ಸುಂದರಂ (V.sundram) ಹೇಳಿದ್ದರು ಎಂದು ಭಾರತಕ್ಕೇಕೆ ಎರಡು ಹೆಸರು ಎಂಬ ಎಂಬ ಪುಸ್ತಕದಲ್ಲಿ ಬ್ರಿಟನ್‌ ತಜ್ಞೆ ಕ್ಯಾಥೆರಿನ್‌ ಕ್ಲೆಮೆಂಟಿನ್‌ ಉಲ್ಲೇಖಿಸಿದ್ದಾರೆ.

ಅತೀ ಹೆಚ್ಚು ಹೆಸರಿನಿಂದ ಗುರುತಿಸಿಕೊಂಡಿರುವ ಏಕೈಕ ದೇಶ ಭಾರತ, ಇಲ್ಲಿದೆ ಇಂಡಿಯಾದ 7 ಹೆಸರು!


ದೇಶದ ಮೊದಲ ಹೆಸರು ಭಾರತ

ದೇಶದ ಮೊದಲ ಹೆಸರು ಭಾರತ, ಅದನ್ನು ಹಿಂದುಸ್ಥಾನ ಎಂದೂ ಕರೆಯಲಾಗುತ್ತದೆ. ಬ್ರಿಟಿಷರು ಸಿಂಧು ನಾಗರಿಕತೆಯನ್ನು ಇಂಡಸ್‌ ನಾಗರಿಕತೆ ಎಂದು, ದೇಶವನ್ನು ತಮ್ಮ ಆಡಳಿತಕ್ಕೆಂದು ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಅಂದಿನಿಂದಲೂ ಅದೇ ರೂಡಿಯಾಗಿತ್ತು. ನಾವು ಭಾರತದಲ್ಲಿರುವವರು ಭಾರತೀಯರೆಂದು ಸಂಬೋಧಿಸಿಕೊಳ್ಳುತ್ತೇವೆ, ಅದರಲ್ಲಿ ತಪ್ಪಿಲ್ಲ ಎಂದು ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ (Sumitra Mahajan) ಈ ಹೆಸರು ಬದಲಾವಣೆಯ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ


ಭಾರತ್‌ ಜೋಡೋ ಯಾತ್ರೆ ಏಕೆ?

ಕಾಂಗ್ರೆಸ್‌ಗೆ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ ತೊಂದರೆ ಏಕೆ ? ಅವರೇಕೆ ರಾಜಕೀಯ ಯಾತ್ರೆಗೆ ‘ಭಾರತ್‌ ಜೋಡೋ’ ಎಂದು ಹೆಸರಿಸುವವರು ಭಾರತ್‌ ಮಾತಾ ಕೀ ಜೈ ಎಂದರೆ ಕೋಪಗೊಳ್ಳುವುದೇಕೆ ? ಕಾಂಗ್ರೆಸ್‌ ದೇಶ ಹಾಗೂ ದೇಶದ ಸಂವಿಧಾನವನ್ನು ಗೌರವಿಸುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೆಸರು ಬದಲಾವಣೆಯನ್ನು ವಿರೋಧಿಸಿದ ಕಾಂಗ್ರೆಸ್‌ಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ತಿರುಗೇಟು ನೀಡಿದ್ದಾರೆ.

Follow Us:
Download App:
  • android
  • ios