ನವದೆಹಲಿ(ನ.23): 2019ರ ಲೋಕಸಭಾ ಚುನಾವಣೆಯ ಸೋಲಿನ ಗುಂಗಿನಲ್ಲೇ ವಿಪಕ್ಷಗಳು ಮುಳುಗಿದ್ದರೆ, ಇತ್ತ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ 2024ರ ಲೋಕಸಭಾ ಚುನಾವಣೆ ಗೆಲ್ಲಲು ಈಗಲೇ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ 120 ದಿನಗಳ ಭಾರತ ಯಾತ್ರೆಯನ್ನು ಇದೇ ವರ್ಷದ ಡಿಸೆಂಬರ್‌ನಿಂದ ಆರಂಭಿಸಲು ಬಿಜೆಪಿ ಅಧ್ಯಕ್ಷ ಜಗತ್‌ಪ್ರಕಾಶ್‌ ನಡ್ಡಾ ನಿರ್ಧರಿಸಿದ್ದಾರೆ.

ಈ ಮೂಲಕ ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವನ್ನು ಮುಂದುವರೆಸಲು ಭಾರತೀಯ ಜನತಾ ಪಕ್ಷ ಭರ್ಜರಿ ಯೋಜನೆ ರೂಪಿಸಿರುವ ವಿಷಯ ಹೊರಬಿದ್ದಿದೆ.

ಚುನಾವಣೆ ಪ್ರಚಾರದ ವೇಳೆ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಅಭ್ಯರ್ಥಿ

ಈ ವಿಷಯವನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ ಕರ್ನಾಟಕ ಬಿಜೆಪಿ ನೂತನ ಪ್ರಭಾರಿಯೂ ಆದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ‘ಡಿಸೆಂಬರ್‌ ಮೊದಲ ವಾರ ಉತ್ತರಾಖಂಡದಿಂದ ಯಾತ್ರೆ ಆರಂಭವಾಗಲಿದೆ’ ಎಂದು ತಿಳಿಸಿದರು. ಬಹುಶಃ ಡಿಸೆಂಬರ್‌ 5ರ ದಿನಾಂಕವು ಅಂತಿಮವಾಗುವ ಸಾಧ್ಯತೆ ಇದೆ.

ಪ್ರತಿ ರಾಜ್ಯಕ್ಕೂ ನಡ್ಡಾ ಭೇಟಿ ನೀಡಲಿದ್ದಾರೆ. ಎಲ್ಲ ಬೂತ್‌ ಘಟಕಗಳ ಜತೆ ವರ್ಚುವಲ್‌ ಸಭೆ ನಡೆಸಲಿದ್ದಾರೆ. ಹಿರಿಯ ನಾಯಕರಷ್ಟೇ ಅಲ್ಲ, ಪ್ರತಿ ಶಾಸಕ ಹಾಗೂ ಸಂಸದರು, ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಕೆಲವು ಬೂತ್‌ಗಳಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಜತೆಗೂ ಸಂವಾದ ನಡೆಸಲಿದ್ದಾರೆ ಎಂದು ಸಿಂಗ್‌ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಸಂಬಂಧ ರಣನೀತಿ ರೂಪಿಸಲಾಗುವುದು. 2019ರಲ್ಲಿ ಎಲ್ಲಿ ಪಕ್ಷ ಜಯಿಸಿಲ್ಲವೋ ಅದರ ಮೇಲೆ ಗಮನ ಕೇಂದ್ರೀಕರಿಸಲಾಗವುದು. 2021ರಲ್ಲಿ ಪಶ್ಸಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಅಸ್ಸಾಂನಲ್ಲಿ ಚುನಾವಣೆಗಳು ನಡೆಯಲಿದ್ದು, ಚುನಾವಣಾ ಸಿದ್ಧತೆಗಳನ್ನು ಅಧ್ಯಕ್ಷರು ಪರಿಶೀಲಿಸಿದ್ದಾರೆ ಎಂದು ಅವರು ವಿವರಿಸಿದರು.

'ಗೋವಾದಲ್ಲಿ ರಜಾ ಎಂಜಾಯ್ ಮಾಡ್ತಿದ್ರೆ ಕಾಂಗ್ರೆಸ್ ಹೇಗೆ ಗೆಲ್ಲುತ್ತದೆ'

ದೊಡ್ಡ ರಾಜ್ಯಗಳಲ್ಲಿ ತಲಾ 3 ದಿನ ಹಾಗೂ ಉಳಿದ ರಾಜ್ಯಗಳಲ್ಲಿ ಅವರು 2 ದಿನ ತಂಗಲಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳು ತಮ್ಮ ಕೆಲಸಗಳು ಹಾಗೂ ಕೇಂದ್ರೀಯ ಯೋಜನೆಗಳ ಜಾರಿಯ ವಿವರವನ್ನು ನಡ್ಡಾ ಅವರಿಗೆ ನೀಡಲಿವೆ ಎಂದರು.

ಇದೇ ವೇಳೆ ಬಿಜೆಪಿಯ ಮಿತ್ರಪಕ್ಷಗಳ ಮುಖಂಡರನ್ನೂ ನಡ್ಡಾ ಭೇಟಿ ಮಾಡಲಿದ್ದಾರೆ. ಕೆಲವೆಡೆ ಸಾರ್ವಜನಿಕ ಜಾಗೃತಿ ರಾರ‍ಯಲಿ ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರೆ ಎಂದು ಪ್ರವಾಸದ ಬಗ್ಗೆ ಅರುಣ್‌ ಸಿಂಗ್‌ ಮಾಹಿತಿ ನೀಡಿದರು.