ತನ್ನನ್ನು ಹೊರಗಿನವಳು ಎಂದ ಬಿಜೆಪಿಗೆ ಮಮತಾ ತಿರುಗೇಟು| ಮೋದಿ, ಅಧಿಕಾರಿಗೆ ದೀದಿ ತರಾಟೆ| ನಂದಿಗ್ರಾಮದಲ್ಲಿ ಮಮತಾ ಭರ್ಜರಿ ಪ್ರಚಾರ

ನಂದಿಗ್ರಾಮ (ಮಾ.10): ಭೂ ಸ್ವಾಧೀನ ವಿರೋಧಿ ಚಳವಳಿಯ ಮೂಲಕ 2011ರಲ್ಲಿ ತಮಗೆ ಅಧಿಕಾರದ ಗದ್ದುಗೆ ಹಿಡಿಯಲು ವೇದಿಕೆ ಒದಗಿಸಿಕೊಟ್ಟನಂದಿ ಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ತಮ್ಮನ್ನು ಹೊರಗಿನವಳು ಎಂದು ಕರೆದಿರುವ ಬಿಜೆಪಿಗೆ ತಿರುಗೇಟು ನೀಡಿರುವ ಮಮತಾ, ಗುಜರಾತಿನಿಂದ ಬಂದವರು ಹೊರಗಿನವರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಚಂಡಿ ಪಾಠ ಪಠಿಸಿ, ‘ನಾನೂ ಬ್ರಾಹ್ಮಣಳು’ ಎಂದ ದೀದಿ!

ಬೂತ್‌ ಮಟ್ಟದ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನ್ನನ್ನು ಹೊರಗಿನವಳು ಎಂದು ಹೇಳುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ. ನಾನು ಪಕ್ಕದ ಜಿಲ್ಲೆ ಬೀರ್‌ಭೂಮ್‌ನಲ್ಲಿ ಹುಟ್ಟಿಬೆಳೆದಿದ್ದೇನೆ. ನನ್ನನ್ನು ಹೊರಗಿನವ ಎಂದು ಕರೆದ ವ್ಯಕ್ತಿ ಕೂಡ ಇಲ್ಲಿ ಜನಿಸಿಲ್ಲ. ಆದರೆ, ನಾನು ಇಂದು ಹೊರಗಿನವನಾಗಿದ್ದೇನೆ. ಗುಜರಾತಿನಿಂದ ಬಂದವರು ಒಳಗಿನವರಾಗಿದ್ದಾರೆ. ಗುಜರಾತಿನಿಂದ ಬಂದವರಿಗೆ ಜನರು ತಮ್ಮ ಆತ್ಮವನ್ನು ಮಾರಿಕೊಳ್ಳುವ ಮೂಲಕ ನಂದಿಗ್ರಾಮ ಹೋರಾಟಕ್ಕೆ ಅವಮಾನ ಮಾಡಿದ್ದಾರೆ’ ಎಂದು ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿಗೆ ಟಾಂಗ್‌ ನೀಡಿದರು.

ಮೋದಿ ಹಾದಿ ಹಿಡಿದ್ರಾ ಮಮತಾ? ನಂದಿಗ್ರಾಮದಲ್ಲಿ ಚಾಯ್‌ವಾಲಿ ಆದ ದೀದಿ!

ಇಂದು ಮಮತಾ ನಾಮಪತ್ರ:

ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ಹಿಡಿತದಲ್ಲಿರುವ ಕ್ಷೇತ್ರವಾಗಿದೆ. ಸಾಂಪ್ರದಾಯಿಕ ಭಬಾನಿಪುರ್‌ ವಿಧಾನಸಭಾ ಕ್ಷೇತ್ರದ ಬದಲು ಮಮತಾ ನಂದಿಗ್ರಾಮದಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ನಂದಿಗ್ರಾಮ ಈ ಬಾರಿ ಮಮತಾ ಮತ್ತು ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.