Asianet Suvarna News Asianet Suvarna News

ಕಾಶ್ಮೀರ ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ: ಕೇಜ್ರಿವಾಲ್‌ ವಾಗ್ದಾಳಿ

* ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳಿಂದ ಮನೆ ಬಿಟ್ಟು ಹೋಗುತ್ತಿರುವ ಕಾಶ್ಮೀರಿ ಪಂಡಿತರು

* ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಆಗುತ್ತಿಲ್ಲ

* ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ವಾಗ್ದಾಳಿ

BJP Can Not Handle Kashmir Kashmiri Pandit forced to leave valley says Arvind Kejriwal pod
Author
Bangalore, First Published Jun 6, 2022, 7:59 AM IST | Last Updated Jun 6, 2022, 9:16 AM IST

ನವದೆಹಲಿ(ಜೂ.06): ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳು, ಕಾಶ್ಮೀರಿ ಪಂಡಿತರು ಬಲವಂತವಾಗಿ ಮನೆ ತೊರೆಯುವಂತೆ ಮಾಡುತ್ತಿವೆ. ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ದೆಹಲಿ ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಜಂತರ್‌ಮಂತರ್‌ನಲ್ಲಿ ನಡೆದ ಜನಾಕ್ರೋಶ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂತಹ ಕ್ಷುಲ್ಲಕ ಕೆಲಸಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತೇನೆ. ಕಾಶ್ಮೀರ ನಮ್ಮದಾಗಿತ್ತು. ಮುಂದೆಯೂ ನಮ್ಮದೇ ಆಗಿರುತ್ತದೆ. ಭಾರತ ಮನಸ್ಸು ಮಾಡಿದರೆ, ಪಾಕಿಸ್ತಾನ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾದ ಹಿಂದುಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಲೇ ಇವೆ. ಇದು ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸುವಲ್ಲಿ ಬಿಜೆಪಿ ಸೋತಿದೆ’ಎಂದು ಅವರು ವಾಗ್ದಾಳಿ ನಡೆಸಿದರು.

ಮಾದಕ ವ್ಯಸನಿಯನ್ನು ಹೊಡೆದು ಕೊಂದ ಸಹೋದರರು: ವಿಡಿಯೋ ವೈರಲ್

‘ಕಾಶ್ಮೀರಿ ಪಂಡಿತರನ್ನು ರಕ್ಷಿಸಲು ಬಿಜೆಪಿಯ ಬಳಿ ಯಾವುದೇ ಯೋಜನೆಗಳಿಲ್ಲ. ಆದರೂ ಸುಮ್ಮನೆ ಸಭೆಗಳನ್ನು ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಒಂದು ಹತ್ಯೆಯಾದರೆ, ಉನ್ನತ ಮಟ್ಟದ ಸಭೆ ಮಾಡುತ್ತಾರೆ. ಆದರೆ ಯೋಜನೆ ಏನು ಎಂಬುದೇ ತಿಳಿಯುವುದಿಲ್ಲ. ಕೇಂದ್ರದ ರಕ್ಷಣಾ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಪಂಡಿತರು ಕಾಶ್ಮೀರದಿಂದ ಹೊರಗೆ ಕೆಲಸ ಮಾಡುವಂತಿಲ್ಲ ಎಂಬ ಒಪ್ಪಂದವನ್ನು ರದ್ದು ಮಾಡಬೇಕು’ ಎಂದು ಅವರು ಹೇಳಿದರು.

ಕಾಶ್ಮೀರದ ಹಿಂದು ಶಿಕ್ಷಕರು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ

ಶ್ರೀನಗರ: ಕಾಶ್ಮೀರದಲ್ಲಿ ಹಿಂದುಗಳನ್ನು ಗುರುತಿಸಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದ ಬೆನ್ನಲ್ಲೇ ಸರ್ಕಾರವು ಕಣಿವೆಯ ವಿವಿಧ ಜಿಲ್ಲೆಗಳಲ್ಲಿದ್ದ 177 ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಶಿಕ್ಷಕರನ್ನು ಹೆಚ್ಚಿನ ಸೇನೆಯ ಭದ್ರತೆಯಲ್ಲಿರುವ ರಾಜಧಾನಿ ಶ್ರೀನಗರಕ್ಕೆ ವರ್ಗಾವಣೆ ಮಾಡಿದೆ.

ಕಾಶ್ಮೀರದಲ್ಲಿ ಹಿಂದುಗಳ ಸುರಕ್ಷತೆಗೆ ಸಂಬಂಧಿಸಿದಂತೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.

177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಕಣಿವೆ ರಾಜ್ಯದಲ್ಲೇ ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಮಾಡಿದ ಸರ್ಕಾರ!

ಪ್ರಧಾನ ಮಂತ್ರಿ ವಿಶೇಷ ಪ್ಯಾಕೇಜ್‌ 2012ರ ಅಡಿಯಲ್ಲಿ ಹಲವಾರು ಕಾಶ್ಮೀರಿ ಪಂಡಿತರು ಉದ್ಯೋಗ ಪಡೆದುಕೊಂಡಿದ್ದರು. ಆದರೆ ಸರ್ಕಾರಿ ಗುಮಾಸ್ತ ರಾಹುಲ್‌ ಭಟ್‌ನನ್ನು ಉಗ್ರರು ಗುಂಡು ಹೊಡೆದು ಹತ್ಯೆ ಮಾಡಿದ ನಂತರ ಕಣಿವೆ ರಾಜ್ಯದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 6000 ಹಿಂದು ಸಿಬ್ಬಂದಿ ಕಾಶ್ಮೀರದಿಂದ ಹೊರಗಡೆ ತಮ್ಮನ್ನು ವರ್ಗಾಯಿಸಬೇಕು ಎಂದು ಕೋರಿ ಭಾರೀ ಪ್ರತಿಭಟನೆ ನಡೆಸಿದ್ದರು. ಪಂಡಿತರ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ಶುಕ್ರವಾರ ಜಮ್ಮುವಿನ ಬದಲಾಗಿ ಕಾಶ್ಮೀರದಲ್ಲೇ ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುವುದಾಗಿ ಘೋಷಣೆ ಮಾಡಿತ್ತು.

ವರ್ಗಾವಣೆ ಪಟ್ಟಿಸೋರಿಕೆ:

ಈ ನಡುವೆ ಶಿಕ್ಷಕರ ವರ್ಗಾವಣೆಯ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದರ ವಿರುದ್ಧ ಬಿಜೆಪಿ ಶನಿವಾರ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಪಂಡಿತರ ವರ್ಗಾವಣೆ ಪಟ್ಟಿಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು ಭದ್ರತಾ ಲೋಪವಾಗಿದೆ. ಇದರಿಂದ ಯಾವ ವ್ಯಕ್ತಿಯನ್ನು ಎಲ್ಲಿ ವರ್ಗಾಯಿಸಲಾಗಿದೆ ಎಂದು ಉಗ್ರರಿಗೆ ಮಾಹಿತಿ ಸಿಗುತ್ತದೆ. ಹೀಗಾಗಿ ವರ್ಗಾವಣೆ ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Latest Videos
Follow Us:
Download App:
  • android
  • ios