177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಕಣಿವೆ ರಾಜ್ಯದಲ್ಲೇ ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಮಾಡಿದ ಸರ್ಕಾರ!
ಶ್ರೀನಗರದಲ್ಲಿ ನಿಯೋಜನೆಗೊಂಡಿರುವ ಕಾಶ್ಮೀರಿ ಪಂಡಿತರಿಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಶ್ರೀನಗರದಲ್ಲಿ, ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾದ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದು, ಅವರನ್ನು ಕಾಶ್ಮೀರದಲ್ಲಿಯೇ ಇರುವ ಜಿಲ್ಲಾ ಕೇಂದ್ರದಲ್ಲಿ ನಿಜಿಯೋಜನೆ ಮಾಡಲಾಗಿದೆ.
ಶ್ರೀನಗರ (ಜೂನ್ 4): ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir ) ಉದ್ದೇಶಿತ ಹತ್ಯೆಯ (target killing) ನಡುವೆ, ಕಾಶ್ಮೀರಿ ಪಂಡಿತರ ಭದ್ರತೆಗಾಗಿ ಸ್ಥಳೀಯ ಸರ್ಕಾರವು ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಶ್ರೀನಗರದ ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾದ ಕಾಶ್ಮೀರಿ ಪಂಡಿತರನ್ನು (Kashmiri Pandit) ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಶ್ರೀನಗರದ ಮುಖ್ಯ ಶಿಕ್ಷಣಾಧಿಕಾರಿ ಅವರು ನೀಡಿರುವ ಪತ್ರದಲ್ಲಿ ಈ ಮಾಹಿತಿ ನೀಡಲಾಗಿದೆ.
ಕಾಶ್ಮೀರದಲ್ಲಿ ಪಂಡಿತರ ಮೇಲೆ ಹಾಗೂ ಹಿಂದೂಗಳ ಮೇಲೆ ಉದ್ದೇಶಿತ ಹತ್ಯೆ ಆಗುತ್ತಿದ್ದ ಹಿನ್ನಲೆಯಲ್ಲಿಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah ) ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಕೇಂದ್ರ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕ ಕುಲದೀಪ್ ಸಿಂಗ್ ಹಾಗೂ ಗಡಿ ಭದ್ರತಾ ಪಡೆಯ ಮುಖ್ಯಸ್ಥ ಪಂಕಜ್ ಸಿಂಗ್ ಕೂಡ ಸಭೆಯಲ್ಲಿ ಹಾಜರಿದ್ದರು.
ಕಣಿವೆ ರಾಜ್ಯದಲ್ಲಿ ಕಾಶ್ಮೀರದಲ್ಲಿ ಭೀಕರ ಹತ್ಯೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ತಮಗೆ ಭದ್ರತೆ ನೀಡುತ್ತಿದೆ. ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಿತ್ತಿದೆ ಎನ್ನುವ ವಿಶ್ವಾಸ ಕಾಶ್ಮೀರಿ ಪಂಡಿತರು ಹಾಗೂ ಹಿಂದೂಗಳಿಗೆ ಅನಿಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ನಿರ್ಧಾರ ಮಾಡಿದೆ. ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ ವಿಚಾರದಲ್ಲಿ ಈಗಾಗಲೇ ಸ್ಥಳೀಯವಾಗಿ ಸಾಕಷ್ಟು ಆಕ್ರೋಶ ಮನೆ ಮಾಡಿದೆ. ಇತ್ತೀಚೆಗೆ ಭಯೋತ್ಪಾದಕರು ಬ್ಯಾಂಕ್ ಗೆ ನುಗ್ಗಿ ರಾಜಸ್ಥಾನ ಮೂಲದ ಯುವಕನ ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ರಜಿನಿ ಭಲ್ಲಾ ಎನ್ನುವ ಶಿಕ್ಷಕಿಯ ಕೊಲೆಯನ್ನೂ ಮಾಡಿದ್ದರು.
ಕಾಶ್ಮೀರಿ ಪಂಡಿತರ ಹತ್ಯೆಯ ಕ್ರಮವಾಗಿ ತಕ್ಷಣವೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ನೂರಾರು ಸರ್ಕಾರಿ ನೌಕರರು ಜಮ್ಮು ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿದರು. ಪಂಡಿತರು ಕಣಿವೆಯನ್ನು ಬೇಗ ತೊರೆಯಬೇಕು. ಬೆದರಿಕೆಗಳ ನಡುವೆಯೂ ಭಯೋತ್ಪಾದಕರು ಅನೇಕ ಕಾಶ್ಮೀರಿ ಪಂಡಿತರನ್ನು ಕೊಂದಿದ್ದಾರೆ. ಅದಲ್ಲದೆ, ಸರ್ಕಾರ ಕೂಡ ಕಾಶ್ಮೀರಿ ಪಂಡಿತರು ಕೆಲಸ ಮಾಡಲು ಸುರಕ್ಷಿತವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕಾಶ್ಮೀರದಲ್ಲಿ ಅಂಥದ್ದೊಂದು ಸುರಕ್ಷಿತ ವಾತಾವರಣ ನಿರ್ಮಾಣವಾಗದೇ ಇದ್ದಲ್ಲಿ, ಯಾರೂ ಕೂಡ ಅಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರಿಗೆ ನಿರಂತರವಾಗೊ ಭಯೋತ್ಪಾದಕ ಸಂಘಟನೆಗಳಿಂದ ಬೆದಿರಿಕೆಗಳು ಬರುತ್ತಿವೆ. ಆದಷ್ಟು ಶೀಘ್ರವಾಗಿ ಕಣಿವೆ ರಾಜ್ಯವನ್ನು ತೊರೆಯಿರಿ ಎನ್ನುವಂಥ ಬೆದರಿಕೆಗಳು ಪಂಡಿತರಿಗೆ ಸಾಮಾನ್ಯವಾಗಿದೆ. ಈ ಬೆದರಿಕೆಗಳ ನಡುವೆಯೇ ಕೆಲವೊಂದಿಷ್ಟು ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಜೂನ್ 2 ರಂದು ಭಯೋತ್ಪಾದಕರು ಕುಲ್ಗಾಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ರಾಜಸ್ಥಾನದ ಹನುಮಾನಗಢದ ನಿವಾಸಿ ವಿಜಯ್ ಕುಮಾರ್ ಸಾವಿಗೀಡಾಗಿದ್ದರು. ವಿಜಯ್ ಕುಮಾರ್ ಅವರು ಕುಲ್ಗಾಮ್ ನ ಮೋಹನ್ ಪುರಾದ ದೆಹತಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದರು. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿವೆ. ವಿಜಯ್ ಕುಮಾರ್ ಅವರ ತಂದೆ ಮಗನ ಬಗ್ಗೆ ಮಾತನಾಡಿದ್ದು, ಆತ ವರ್ಗಾವಣೆಗಾಗಿ ಬ್ಯಾಂಕ್ ಪಿಒ ಅನ್ನು ಸಿದ್ಧಪಡಿಸುತ್ತಿದ್ದ ಎಂದು ಹೇಳಿದ್ದರು. ಇದನ್ನು ಪಾಸ್ ಮಾಡಿದರೆ ಶಾಖಾ ವ್ಯವಸ್ಥಾಪಕನಾಗಬಹುದು ಎಂದು ಅಂದುಕೊಂಡಿದ್ದ. ಆದರೆ, ಆತನ ಭವಿಷ್ಯದ ಬಗ್ಗೆ ದೇವರು ಬೇರೆಯದನ್ನೇ ನಿರ್ಧಾರ ಮಾಡಿದ್ದ ಎಂದಿದ್ದಾರೆ.
Terror Attack ಕಣಿವೆ ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಕಾಶ್ಮೀರ್ ಫೈಲ್ಸ್ ಚಿತ್ರ ಕಾರಣ, ವಿವಾದ ಸೃಷ್ಟಿಸಿದ ಮಾಜಿ ಸಿಎಂ!
ಮೇ 31 ರಂದು ಕುಲ್ಗಾಮ್‌ನಲ್ಲಿ ಮಹಿಳಾ ಶಿಕ್ಷಕಿ ರಜನಿ ಭಲ್ಲಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಆಕೆ ಸಾಂಬಾ ನಿವಾಸಿಯಾಗಿದ್ದಳು. ಅವರನ್ನು ಕುಲ್ಗಾಮ್‌ನ ಗೋಪಾಲ್‌ಪೋರಾದಲ್ಲಿ ಹತ್ಯೆ ಮಾಡಲಾಗಿದೆ. ರಜನಿ ಗೋಪಾಲ್‌ಪೋರಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಗುಂಡಿನ ದಾಳಿಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ.
ಕಾಶ್ಮೀರ ಹಿಂದುಗಳ ಸರಣಿ ಹತ್ಯೆ,ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ್ತ ಮಟ್ಟದ ಭದ್ರತಾ ಸಭೆ!
ಮೇ 12 ರಂದು ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಭಯೋತ್ಪಾದಕರು ಕಂದಾಯ ಇಲಾಖೆಯ ಅಧಿಕಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತಹಶೀಲ್ದಾರ್ ಕಚೇರಿಯನ್ನು ಪ್ರವೇಶಿಸಿದ ಭಯೋತ್ಪಾದಕರು ರಾಹುಲ್ ಭಟ್ ಎಂಬ ಅಧಿಕಾರಿಯನ್ನು ಗುರಿಯಾಗಿಸಿಕೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಸಾವನ್ನಪ್ಪಿದ್ದರು. ಕಾಶ್ಮೀರಿ ಪಂಡಿತ್ ರಾಹುಲ್ ಬಹಳ ಕಾಲ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದರು.