Asianet Suvarna News Asianet Suvarna News

ಪೊಲೀಸರು ಕಳುಹಿಸಿದ ಡಿಜಿಟಲ್ ಚಲನ್‌ ನೋಡಿ ಬೈಕ್ ಸವಾರ ಫುಲ್ ಖುಷ್...!

ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ಆತನ ಫೋಟೋ ಸಮೇತ ಪೊಲೀಸರು ದಂಡ ಪಾವತಿ ಮಾಡುವಂತೆ ನೋಟೀಸ್ ಕಳುಹಿಸಿದ್ದಾರೆ. ನೋಟೀಸ್ ನೋಡಿ ಸವಾರ ಫುಲ್ ಖುಷ್ ಆಗಿದ್ದಾನೆ. 

Biker full happy after watching digital challan which was sent by pune police for non helmet ride, reason is here akb
Author
First Published Dec 9, 2022, 3:30 PM IST

ಪುಣೆ: ಸಂಚಾರಿ ನಿಯಮವನ್ನು ಪಾಲಿಸುವ ಸಲುವಾಗಿ ಬಹುತೇಕ ಪ್ರಮುಖ ನಗರಗಳಲ್ಲಿ ಸಂಚಾರಿ ಪೊಲೀಸರು ಇರುತ್ತಾರೆ. ಆದರೆ ದಿನ ನಿತ್ಯ ಕೋಟ್ಯಾಂತರ ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸೊಬ್ಬರಿಂದ ಸಂಚಾರಿ ನಿಯಮದ ಮೇಲುಸ್ತುವಾರಿ ವಹಿಸಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಸಿಬ್ಬಂದಿಯ ಕೊರತೆಯೂ ಇರುವುದರಿಂದ ಪೊಲೀಸ್ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ಅಲ್ಲಲ್ಲಿ ಅಧುನಿಕ ತಂತ್ರಜ್ಞಾನ ಆಧರಿತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆದರೆ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡರು ಸಂಚಾರಿ ನಿಯಮ ಉಲ್ಲಂಘಿಸುವವರು ಈ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದು. ಪೊಲೀಸರ ಕಣ್ಣು ತಪ್ಪಿಸಿ ಅಬ್ಬ ಸದ್ಯ ಎಸ್ಕೇಪ್ ಆದೇ ಅಂತ ನಿಟ್ಟುಸಿರು ಬಿಡುವ ವಾಹನ ಸವಾರರ ನಿವಾಸಕ್ಕೆ ಸಂಚಾರ ನಿಯಮ ಉಲ್ಲಂಘನೆಯ ನೋಟೀಸ್ ತಲುಪುತ್ತದೆ. ಆದರೆ ಇಷ್ಟೆಲ್ಲಾ ಪುರಾಣ ಏಕೆ ಅಂತೀರಾ ಮುಂದೆ ಓದಿ

ಇಲ್ಲೊಬ್ಬ ಹೆಲ್ಮೆಟ್ (Helmet) ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ಆತನ ಫೋಟೋ ಸಮೇತ ಪೊಲೀಸರು ದಂಡ ಪಾವತಿ ಮಾಡುವಂತೆ ನೋಟೀಸ್ ಕಳುಹಿಸಿದ್ದಾರೆ. ದಂಡದ ಜೊತೆಯೇ ಸಾಕ್ಷ್ಯ ಎಂಬಂತೆ ಆತ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ (Biker) ಮಾಡುತ್ತಿರುವ ಫೋಟೋವನ್ನು ಕೂಡ ಚಲನ್ ಜೊತೆಯೇ ಕಳುಹಿಸಿದ್ದಾರೆ. ಪೊಲೀಸರ ಈ ಫೋಟೋ ಇರುವ ಡಿಜಿಟಲ್ ಚಲನ್ (Digital chalan) ನೋಡಿ ಬೈಕ್ ಸವಾರ ಫುಲ್ ಖುಷಿಯಾಗಿದ್ದಾನೆ. ಅದಕ್ಕೆ ಕಾರಣವಾಗಿರುವುದು ಫೋಟೋ ಕ್ವಾಲಿಟಿ.

ಸಿಸಿಟಿವಿ (CCTV) ತೆಗೆದಿರುವ ಈ ಫೋಟೋದಲ್ಲಿ ಆತ ಹೀರೋನಂತೆ ಕಾಣಿಸುತ್ತಿದ್ದು, ಇದನ್ನು ಟ್ವಿಟ್ಟರ್‌ನಲ್ಲಿ(Twitter) ಸ್ವತಃ ಆ ಯುವಕನೇ ಶೇರ್ ಮಾಡಿಕೊಂಡಿದ್ದಾರೆ. ಸ್ವತಃ ಬೈಕ್ ಸವಾರ ಮೆಲ್ವಿನ್ ಚೆರಿಯನ್ (Melvin Cherian) ಎಂಬುವವರು ಈ ವಿಚಾರವನ್ನು ಟ್ವಿಟ್ ಮಾಡಿದ್ದು, ಪುಣೆ ಸಿಟಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ನಾನು ಈ ಫೋಟೋದಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೇನೆ, ಧನ್ಯವಾದ ಪುಣೆ ಸಿಟಿ ಪೊಲೀಸ್, ನಾನು ಚಲನ್ (Challan) ಪಾವತಿ ಮಾಡುತ್ತೇನೆ ಎಂದು ಆ ಯುವಕ ಬರೆದುಕೊಂಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಪುಣೆ ಸಿಟಿ ಪೊಲೀಸರು, 'ಖಂಡಿತ, ನೀವು ಧರಿಸಿರುವ ಕಪ್ಪು ಬಣ್ಣದ ಜಾಕೆಟ್‌ಗೆ (Jacket), ಕಪ್ಪು ಬಣ್ಣದ ಹೆಲ್ಮೆಟ್ ಸಖತ್ ಆಗಿ ಮ್ಯಾಚ್ ಆಗಬಹುದು ದಯವಿಟ್ಟು ಹೆಲ್ಮೆಟ್ ಧರಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮೆಲ್ವಿನ್ ಪ್ರತಿಕ್ರಿಯಿಸಿದ್ದು, ಖಂಡಿತ ಸರ್ ಎಂದು ಹೇಳಿದ್ದಾರೆ. ಅಲ್ಲದೇ ನಂತರದಲ್ಲಿ ಅವರು ಇನ್ನೊಂದು ಟ್ವಿಟ್ ಮಾಡಿದ್ದು, ಅದರಲ್ಲಿ ಅವರು ಚಲನ್ ಪಾವತಿಸಿದ ಫೋಟೋ ಪೋಸ್ಟ್ ಮಾಡಿ, ಪುಣೆ ನಗರ ಪೊಲೀಸರೇ ಚಲನ್ ಪಾವತಿಸಲಾಗಿದೆ. ಹಾಗೆಯೇ ನಾನು ನಿಮ್ಮ ಸಲಹೆಯಂತೆ ಹೊಸದಾದ ಚೆಂದದ ಕಪ್ಪು ಬಣ್ಣದ ಹೆಲ್ಮೆಟ್ ಕೊಂಡುಕೊಳ್ಳುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇವರ ಸಂದೇಶಕ್ಕೆ ಹಲವರು ಪ್ರತಿಕ್ರಿಯಿಸಿದ್ದು, ಪುಣೆಯಲ್ಲಿ (Pune)  ಹೆಲ್ಮೆಟ್ ಅಳವಡಿಕೆ ಕಡ್ಡಾಯವಲ್ಲ, ಮತ್ತೇಕೆ ಈ ದಂಡ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಸಾವಿರಾರು ಅಕ್ರಮ ನಂಬರ್ ಪ್ಲೇಟ್‌ಗಳಿವೆ ಅವರಿಗೆ ಚಲನ್ ಇಲ್ಲ, ಮಿಲಿಯನ್‌ಗೂ ಹೆಚ್ಚು ಜನ ತಪ್ಪಾದ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುತ್ತಾರೆ ಅವರಿಗೆ ದಂಡವಿಲ್ಲ. ಆದರೆ ಒಬ್ಬ ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಾನೆ ಅವರಿಗೆ ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಧರಿಸದೇ ಇರುವುದರಿಂದ ನಿಮಗೆ ಮಾತ್ರ ಹಾನಿಯಾಗುತ್ತದೆ. ಬೇರೆ ಯಾರಿಗೋ ಅಲ್ಲ. ಹಾಗಾಗಿ ಸಂಚಾರಿ ನಿಯಮವನ್ನು ಪಾಲಿಸಲು ಹೋಗದಿರಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈ ಫೋಟೋ ಮಾತ್ರ ಸಿಸಿಟಿವಿ ಗುಣಮಟ್ಟದ ಬಗ್ಗೆ ಅಚ್ಚರಿ ಪಡುವಂತೆ ಮಾಡಿದೆ. ಯೋಜಿಸಿ ತೆಗೆದ ಫೋಟೋಗಳೇ ಕೆಲವೊಮ್ಮೆ ಸರಿಯಾಗಿ ಬರುವುದಿಲ್ಲ ಹೀಗಿರುವಾಗ ಈ ಫೋಟೋ ಇಷ್ಟೊಂದು ಚೆನ್ನಾಗಿ ಬಂದಿರುವುದಕ್ಕೆ  ದಂಡ ಕಟ್ಟುವ ನೋವಿದ್ದರೂ ಬೈಕ್ ಚಾಲಕ ಫುಲ್ ಖುಷ್ ಆಗಿದ್ದಾನೆ.

 

Follow Us:
Download App:
  • android
  • ios