ಪಾಟ್ನಾ-ಗಯಾ ಮುಖ್ಯ ರಸ್ತೆಯ ಜೆಹಾನಾಬಾದ್‌ನಲ್ಲಿ, 7.48 ಕಿ.ಮೀ ಉದ್ದದ ರಸ್ತೆಯ ಮಧ್ಯದಲ್ಲಿ ಬೃಹತ್ ಮರಗಳು ಹಾಗೆಯೇ ನಿಂತಿದ್ದು, ಪ್ರಯಾಣಿಕರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ.
ನವದೆಹಲಿ (ಜೂ.30): ಹೊಸದಾಗಿ ನಿರ್ಮಾಣವಾದ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿರುವ ಮತ್ತು ಗುಂಡಿಗಳೇ ಇಲ್ಲದ ರಸ್ತೆಯಲ್ಲಿ ಕಾರ್ ಅಥವಾ ಬೈಕ್ ರೈಡ್ ಮಾಡೋದನ್ನು ಕಲ್ಪಿಸಿಕೊಳ್ಳಿ. ಸುಗಮ ರಸ್ತೆಯಲ್ಲಿ ವೇಗವಾಗಿ ಚಲಿಸುವಾಗ, ಶುದ್ದವಾದ ಗಾಳಿ ಮುಖಕ್ಕೆ ಬೀಸುತ್ತಿದ್ದರೆ, ಎದುರಿನ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ಕಾರ್ ಅಥವಾ ಬೈಕ್ ರೈಡ್ ಮಾಡುವ ಖುಷಿಯ ಅನುಭವ ನಿಮ್ಮದಾಗುತ್ತದೆ.
ಆದರೆ, ರಸ್ತೆಯ ಪಕ್ಕದಲ್ಲಿ ಇರಬೇಕಾದ ಮರಗಳು ರಸ್ತೆಯ ಮಧ್ಯದಲಲ್ಲಿಯೇ ಇದ್ದರೆ ಏನಾಗಬಹುದು? ಇದು ನಿಜ ಜೀವನದ ಬೈಕಿಂಗ್ ಆಟವಾಗಿ ಬದಲಾಗುತ್ತದೆ. ರಸ್ತೆಯ ಮಧ್ಯದಲ್ಲಿಯೇ ಬೆಳೆದುನಿಂತ ಮರಗಳನ್ನು ತಪ್ಪಿಸುವ ಪ್ರಯತ್ನ ಮಾಡಬಹುದು. ಈ ಪ್ರಯತ್ನದಲ್ಲಿ ನಿಮ್ಮ ಜೀವ ಕೂಡ ಹೋಗಬಹುದು. ಅದೇ ರೀತಿಯ ಬೈಕಿಂಗ್ ರಸ್ತೆ ಈಗ ಬಿಹಾರದಲ್ಲಿ ನಿರ್ಮಾಣವಾಗಿದೆ. ರಾಜಧಾನಿ ಪಾಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಜೆಹಾನಾಬಾದ್‌ನಲ್ಲಿ ಇದು ನಿಜವಾಗಿದೆ, ಅಲ್ಲಿ 100 ಕೋಟಿ ರೂ. ರಸ್ತೆ ಅಗಲೀಕರಣ ಯೋಜನೆ ಎಷ್ಟು ಅದ್ವಾನವಾಗಿದೆ ಎಂದರೆ, ಇಲ್ಲಿ ಜನರ ಹಿತಕ್ಕಿಂತ ಹೆಚ್ಚಾಗಿ ಅಧಿಕಾರಿಗಳ ಅಹಂಕಾರವೇ ದೊಡ್ಡದಾಗಿದೆ.
ಪಾಟ್ನಾ-ಗಯಾ ಮುಖ್ಯ ರಸ್ತೆಯ ಜೆಹಾನಾಬಾದ್‌ನಲ್ಲಿ, 7.48 ಕಿ.ಮೀ ಉದ್ದದ ರಸ್ತೆಯ ಮಧ್ಯದಲ್ಲಿ ಬೃಹತ್ ಮರಗಳು ಹಾಗಯೇ ನಿಂತಿವೆ, ಇದರಿಂದಾಗಿ ಪ್ರಯಾಣಿಕರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ. ಹಾಗಂತ ಈ ಮರಗಳು ರಾತ್ರೋರಾತ್ರಿಯಂತೂ ಬೆಳೆದಿದ್ದಲ್ಲ, ಹಾಗಾದರೆ ಇಲ್ಲಿ ಆಗಿದ್ದನು?
ಜಿಲ್ಲಾಡಳಿತವು 100 ಕೋಟಿ ರೂ.ಗಳ ರಸ್ತೆ ಅಗಲೀಕರಣ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅವರು ಮರಗಳನ್ನು ತೆಗೆದುಹಾಕಲು ಅನುಮತಿ ಕೋರಿ ಅರಣ್ಯ ಇಲಾಖೆಯ ಸಂಪರ್ಕ ಮಾಡಿದ್ದರು. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಪ್ರತಿಯಾಗಿ, ಅರಣ್ಯ ಇಲಾಖೆ 14 ಹೆಕ್ಟೇರ್ ಅರಣ್ಯ ಭೂಮಿಗೆ ಪರಿಹಾರವನ್ನು ಕೋರಿತು. ಆದರೆ, ಜಿಲ್ಲಾಡಳಿತವು ವಿನಂತಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಸಿಟ್ಟಿಗೆದ್ದ ಜಿಲ್ಲಾಡಳಿತ ಮರಗಳನ್ನು ಕತ್ತರಿಸುವ ಬದಲಿಗೆ ಆ ಮರಗಳ ಸುತ್ತಲೂ ಡಾಂಬರೀಕರಣ ಮಾಡಿ ರಸ್ತೆಯನ್ನು ಅಗಲ ಮಾಡಿದ್ದಾರೆ.
ಇನ್ನು ಈ ಮರಗಳು ನೇರ ರೇಖೆಯಲ್ಲಿ ಇದ್ದರೂ ಒಳ್ಳೆಯ ರಸ್ತೆ ಸಾಧ್ಯವಾಗುತ್ತಿತ್ತು. ಚಾಲಕನ ಪ್ರಯಾಣ ಸುಗಮವಾಗುತ್ತಿತ್ತು. ಆದರೆ, ಇಲ್ಲಿ ರೈಡ್ ಮಾಡುವುದಾದರೆ, ಜಿಗ್‌ಜಾಗ್ ಮಾದರಿಯಲ್ಲಿ ಡ್ರೈವ್ ಮಾಡಬೇಕು. ಇದು ಸಾವಿಗೆ 100 ಕೋಟಿ ರೂಪಾಯಿಗಳ ಆಹ್ವಾನದಂತೆ ತೋರುತ್ತಿದೆ.
ಮರಗಳು ರಸ್ತೆ ಮಧ್ಯದಲ್ಲಿ ಇರುವುದರಿಂದ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಜಿಲ್ಲಾಡಳಿತ ಮರಗಳನ್ನು ತೆಗೆದುಹಾಕಲು ಯಾವುದೇ ದೃಢವಾದ ಉಪಕ್ರಮವನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ. ಒಂದು ವೇಳೆ ದೊಡ್ಡ ಅಪಘಾತ ಸಂಭವಿಸಿ ಯಾರಾದರೂ ಸಾವನ್ನಪ್ಪಿದರೆ ಯಾರು ಹೊಣೆಗಾರರಾಗುತ್ತಾರೆ? ಇದು ಪ್ರಸ್ತುತ ಸಮಸ್ಯೆಗೆ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ.
