ಚುನಾವಣಾ ಅಕ್ರಮದಲ್ಲಿ ಬಿಜೆಪಿ ಭಾಗಿ, ಬಿಹಾರ ಚುನಾವಣೆಗೆ ಮ್ಯಾಚ್ ಫಿಕ್ಸಿಂಗ್: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಮಹಾರಾಷ್ಟ್ರ ಚುನಾವಣೆಯನ್ನು ಉಲ್ಲೇಖಿಸಿ ಬಿಜೆಪಿ ಚುನಾವಣಾ ಅಕ್ರಮದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಇದೇ ರೀತಿಯ 'ಮ್ಯಾಚ್ ಫಿಕ್ಸಿಂಗ್' ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗವು ಮತದಾನದಲ್ಲಿನ ಏರಿಕೆ ಅಸಾಮಾನ್ಯವಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಮತ್ತೆ ಭಾರತೀಯ ಜನತಾ ಪಕ್ಷವು "ಚುನಾವಣಾ ಅಕ್ರಮಗಳಲ್ಲಿ" ತೊಡಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷದ ಮಹಾರಾಷ್ಟ್ರ ಚುನಾವಣೆಯನ್ನು ಉಲ್ಲೇಖಿಸಿ, ಮುಂಬರುವ ಬಿಹಾರ ಚುನಾವಣೆಯಲ್ಲಿ ಕೇಸರಿ ಪಕ್ಷವು ಇದೇ ರೀತಿಯ "ಮ್ಯಾಚ್ ಫಿಕ್ಸಿಂಗ್" ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. "ಚುನಾವಣೆಯನ್ನು ಕದಿಯುವ ಕ್ರಮ ಹೇಗಿರಬಹುದು ಎಂಬುದಕ್ಕೆ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಒಂದು ಮಾದರಿಯಾಗಿದೆ. ಪ್ರಜಾಪ್ರಭುತ್ವವನ್ನು ಅಪಹರಿಸುವ ನಿಖರವಾದ ಯೋಜನೆಯು ಅಲ್ಲಿ ನಡೆದಿದ್ದು ಸ್ಪಷ್ಟ," ಎಂದು ರಾಹುಲ್ ಗಾಂಧಿ ಹೇಳಿದರು.
ಅವರು ಈ ಕ್ರಮ ಹಂತ ಹಂತವಾಗಿ ರೂಪುಗೊಂಡಿರುವ ನಿಯೋಜಿತ ಯೋಜನೆ ಎಂಬುದನ್ನು ವಿವರಿಸಿದರು:
ಹಂತ 1: ಚುನಾವಣಾ ಆಯೋಗದ ನೇಮಕಾತಿಗೆ ಸಂಬಂಧಿಸಿದ ಸಮಿತಿಯ ನಿಯಂತ್ರಣ.
ಹಂತ 2: ನಕಲಿ ಮತದಾರರನ್ನು ಪಟ್ಟಿಗೆ ಸೇರಿಸುವುದು.
ಹಂತ 3: ಮತದಾನದ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸುವುದು.
ಹಂತ 4: ಬಿಜೆಪಿ ಗೆಲ್ಲಬೇಕಾದ ನಿರ್ದಿಷ್ಟ ಕ್ಷೇತ್ರಗಳಲ್ಲಿ ನಕಲಿ ಮತದಾನವನ್ನು ಗುರಿಯಾಗಿಸುವುದು.
ಹಂತ 5: ಎಲ್ಲಾ ಪುರಾವೆಗಳನ್ನು ಮರೆಮಾಡುವುದು.
"ಮಹಾರಾಷ್ಟ್ರದಲ್ಲಿ ಬಿಜೆಪಿ ತೋರಿಸಿದ್ದ ಹತಾಶೆ ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಚುನಾವಣೆ ರಿಗ್ಗಿಂಗ್ ಎಂಬುದು ಮ್ಯಾಚ್ ಫಿಕ್ಸಿಂಗ್‌ನಂತೆ — ಅದರಲ್ಲಿ ಮೋಸ ಮಾಡುವವರು ಗೆಲ್ಲಬಹುದು, ಆದರೆ ಅದು ಪ್ರಜಾಪ್ರಭುತ್ವದ ಸ್ತಂಭಗಳನ್ನು ದುರ್ಬಲಗೊಳಿಸುತ್ತದೆ ಹಾಗೂ ಫಲಿತಾಂಶಗಳ ಮೇಲೆ ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡುತ್ತದೆ," ಎಂದು ರಾಹುಲ್ ಗಾಂಧಿ ಹೇಳಿದರು.
"ಈ ದೇಶದ ಪ್ರತಿಯೊಬ್ಬ ನಾಗರಿಕನು ಈ ವಿಷಯದ ಬಗ್ಗೆ ಎಚ್ಚರಿಕೆಯಿಂದ ಗಮನಹರಿಸಬೇಕು, ದಾಖಲೆಗಳನ್ನು ಪರಿಶೀಲಿಸಬೇಕು, ಸ್ವತಃ ನಿರ್ಧಾರ ಕೈಗೊಳ್ಳಬೇಕು ಮತ್ತು ಉತ್ತರಗಳನ್ನು ಕೇಳಬೇಕು. ಮಹಾರಾಷ್ಟ್ರದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಮುಂದಿನ ಬಾರಿಗೆ ಬಿಹಾರದಲ್ಲಿ ಕಾಣಿಸಬಹುದು, ನಂತರ ಬಿಜೆಪಿಯ ಸೋಲಿನ ಭೀತಿಯಿರುವ ಎಲ್ಲ ರಾಜ್ಯಗಳಿಗೂ ಹರಡಬಹುದು. ಇಂಥ ಮ್ಯಾಚ್ ಫಿಕ್ಸಿಂಗ್ ಚುನಾವಣೆಗಳು ಯಾವ ಪ್ರಜಾಪ್ರಭುತ್ವಕ್ಕೂ ಅಪಾಯಕರ ನಿಜಕ್ಕೂ ಇದು ವಿಷದಂತೆ ಎಂದು ಎಚ್ಚರಿಸಿದರು.
ಆದರೆ ಮಹಾರಾಷ್ಟ್ರ ಚುನಾವಣೆ ಕುರಿತು ರಾಹುಲ್ ಗಾಂಧಿ ವೃದ್ಧಿಯಾದ ಮತದಾರರ ಸಂಖ್ಯೆಯ ಬಗ್ಗೆ ತೋರಿದ ಅನುಮಾನವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಅವರ ಪ್ರಕಾರ, ಮತದಾನದಲ್ಲಿ ಏರಿಕೆ ಆಗಿರುವುದು "ಅಸಾಮಾನ್ಯ"ವಲ್ಲ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.
"2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ದಿನ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಒಟ್ಟು 6,40,87,588 ಮತದಾರರು ಮತ ಚಲಾಯಿಸಿದ್ದರು. ಇದು ಪ್ರತಿ ಗಂಟೆಗೆ ಸರಾಸರಿ 58 ಲಕ್ಷ ಮತದಾನವಾಗಿದೆ. ಈ ಲೆಕ್ಕಾಚಾರ ಪ್ರಕಾರ, ಕೊನೆಯ ಎರಡು ಗಂಟೆಗಳಲ್ಲಿ 116 ಲಕ್ಷ ಮತದಾರರು ಮತ ಚಲಾಯಿಸುವ ಸಾಧ್ಯತೆ ಇದೆ. ಅಂದರೆ, ಕೊನೆಯ ಎರಡು ಗಂಟೆಗಳಲ್ಲಿ 65 ಲಕ್ಷ ಮತದಾರರು ಮತ ಹಾಕಿದರೆ ಅದು ನಿರೀಕ್ಷಿತ ಸರಾಸರಿ ಮಟ್ಟಕ್ಕಿಂತಲೂ ಕಡಿಮೆ," ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ಈ ವರ್ಷದ ಆರಂಭದಲ್ಲಿ ಸ್ಪಷ್ಟಪಡಿಸಿದ್ದರು.
ಮತ್ತೊಂದೆಡೆ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮತಗಟ್ಟೆ ಏಜೆಂಟ್‌ಗಳು ಪ್ರತಿಯೊಂದು ಮತಗಟ್ಟೆಯಲ್ಲೂ ಹಾಜರಿದ್ದರು. ಮತದಾನ ಪ್ರಕ್ರಿಯೆ ವೇಳೆ ಯಾವುದೇ ಗಂಭೀರ ಅಕ್ರಮದ ಕುರಿತು ಅವರು ಅಥವಾ ಮತದಾನ ಗುತ್ತಿಗೆಯು ನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ವಿಶ್ವಾಸಾರ್ಹ ದೂರುಗಳನ್ನು ನೀಡಿಲ್ಲ. ಇದು ಮತ ಎಣಿಕೆಯ ದಿನವೂ ಮತ್ತು ಮರುದಿನದ ವೀಕ್ಷಕರ ಮೇಲ್ವಿಚಾರಣೆಯ ಸಮಯದಲ್ಲಿಯೂ ದೃಢಪಟ್ಟಿದೆ.