ಭಾರತ-ಪಾಕ್ ಕದನದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿ ನೀಡಿದೆ. ಐಬಿ ಮುಖ್ಯಸ್ಥ ತಪನ್ ಡೇಕಾ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪಾಕಿಸ್ತಾನಿ ಹ್ಯಾಕರ್‌ಗಳು 'ಝೀ ಬಿಹಾರ' ಚಾನೆಲ್ ಅನ್ನು ಹ್ಯಾಕ್ ಮಾಡಿದ್ದಾರೆ.
ನವದೆಹಲಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿಯ ನಡುವೆಯೇ ಗುಪ್ತಚರ ವಿಭಾಗ (ಐಬಿ) ಮುಖ್ಯಸ್ಥ ತಪನ್ ಕುಮಾರ್ ಡೇಕಾ ಅವರ ಅಧಿಕಾರವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ.
2022ರಲ್ಲಿ ಐಬಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ತಪನ್ ಕುಮಾರ್ ಅವರ ಅಧಿಕಾರಾವಧಿ ಇದೇ ವರ್ಷದ ಜೂನ್ 30ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿರುವ ಹಿನ್ನೆಲೆಯಲ್ಲಿ 2026ರ ಜೂನ್‌ವರೆಗೆ ಅವರು ಇದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ತಪನ್ ಕುಮಾರ್ ಅವರು ಹಿಮಾಚಲ ಪ್ರದೇಶ ಕೇಡರ್‌ನ 1998ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ವಿಸ್ತೃತ ಜ್ಞಾನ ಹೊಂದಿರುವ ತಪನ್ ಕುಮಾರ್ ಅವರು, ಇಂಡಿಯನ್ ಮುಜಾಹಿದಿನ್ ಉಗ್ರ ಸಂಘಟನೆಯ ಹೆಡೆಮುರಿಕಟ್ಟುವಲ್ಲಿ ಮಹತ್ವದ ಪಾತ್ರವಹಿಸಿದವರು.
ಪಾಕಿಸ್ತಾನಿಗಳಿಂದ 'ಝೀ ಬಿಹಾರ' ಚಾನೆಲ್ ಹ್ಯಾಕ್
ಆಪರೇಷನ್ ಸಿಂದೂರದ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ಯಾಕರ್‌ಗಳು ತಮ್ಮ ಕೈಚಳಕ ಮುಂದುವರಿಸಿದ್ದು, ಝೀ ನ್ಯೂಸ್‌ನ ಬಿಹಾರ-ಜಾರ್ಖಂಡ ಪ್ರಾದೇಶಿಕ ಚಾನೆಲ್‌ನ ಲೈವ್ ಟಿವಿ ಪ್ರಸಾರವನ್ನು ಹ್ಯಾಕ್ ಮಾಡಿದ್ದಾರೆ. ಆದರೆ, ಚಾನೆಲ್ ತನ್ನ ಯೂಟ್ಯೂಬ್ ವೇದಿಕೆಯ ಮೂಲಕ ಕಾರ್ಯಕ್ರಮ ಪ್ರಸಾರವನ್ನು ವಿಸ್ತ್ರತವಾಗಿ ಸುದ್ದಿ ಬಿತ್ತರಿಸಿತ್ತು. ಇದರಿಂದಾಗಿ ಪಾಕ್ ಸರ್ಕಾರ ತನ್ನ ದೇಶದಲ್ಲಿ ಝೀ ನ್ಯೂಸ್ ಅನ್ನು ನಿಷೇಧಿಸಿತ್ತು. ಅದರ ಬೆನ್ನಲ್ಲೇ ಚಾನೆಲ್ ಹ್ಯಾಕ್ ಮಾಡಲಾಗಿದೆ. ಮುಂದುವರೆಸಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ಝೀ ನ್ಯೂಸ್ ಪಾಕಿಸ್ತಾನದ ದುಷ್ಟ ಕೃತ್ಯಗಳ ಬಗ್ಗೆ ವಿಸ್ತೃತವಾಗಿ ವರದ ಬಿತ್ತರಿಸಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದಲ್ಲಿ ಪಾಕ್ ಭಾರಿ ಹಿನ್ನಡೆ ಅನುಭವಿಸಿದ್ದರೂ, ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ದೇಶದ ಅತ್ಯುನ್ನತ ಮಿಲಿಟರಿ ಶ್ರೇಣಿ ಆಗಿರುವ ಫೀಲ್ಡ್ ಮಾರ್ಷಲ್ ರ್‍ಯಾಂಕ್ ದಯಪಾಲಿಸಿದೆ.
ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ಮಂತ್ರಿ ಕಾರ್ಯಾಲಯ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ‘ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಪದೋನ್ನತಿ ನೀಡಲಾಗಿದೆ. ಈ ಪ್ರಸ್ತಾಪಕ್ಕೆ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಅನುಮತಿ ದೊರೆತಿದೆ’ ಎಂದಿದೆ,‘ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಶಸ್ತ್ರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕಾರಣಕ್ಕೆ ಅವರಿಗೆ ಪದೋನ್ನತಿ ನೀಡಲಾಗಿದೆ. ಅವರ ಅನುಕರಣೀಯ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ’ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಏಷ್ಯಾ ಹಾಕಿಗೆ ಪಾಕ್ ಬೇಡಿಕೆ
ಆ.27ರಿಂದ ಸೆ.7ರ ವರೆಗೂ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ತನ್ನ ಆಟಗಾರರು, ಸಿಬ್ಬಂದಿಗೆ ಭಾರತ ವೀಸಾ ವಿತರಿಸುವ ಬಗ್ಗೆ ಗ್ಯಾರಂಟಿ ಕೊಡುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್), ಏಷ್ಯನ್ ಹಾಕಿ ಫಡರೇಶನ್ (ಎಎಚ್‌ಎಫ್)ಗೆ ಬೇಡಿಕೆ ಸಲ್ಲಿಸಿದೆ.
ಮುಂದಿನ ವರ್ಷದ ವಿಶ್ವಕಪ್‌ಗೆ ಏಷ್ಯಾಕಪ್ ಅರ್ಹತಾ ಟೂರ್ನಿಯಾಗಿರುವ ಕಾರಣ, ತಾನು ಅವಕಾಶ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದಿರುವ ಪಿಎಚ್‌ಎಫ್, ಭಾರತದ ವೀಸಾ ಕೊಡಿಸಿ ಇಲ್ಲವೇ ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸಿ ಎಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಕದನವಿರಾಮದಲ್ಲಿ ಅಮೆರಿಕ ಮಧ್ಯಸ್ಥಿಕೆ ಇಲ್ಲ: ಕೇಂದ್ರ ಸ್ಪಷ್ಟನೆ
ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಮಿಲಿಟರಿ ಸಂಘರ್ಷದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂಸತ್ತಿನ ಸ್ಥಾಯಿ ಸಮಿತಿಗೆ ಸೋಮವಾರ ವಿವರ ನೀಡಿದರು. ಈ ವೇಳೆ ಅವರು, ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ ಮಿಸ್ರಿ,‘ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡು ನೆರೆಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ’ ಎಂದರು. ಅಲ್ಲದೆ, ‘ಎರಡೂ ದೇಶಗಳ ನಡುವಿನ ಕದನ ಸಾಂಪ್ರದಾಯಿಕ ಶೈಲಿಯ ಯುದ್ಧವಾಗಿತ್ತು. ಪಾಕ್‌ನಿಂದ ಅಣ್ವಸ್ತ್ರ ಪ್ರಯೋಗದ ಯಾವುದೇ ಸಂಕೇತ ಲಭಿಸಿರಲಿಲ್ಲ’ ಎಂದೂ ಸ್ಪಷ್ಟಪಡಿಸಿದರು.


