ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ನಾಯಕ ಸಮರ್ಥ್ ಚೌಧರಿ ಸಿಎಂ ರೇಸ್‌ನಲ್ಲಿದ್ದು, ನಿತೀಶ್ ಪುತ್ರ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

ಪಟನಾ (ಏ.14): ಹಿಂದಿ ಭಾಷಿಕ ಪ್ರದೇಶಗಳ ಪೈಕಿ ಇದುವರೆಗೂ ಬಿಜೆಪಿ ಮುಖ್ಯಮಂತ್ರಿ ಕಾಣದ ಏಕೈಕ ರಾಜ್ಯವಾಗಿದ್ದ ಬಿಹಾರ, ಮಂಗಳವಾರ ಮೊದಲ ಬಿಜೆಪಿ ಮುಖ್ಯಮಂತ್ರಿ ಆಯ್ಕೆಗೆ ಸಾಕ್ಷಿಯಾಗಲಿದೆ. ಹಾಲಿ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಸರ್ಕಾರದ ನೇತೃತ್ವವನ್ನು ಬಿಜೆಪಿ ಮೊದಲ ಬಾರಿಗೆ ವಹಿಸಿಕೊಳ್ಳಲಿದೆ. ಬಿಜೆಪಿ ನಾಯಕ ಸಮರ್ಥ್‌ ಚೌಧರಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ನಿತೀಶ್‌ ರಾಜೀನಾಮೆ

ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿತೀಶ್‌ ಕುಮಾರ್‌ ಮಂಗಳವಾರ ಬೆಳಗ್ಗೆ 11 ಗಂಟೆಗೆ ತಮ್ಮ ಸಂಪುಟದ ಸಭೆ ಕರೆದಿದ್ದು, ಅಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಲಿದ್ದಾರೆ. ಬಳಿಕ ರಾಜ್ಯಪಾಲರ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ.

ನೂತನ ಸಿಎಂ ಆಯ್ಕೆ

ನಿತೀಶ್‌ ರಾಜೀನಾಮೆ ಬಳಿಕ ಮಧ್ಯಾಹ್ನ 4 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಪಕ್ಷ ತನ್ನ ನೂತನ ಆಯ್ಕೆ ಮಾಡಲಿದೆ. ಬಳಿಕ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ನೂತನ ಸಿಎಂ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಸಿಎಂ ಹುದ್ದೆ ರೇಸ್‌ನಲ್ಲಿ ಸಮರ್ಥ್‌ ಚೌಧರಿ ಮುಂಚೂಣಿಯಲ್ಲಿದ್ದಾರೆ. ಆದರೆ ಚೌಧರಿ ಮೂಲ ಬಿಜೆಪಿಗರಲ್ಲ. ಆರ್‌ಜೆಡಿ, ಜೆಡಿಯು ಸುತ್ತಿ ಬಂದವರು. ರೇಸ್‌ನಲ್ಲಿರುವ ಮತ್ತೊಬ್ಬರು ಕೇಂದ್ರ ಸಚಿವ ನಿತ್ಯಾನಂದ್‌ ರೈ. ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿ, ರಾಮಜನ್ಮಭೂಮಿ ಹೋರಾಟ ಮೂಲಕ ಮುನ್ನೆಲೆಗೆ ಬಂದವರು. 2019ರಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರೆಗೂ ಅವರು ಬಿಹಾರ ಬಿಜೆಪಿಯ ನೇತೃತ್ವವಹಿಸಿದ್ದರು.

ಬಿಜೆಪಿ ಮೂಲಗಳ ಪ್ರಕಾರ ಹೊಸ ಮುಖ್ಯಮಂತ್ರಿ ಒಬಿಸಿ ಅಥವಾ ದಲಿತ ಸಮುದಾಯದವರೇ ಆಗಿರಲಿದ್ದಾರೆ.

ನಿತೀಶ್‌ ಪುತ್ರ ಡಿಸಿಎಂ

ಈ ಹಿಂದೆ ಬಿಜೆಪಿ- ಜೆಡಿಯು ನಡುವೆ ಆದ ಒಪ್ಪಂದ ಅನ್ವಯ, ಬಿಜೆಪಿಗೆ ಸಿಎಂ ಸ್ಥಾನ ಸಿಗಲಿದ್ದು, ನಿತೀಶ್ ಅವರ ಪುತ್ರ ಉಪಮುಖ್ಯಮಂತ್ರಿ ಪಟ್ಟ ಏರುವ ಸಾಧ್ಯತೆ ಇದೆ. 243 ಸದಸ್ಯ ಸ್ಥಾನದ ಬಿಹಾರ ಅಸೆಂಬ್ಲಿಯಲ್ಲಿ ಬಿಜೆಪಿ 89, ಜೆಡಿಯು 85 ಮತ್ತು ಇತರೆ ಪಕ್ಷಗಳು ಸೇರಿ ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 202 ಸ್ಥಾನಗಳ ಸ್ಪಷ್ಟಬಹುಮತ ಹೊಂದಿದೆ.