ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಚುನಾವಣಾ ಆಯೋಗ, ನಾಪತ್ತೆಯಾಗಿರುವ ಅಂದಾಜು 74 ಲಕ್ಷ ಮತದಾರರನ್ನು ಹುಡುಕಿಕೊಡಿ ಎಂದು ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದೆ.
ನವದೆಹಲಿ: ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಚುನಾವಣಾ ಆಯೋಗ, ನಾಪತ್ತೆಯಾಗಿರುವ ಅಂದಾಜು 74 ಲಕ್ಷ ಮತದಾರರನ್ನು ಹುಡುಕಿಕೊಡಿ ಎಂದು ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದೆ. ರಾಜ್ಯದಲ್ಲಿ ಅಕ್ರಮ ವಲಸಿಗರು, ಅಕ್ರಮ ಮತದಾರರ ಪಟ್ಟಿ ತೆರವಿಗೆ ಕಾರ್ಯಾಚರಣೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಸೋಮವಾರ ಆಯೋಗವು 12 ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದು, ‘ದಾಖಲೆಗಳಲ್ಲಿ ನಮೂದಾಗಿರುವ ವಿಳಾಸಗಳಲ್ಲಿ 43.93 ಲಕ್ಷ ಜನ ವಾಸವಿಲ್ಲ. ಅತ್ತ ನಮ್ಮಿಂದ ಫಾರಂಗಳನ್ನು ಪಡೆದುಕೊಂಡು ಹೋಗಿರುವ 29.62 ಲಕ್ಷ ಜನರ ಪತ್ತೆಯೇ ಇಲ್ಲ. ಒಟ್ಟು 74 ಲಕ್ಷ ಜನರ ಕುರುಹೇ ಸಿಗುತ್ತಿಲ್ಲ’ ಎಂದು ಮಾಹಿತಿ ನೀಡಿದೆ. ಜತೆಗೆ, ಜಿಲ್ಲಾಧಿಕಾರಿಗಳು ಮತ್ತು ಪಕ್ಷಗಳು ನೇಮಿಸಿದ ಸುಮಾರು 1.5 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಮೂಲಕ ಈ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಸಹಕರಿಸುವಂತೆ ವಿನಂತಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಯೋಗವು, ‘ಯಾವೊಬ್ಬ ಅರ್ಹ ಮತದಾರನೂ ತಪ್ಪಿಹೋಗಬಾರದು ಎಂಬ ಉದ್ದೇಶದಿಂದ, ಈ ಕೆಲಸದಲ್ಲಿ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಲ್ಲಿ ಕೇಳಿಕೊಳ್ಳಲಾಗಿದೆ’ ಎಂದಿದೆ. ಆ.1ರಂದು ಕರಡು ಮತಪಟ್ಟಿ ಪ್ರಕಟವಾಗಲಿದೆ.
ಮೋದಿಯವರ ಸಲಹೆಯಂತೆಯೇ ಬಿಹಾರದಲ್ಲಿ 125 ಯುನಿಟ್ ಉಚಿತ ವಿದ್ಯುತ್
ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆಯೇ ಬಿಹಾರದಲ್ಲಿ 125 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಗುರುವಾರವಷ್ಟೇ 125 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದರು. ಅದರ ಬೆನ್ನಲ್ಲೇ, ಮೋದಿಯವರೇ ತಮಗೆ ಮಾರ್ಗದರ್ಶನ ನೀಡಿದ್ದು ಎಂದು ಬಹಿರಂಗಪಡಿಸಿದ್ದಾರೆ.
ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಮೋತಿಹಾರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ನಿತೀಶ್, ‘ಜನರು ಈಗ ವಿದ್ಯುತ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಪ್ರಧಾನಿ ಮೋದಿಯವರು ಸಲಹೆ ನೀಡಿದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಅವರನ್ನು ನಾವು ತುಂಬಾ ಗೌರವಿಸುತ್ತೇವೆ. ನಾವು ಕರೆದಾಗಲೆಲ್ಲ ಅವರು ಬಿಹಾರಕ್ಕೆ ಬರುತ್ತಾರೆ’ ಎಂದರು.
ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪರೋಕ್ಷ ಟಾಂಗ್ ನೀಡಿದ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಗೆ ಅನುದಾನ ನೀಡಿರಲಿಲ್ಲ. ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳು ನಡೆದಿರಲಿಲ್ಲ’ ಎಂದು ಕಿಡಿ ಕಾರಿದರು.
