ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಈಗಾಗಲೇ 35 ಲಕ್ಷ ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಾಖಲೆ ಸಲ್ಲಿಕೆಗೆ ಜು.25ರ ತನಕ ಸಮಯವಿರುವ ಕಾರಣ, ಈ ಸಂಖ್ಯೆ ಇನ್ನೂ ಹೆಚ್ಚಲಿದೆ.

ಪಟನಾ: ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಈಗಾಗಲೇ 35 ಲಕ್ಷ ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಾಖಲೆ ಸಲ್ಲಿಕೆಗೆ ಜು.25ರ ತನಕ ಸಮಯವಿರುವ ಕಾರಣ, ಈ ಸಂಖ್ಯೆ ಇನ್ನೂ ಹೆಚ್ಚಲಿದೆ.

ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 6.6 ಕೋಟಿ(ರಾಜ್ಯದ ಒಟ್ಟು ಮತದಾರರಲ್ಲಿ ಶೇ.88.18ರಷ್ಟು) ಮಂದಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಶೇ.1.59ರಷ್ಟು(12.5 ಲಕ್ಷ) ಜನ ಮೃತಪಟ್ಟಿದ್ದಾರೆ.. ಶೇ.2.2ರಷ್ಟು(17.5 ಲಕ್ಷ) ಜನ ರಾಜ್ಯ ಬಿಟ್ಟಿದ್ದಾರೆ. ಇನ್ನು ಶೇ.0.73ರಷ್ಟು(5.5 ಲಕ್ಷ) ಮಂದಿ ಎರಡು ಬಾರಿ ನೋಂದಾಯಿಸಿಕೊಂಡಿದ್ದರು. ಈ ಎಲ್ಲರನ್ನೂ ಸೇರಿ 35 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.

ಇದರರ್ಥ, ಪ್ರಸ್ತುತ ಇರುವ ಮತದಾರರಲ್ಲಿ ಶೇ.4.5ರಷ್ಟು ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದು ಮುಂಬರುವ ಚುನಾವಣೆಗಳ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆಯಿದೆ.

ಬಿಹಾರ ರೀತಿ ದೇಶವ್ಯಾಪಿ ಮತದಾರ ಪಟ್ಟಿ ಪರಿಷ್ಕರಣೆ ?

ಬಿಹಾರದಲ್ಲಿ ಈಗ ನಡೆಯುತ್ತಿರುವ ರೀತಿಯಲ್ಲೇ ಮುಂದಿನ ತಿಂಗಳಿಂದ ದೇಶಾದ್ಯಂತ ಮತದಾರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್‌) ಅನ್ನು ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಆಯೋಗದ ಎಲ್ಲ ಸಿಬ್ಬಂದಿಯನ್ನು ಸಕ್ರಿಯಗೊಳಿಸಿದೆ. ಈ ಬಗ್ಗೆ ಮಾಸಾಂತ್ಯಕ್ಕೆ ಅಂತಿಮ ನಿರ್ಧಾರವನ್ನು ಆಯೋಗ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದು ಜಾರಿಯಾದರೆ ಮತದಾರರು ಚುನಾವಣಾ ಆಯೋಗ ನಿಗದಿಪಡಿಸುವ 14 ಗುರುತು ಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಹಾಗೂ ತಾವು ಅದೇ ಕ್ಷೇತ್ರದ ಮತದಾರರೇ ಅಲ್ಲವೇ ಎಂಬುದನ್ನು ದೃಢಪಡಿಸಬೇಕು. ಇದರಿಂದ 2 ಕ್ಷೇತ್ರದಲ್ಲಿ ಮತದಾರರಾಗಿದ್ದರೆ (ಇದ್ದ ಊರು/ ಹುಟ್ಟೂರು) ಒಂದು ಕ್ಷೇತ್ರದ ಮತದಾರ ಗುರುತು ಚೀಟಿ ರದ್ದಾಗುತ್ತದೆ ಹಾಗೂ ಅಕ್ರಮ ವಲಸಿಗರಾಗಿದ್ದರೆ ಮತದಾರ ಗುರುತು ಚೀಟಿ ಸಂಪೂರ್ಣ ರದ್ದಾಗುತ್ತದೆ.

ಬಿಹಾರ ಮಾದರಿ:

 ಬಿಹಾರದಲ್ಲಿ ಮತದಾರರ ವಿವಿಧ ಗುರುತು ಪತ್ರಗಳನ್ನು ಪಡೆದು ಅವರು ನೈಜ ಭಾರತೀಯರೇ ಅಲ್ಲವೇ ಹಾಗೂ ತಾವಿರುವ ಕ್ಷೇತ್ರಗಳ ಹಾಲಿ ನಿವಾಸಿಗಳು ಹೌದೇ ಅಲ್ಲವೇ ಎಂದು ಪತ್ತೆ ಮಾಡಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಇತ್ತೀಚೆಗೆ ಆಯೋಗ ಆರಂಭಿಸಿತ್ತು. ಆದರೆ ಇದು ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಿಪಕ್ಷಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು.

ಆದರೆ ಪರಿಷ್ಕರಣೆ ಸಂವಿಧಾನಾತ್ಮಕವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗ ನಿರ್ಧರಿಸಿದ್ದ 11 ಗುರುತು ಪತ್ರಗಳ ಜತೆ ಆಧಾರ್ ಸೇರಿ ಇನ್ನೂ 3 ಗುರುತು ಪತ್ರಗಳನ್ನು ಮತದಾರರಿಂದ ಪಡೆಯಲು ಸೂಚಿಸಿತ್ತು ಹಾಗೂ ಬಿಹಾರದಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿಸಿತ್ತು. ಇದಲ್ಲದೆ, ದೇಶಾದ್ಯಂತ ಈ ಪ್ರಕ್ರಿಯೆ ಏಕೆ ಆರಂಭಿಸಿಲ್ಲ? ಬಿಹಾರದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ದೇಶಾದ್ಯಂತ ಪ್ರಕ್ರಿಯೆ ಆರಂಭಿಸಲು ಆಯೋಗ ಸಜ್ಜಾಗಿದೆ