ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು? ಫ್ರೆಂಡ್ಸ್ ಸೇರಿ ಹೊಲಕ್ಕೆ ತೆರಳಿ ವಿಷದ ರುಚಿ, ಅದರ ಪರಿಣಾಮ ಪರೀಕ್ಷಿಸಲು ಬಯಸಿದ್ದಾರೆ. ಇದರಂತೆ ಪರೀಕ್ಷೆಯಲ್ಲಿ ಬಂದ ಫಲಿತಾಂಶ ಏನು?
ಪಾಟ್ನ (ಫೆ.14) ವಿಷದ ರುಚಿ ಹೇಗಿರುತ್ತೆ? ವಿಷ ಕುಡಿದರೆ ಸಾಯುತ್ತಾರಾ? ಈ ರೀತಿಯ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಯಾವತ್ತಾದರೂ ಬಂದಿದೆಯಾ? ವಿಷ ಕುಡಿದರೆ ಅದರ ರಿಸಲ್ಟ್ ಹೇಗಿರುತ್ತೆ ಅನ್ನೋ ಕುತೂಹಲ ಯಾರಿಗಾದರೂ ಇದೆಯಾ? ಇಲ್ಲ ಎನ್ನಬೇಡಿ, ಕಾರಣ ಐವರು ಬಿಹಾರಿ ಹುಡುಗಿಯರು ವಿಜ್ಞಾನಿಗಳು, ವೈದ್ಯರನ್ನೇ ಮೀರಿಸಿದ ಸಂಶೋಧನೆ ಮಾಡಿದ್ದಾರೆ. ಐವರು ಬಿಹಾರಿ ಹುಡುಗಿಯರು ಎಲ್ಲರ ವಯಸ್ಸು 12 ರಿಂದ 15ರ ಒಳಗಿದೆ. ಹೊಲಕ್ಕೆ ತೆರಳಿ ಐವರು ವಿಷ ಸೇವಿಸಿದ್ದಾರೆ. ಈ ಪೈಕಿ 14ರ ಬಾಲಕಿಗೆ ಸಿಕ್ಕಿದ್ದು ಸ್ವಲ್ಪ ಮಾತ್ರ, ಆಕೆ ತಕ್ಷಣವೇ ಉಗುಳಿದ್ದಾಳೆ. ಹೀಗಾಗಿ ಪ್ರಾಣ ಉಳಿದಿದೆ. ಇನ್ನು ನಾಲ್ವರು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಬದುಕುಳಿದ ಹುಡುಗಿ ವಿವರಿಸಿದ ಕತೆ
14ರ ಹರೆಯದ ಬಾಲಕಿ ಈ ದುರಂತದಲ್ಲಿ ಬದುಕಿ ಉಳಿದಿದ್ದಾಳೆ. ವಿಷವನ್ನು ಸೇವಿಸದೆ ಉಗುಳಿದ ಕಾರಣ ಸ್ವಲ್ಪ ಆರೋಗ್ಯ ಸಮಸ್ಯೆ ಎದುರಿಸಿದರೂ ಬಾಲಕಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಪರಿಸ್ಥಿತಿ ಕೈಮೀರಿದೆ ಅನ್ನೋದು ಅರಿವಾಗಿದೆ. ಓಡೋಡಿ ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಆದರೆ ಅಷ್ಟರ ವೇಳೆಗೆ ನಾಲ್ವರು ಹೊಲದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಕುಟುಂಬಸ್ಥರು ಬಾಲಕಿ ಬಳಿ ಕೇಳಿದಾಗ ಕತೆಯೊಂದನ್ನು ಹೇಳಿದ್ದಾಳೆ.
ಐವರು ಗೆಳೆತಿಯರು ವಿಷದ ರುಚಿ ನೋಡಲು ಮಾತನಾಡಿದ್ದೆವು. ವಿಷ ಕುಡಿದರೆ ಫಲಿತಾಂಶ ಏನು ಎಂದೆಲ್ಲಾ ಮಾತನಾಡಿದ್ದೆವು. ಈ ಪೈಕಿ ಒಬ್ಬಳು ಮನೆಯಲ್ಲಿ ಹೊಲಕ್ಕೆ ಇಟ್ಟಿದ್ದ ವಿಷವನ್ನು ತಂದಿದ್ದಳು. ಎಲ್ಲರಿಗೂ ಹಂಚಿ ಸೇವನೆ ಮಾಡಲಾಗಿದೆ. ಆದರೆ ನನಗೆ ಸಿಕ್ಕ ಪ್ರಮಾಣ ಸ್ವಲ್ಪವಾಗಿತ್ತು. ಇಷ್ಟೇ ಅಲ್ಲ ಬಾಯಿಗೆ ಇಟ್ಟ ತಕ್ಷಣವೇ ನಾನು ಉಗುಳಿದ್ದೇನೆ. ಆದರೆ ಇತರ ನಾಲ್ವರು ಸೇವಿಸಿದ್ದಾರೆ. ವಾಂತಿ ಶುರುವಾಗಿದೆ. ಬಳಿಕ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಬಾಲಕಿ ಹೇಳಿದ್ದಾರೆ.
ಪೊಲೀಸರಿಗೆ ಕಾಡಿದ ಅನುಮಾನ
ಬಾಲಕಿ ಕತೆ ಗ್ರಾಮದಲ್ಲಿ ಭಾರಿ ವೈರಲ್ ಆಗಿದೆ. ಇತ್ತ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಕತೆ ಕೇಳಿದ ಪೊಲೀಸರಿಗೆ ಅನುಮಾನ ಕಾಡಿದೆ. ಈ ರೀತಿಯ ಪ್ರಯೋಗ ಮಾಡಲು ಬಾಲಕಿಯರು ಪ್ರಯತ್ನಿಸುವ ಸಾಧ್ಯತೆ ಇಲ್ಲ. ಎಲ್ಲರಿಗೂ ವಿಷ, ಅದರ ಪರಿಣಾಮ ಅರಿವಿದೆ. ಇಷ್ಟೇ ಅಲ್ಲ ಹೊಲ, ಗದ್ದೆಗಳಲ್ಲಿ ಕೀಟನಾಶಕಗಳನ್ನು ಬಳಕೆ ಮಾಡುವ ಕಾರಣ ಇದರ ಗಂಭೀರತೆ ಕುರಿತು ಅರಿವಿದೆ.ಹೀಗಾಗಿ ಈ ಕತೆ ಅಸಲಿಯಲ್ಲ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ನಾಲ್ವರ ದುರಂತ ಸಾವಿನ ಹಿಂದೆ ಬೇರೆ ಕತೆ
ತನಿಖೆ ತೀವ್ರಗೊಳಿಸಿದ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ದಾಸ್, ಮೃತರ ಪೋಷಕರು ಸೇರಿದಂತೆ ಹಲವರನ್ನು ವಿಚಾರಣೆ ಮಾಡಿದ್ದಾರೆ. ಇತ್ತ ಸಿಸಿಟಿವಿ ದೃಶ್ಯಗಳ ಪರೀಶೀಲನೆ ಆರಂಭಿಸಿದ್ದಾರೆ. ಇದೀಗ ಪೊಲೀಸರು ಸಾವಿನ ಕೆಲ ಕಾರಣ ಬಹಿರಂಗಪಡಿಸಿದ್ದಾರೆ. ಅದೇ ಗ್ರಾಮದಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಐವರು ಬಾಲಕಿಯರು ಕೆಲ ಯುವಕರ ಜೊತೆ ಸುತ್ತಾಡಿದ್ದಾರೆ. ಪೂಜೆ ಸಂಜೆಯಾದರೆ ಬಾಲಕಿಯರು ಯುವಕರ ಜೊತೆ ಬೆಳಗ್ಗೆಯಿಂದಲೇ ಸುತ್ತಾಟ ನಡೆಸಿದ್ದಾರೆ. ಈ ಮಾಹಿತಿ ಬಾಲಕಿಯರ ಪೋಷಕರ ಕಿವಿಗೆ ಬಿದ್ದಿದೆ. ಪೋಷಕರು ಆಗಮಿಸಿ ಐವರು ಬಾಲಕಿಯರು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಎಲ್ಲರ ಮುಂದೆ ಬೈಗಳ ತಿಂದ ಬಾಲಕಿಯರು ತೀವ್ರವಾಗಿ ನೊಂದಿದ್ದಾರೆ. ಇದರ ಪರಿಣಾಮ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಪ್ರಕರಣ ಭೇದಿಸಿದ್ದಾರೆ.


