ಭೋಪಾಲ್ ಮಾಲ್‌ನಲ್ಲಿ ನಮಾಜ್: ಭಜರಂಗದಳದಿಂದ ಪ್ರತಿಭಟನೆ
ಮಧ್ಯಪ್ರದೇಶದ ಮಾಲ್‌ವೊಂದರಲ್ಲಿ ಅದರ ಸಿಬ್ಬಂದಿಗಳು ನಮಾಜ್ ಮಾಡಿದ್ದು, ಇದನ್ನು ಖಂಡಿಸಿ ಭಜರಂಗದಳ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‌ನ ಡಿಬಿ ಮಾಲ್‌ನಲ್ಲಿ ಈ ಘಟನೆ ನಡೆದಿದೆ.
ಭೋಪಾಲ್: ಮಧ್ಯಪ್ರದೇಶದ ಮಾಲ್‌ವೊಂದರಲ್ಲಿ ಅದರ ಸಿಬ್ಬಂದಿಗಳು ನಮಾಜ್ ಮಾಡಿದ್ದು, ಇದನ್ನು ಖಂಡಿಸಿ ಭಜರಂಗದಳ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‌ನ ಡಿಬಿ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ವಿವಾದಕ್ಕೀಡಾಗುತ್ತಿದ್ದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಮಾಲ್‌ನಲ್ಲಿ ಅವಕಾಶ ನೀಡದಿರಲು ಮಾಲ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಮಾಲ್‌ನಲ್ಲಿ ಕೆಲವರು ನಮಾಜ್ ಮಾಡುತ್ತಿದ್ದರು. ಈ ವಿಚಾರ ತಿಳಿದು ಅಲ್ಲಿಗೆ ಬಂದ ಕೆಲ ಭಜರಂಗದಳ ಸಂಘಟನೆಯ ಕಾರ್ಯಕರ್ತರು ನಮಾಜ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಲ್ಲೇ ಪ್ರತಿಭಟನೆ ನಡೆಸಲು ಶುರು ಮಾಡಿದ್ದಾರೆ. ಈ ನಮಾಜ್ ಕಾರ್ಯ ಇಲ್ಲಿ ಪ್ರತಿದಿನ ನಡೆಯುತ್ತಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದು ಭಜರಂಗದಳ ಸದಸ್ಯರು ಆರೋಪಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಯಂತೆ ಕಾಣಿಸುವ ವ್ಯಕ್ತಿಯೋರ್ವ ಅಲ್ಲಿಗೆ ಬಂದಿದ್ದು, ಭಜರಂಗದಳದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಾನೆ. ಇದು ಮಾಲ್‌ನ ಮೂಲೆಯಾಗಿದ್ದು, ಇಲ್ಲಿ ಹಿಂದೂ ಸಿಬ್ಬಂದಿಯೂ ಪ್ರಾರ್ಥನೆ ಮಾಡುತ್ತಾರೆ ಎಂದು ಆತ ಹೇಳಿದ್ದಾನೆ.
ಆದರೆ ಬಜರಂಗದಳದ ಕಾರ್ಯಕರ್ತರು ನಮಾಜ್ ಅನ್ನು ರಹಸ್ಯವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನಮಾಜ್ ಮಾಡುತ್ತಿರುವವರ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಮಾಲ್‌ನ ಮಧ್ಯಭಾಗದಲ್ಲಿರುವ ಎಸ್ಕಲೇಟರ್ ಬಳಿಗೆ ಹೋಗಿ ನೆಲದ ಮೇಲೆ ಕುಳಿತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಲ್ಲದೇ ಕೆಲವು ಭಜನೆಗಳನ್ನು ಮಾಡಿದ್ದಾರೆ.
ಆದರೆ ನಂತರ ಸ್ಥಳೀಯ ಪೊಲೀಸರು ಮಾಲ್‌ಗೆ ತೆರಳಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ ಎಂದು ಹೆಚ್ಚುವರಿ ಡೆಪ್ಯೂಟಿ ಪೊಲೀಸ್ ಕಮೀಷನರ್ ರಾಜೇಶ್ ಬದೋರಿಯಾ ಹೇಳಿದ್ದಾರೆ. ಇದಾದ ಬಳಿಕ ಮಾಲ್ ಕೂಡ ಮಾಲ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ಸೂಚನೆ ನೀಡಿದೆ. ಮೂಲಗಳ ಪ್ರಕಾರ ಮಾಲ್‌ಗಿಂತ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಮಸೀದಿಗೆ ತೆರಳಲು ಹೆಚ್ಚು ಸಮಯ ಬೇಕಾಗುತ್ತದೆ ಈ ಕಾರಣಕ್ಕೆ ಕೆಲ ಮುಸ್ಲಿಂ ಸಿಬ್ಬಂದಿ ಮಾಲ್ ಆವರಣದ ಮೂಲೆಯೊಂದರಲ್ಲಿ ನಮಾಜ್ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಮಾಲ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಲುಲು ಮಾಲ್ ಹೊರಗಡೆ ಗಲಾಟೆ, ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದವರ ಬಂಧನ!
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಭಜರಂಗದಳ ನಾಯಕ ಅಭಿಜಿತ್ ಸಿಂಗ್ ರಾಜ್‌ಪುತ್, ನಮಗೆ ಕಳೆದೊಂದು ತಿಂಗಳಿನಿಂದಲೂ ಈ ಡಿಬಿ ಮಾಲ್‌ನಲ್ಲಿ ಕೆಲವರು ನಮಾಜ್ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಇಂದು ನಾವು ಅಲ್ಲಿಗೆ ಹೋದಾಗ 10 ರಿಂದ 12 ಮಂದಿ ನಮಾಜ್ ಮಾಡುತ್ತಿದ್ದರು. ನಾವು ಅಲ್ಲಿನ ಭದ್ರತಾ ಸಿಬ್ಬಂದಿ ಜೊತೆ ಮಾತನಾಡಿದ್ದೇವೆ. ಅಲ್ಲದೇ ಇದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದೇವೆ. ಇದು ಮುಂದುವರಿದರೆ ಭಜರಂಗದಳದವರು ಇಲ್ಲಿ ಹನುಮಾನ್ ಚಾಲೀಸ ಹಾಗೂ ಸುಂದರಕಾಂಡವನ್ನು ಪಠಿಸುತ್ತೇವೆ ಎಂದು ಹೇಳಿದ್ದೇವೆ ಎಂದರು.
ಲಖನೌ ಲುಲು ಮಾಲಲ್ಲಿ ನಮಾಜ್ ಮಾಡಿದವರ ವಿರುದ್ಧ ಎಫ್‌ಐಆರ್
ಕೆಲವು ದಿನಗಳ ಹಿಂದೆ ಲಕ್ನೋದ ಲುಲು ಮಾಲ್‌ನಲ್ಲಿಯೂ ಇದೇ ರೀತಿಯ ವಿವಾದ ಉಂಟಾಗಿತ್ತು. ಮುಸ್ಲಿಂ ಸಮುದಾಯದ ಕೆಲವರು ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಲುಲು ಮಾಲ್‌ನ ಮ್ಯಾನೇಜ್‌ಮೆಂಟ್ ಎಲ್ಲಾ ರೀತಿಯ ಧಾರ್ಮಿಕ ಆಚರಣೆಯನ್ನು ನಿಷೇಧಿಸಿತ್ತು.