ಲಖನೌ ಲುಲು ಮಾಲಲ್ಲಿ ನಮಾಜ್ ಮಾಡಿದವರ ವಿರುದ್ಧ ಎಫ್‌ಐಆರ್
ಉತ್ತರ ಪ್ರದೇಶದ ಲಖನೌನಲ್ಲಿರುವ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡಿದ್ದು ಭಾರೀ ವಿವಾದವನ್ನು ಸೃಷ್ಟಿಸಿದ ಬೆನ್ನಲ್ಲೇ ಮಾಲ್ ಆಡಳಿತಾಧಿಕಾರಿಗಳು ನಮಾಜ್ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುವಾರ ರಾತ್ರಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಲಖನೌ: ಉತ್ತರ ಪ್ರದೇಶದ ಲಖನೌನಲ್ಲಿರುವ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡಿದ್ದು ಭಾರೀ ವಿವಾದವನ್ನು ಸೃಷ್ಟಿಸಿದ ಬೆನ್ನಲ್ಲೇ ಮಾಲ್ ಆಡಳಿತಾಧಿಕಾರಿಗಳು ನಮಾಜ್ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುವಾರ ರಾತ್ರಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಮಾಲ್ ಉದ್ಘಾಟಿಸಿದ್ದು, ಸೋಮವಾರದಿಂದ ಜನರಿಗಾಗಿ ಮಾಲ್ ತೆರೆಯಲ್ಪಟ್ಟಿತ್ತು. ಮಂಗಳವಾರ ಕೆಲವರು ಮಾಲ್‌ನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾ ಮಾಲ್ ಬಹಿಷ್ಕಾರಕ್ಕೂ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಾಲ್ ಆಡಳಿತಾಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದು, ಮಾಲ್‌ನ ಯಾವುದೇ ಸಿಬ್ಬಂದಿ ಇದರಲ್ಲಿ ಭಾಗಿಯಾಗಿರಲಿಲ್ಲ ಎಂಬುದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆಯಷ್ಟೆ ತೆರೆದ ಲುಲು ಮಾಲ್‌ನಲ್ಲಿ ಕೆಲ ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಜು.12ನೇ ತಾರೀಖಿನದ್ದು ಎಂದು ಹೇಳಲಾಗುತ್ತಿದೆ. ಅಖಿಲ ಭಾರತ ಹಿಂದೂ ಮಾಹಾ ಸಭಾ ಇದನ್ನು ತೀವ್ರವಾಗಿ ಖಂಡಿಸಿದ್ದು, ಮಾಲ್ ಬಹಿಷ್ಕಾರಕ್ಕೆ ಕರೆ ನೀಡಿದೆ. ಹಿಂದೂ ಮಾಹಾ ಸಭಾ ರಾಷ್ಟ್ರೀಯ ವಕ್ತಾರ ಶಿಶಿರ್ ಚರ್ತುವೇದಿ ಮಾತನಾಡಿ, 'ಸರ್ಕಾರಿ ಆದೇಶಗಳ ಹೊರತಾಗಿಯೂ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿ ಸರ್ಕಾರಿ ಆದೇಶಗಳ ಉಲ್ಲಂಘನೆ ಮಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ ಎಂದು ಹೇಳಿದ್ದರು.
ಕೇರಳದ ಮೂಲದ ಯುಎಇ ಉದ್ಯಮಿ ಯೂಸುಫ್ ಅಲಿ ಮುಸಲಿಯಮ್ ವೀಟಿಲ್ ಅಬ್ದುಲ್ ಖಾದರ್, ಅವರಿಗೆ ಸೇರಿದ ಮಾಲ್ ಇದಾಗಿದೆ.
ಅವರು ವಿಶ್ವಾದ್ಯಂತ ಲುಲು ಹೈಪರ್‌ಮಾರ್ಕೆಟ್ ನೆಟ್‌ವರ್ಕ್ ಮತ್ತು ಲುಲು ಇಂಟರ್‌ನ್ಯಾಶನಲ್ ಶಾಪಿಂಗ್ ಮಾಲ್ ಅನ್ನು ಹೊಂದಿರುವ ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಮುಖ್ಯ ನಿರ್ವಹಣಾ ನಿರ್ದೇಶಕ(CMD) ಆಗಿದ್ದಾರೆ. ಕೆಲ ದಿನಗಳ ಹಿಂದೆ ಕೇರಳದ ತಿರುವನಂತಪುರದಲ್ಲಿ ಲುಲು ಮಾಲ್ ಮಧ್ಯರಾತ್ರಿ ಸೇಲ್ ಆಯೋಜಿಸಿತ್ತು. ಈ ವೇಳೆ ಭಾರಿ ಜನಸ್ತೋಮವೇ ಇಲ್ಲಿ ನೆರೆದು ನೂಕಾಟ ತಳ್ಳಾಟಕ್ಕೆ ಕಾರಣವಾಗಿತ್ತು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.