ವ್ಯಕ್ತಿ ಮೇಲೆ ಮೂತ್ರ : ಆರೋಪಿ ಬದಲು ತಂದೆ ಮನೆ ಧ್ವಂಸಕ್ಕೆ ಬ್ರಾಹ್ಮಣ ಸಂಘ ಕಿಡಿ
ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾನ ತಂದೆಯ ಮನೆಯನ್ನು ಒಡೆದು ಹಾಕಿದ ಕ್ರಮ ಅಕ್ಷಮ್ಯ ಎಂದು ಬ್ರಾಹ್ಮಣ ಸಂಘ ಕಿಡಿಕಾರಿದೆ.
ಸಿಧಿ: ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾನ ತಂದೆಯ ಮನೆಯನ್ನು ಒಡೆದು ಹಾಕಿದ ಕ್ರಮ ಅಕ್ಷಮ್ಯ ಎಂದು ಬ್ರಾಹ್ಮಣ ಸಂಘ ಕಿಡಿಕಾರಿದೆ. ಅಲ್ಲದೇ ಇದರ ವಿರುದ್ಧ ಹೈಕೋರ್ಟ್ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವೇಶ್ ಶುಕ್ಲಾಗೆ ಸೇರಿದ ಮನೆಯನ್ನು ಬುಲ್ಡೋಜರ್ ಬಳಸಿ ಒಡೆದು ಹಾಕಲಾಗಿತ್ತು. ಆದರೆ ಈ ಮನೆಯಲ್ಲಿ ಶುಕ್ಲಾನ ಪೋಷಕರು ವಾಸಿಸುತ್ತಿದ್ದು, ಶುಕ್ಲಾ ಮಾಡಿದ ತಪ್ಪಿಗೆ ಅವರ ತಂದೆಯ ಮನೆಯನ್ನು ಒಡೆದುಹಾಕಿದ ಕ್ರಮವನ್ನು ಬ್ರಾಹ್ಮಣ ಸಂಘ ವಿರೋಧಿಸಿದೆ.
ಪ್ರವೇಶ್ ಶುಕ್ಲಾನಂತಹ ವ್ಯಕ್ತಿಯನ್ನು ಯಾವುದೇ ಜಾತಿ ಮತ್ತು ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ಬೇರೊಬ್ಬರನ್ನು ಶಿಕ್ಷಿಸುವುದು ನ್ಯಾಯ ಸಮ್ಮತವೇ ಎಂದು ಸಂಘದ ಮುಖ್ಯಸ್ಥ ಪಂಡಿತ್ ಪುಷ್ಪೇಂದ್ರ ಮಿಶ್ರಾ ಪ್ರಶ್ನಿಸಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ಗೆ (High court)ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದವನನ್ನು ಕ್ಷಮಿಸಿ: ಸಂತ್ರಸ್ತ
ನನ್ನ ಮೇಲೆ ಮೂತ್ರ ಮಾಡಿದವವನ್ನು ಕ್ಷಮಿಸಿಬಿಡಿ, ಆತನಿಗೆ ತನ್ನ ತಪ್ಪಿನ ಅರಿವಾಗಿದೆ ಎಂದು ಮೂತ್ರ ವಿಸರ್ಜನೆ (Urinating) ಪ್ರಕರಣದ ಸಂತ್ರಸ್ತ ದಶ್ಮತ್ ರಾವತ್ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಮಾಡಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದ್ದ ಪ್ರವೇಶ್ ಶುಕ್ಲಾನನ್ನು (Pravesh Shukla) ಬುಧವಾರ ಪೊಲೀಸರು ಬಂಧಿಸಿದ್ದರು. ಅಲ್ಲದೇ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ, ಪರಿಶಿಷ್ಟ ಜಾತಿ (Scheduled caste) ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನನ್ನ ಮೇಲೆ ಮೂತ್ರ ಮಾಡುವ ಮೂಲಕ ಶುಕ್ಲಾ ತಪ್ಪು ಎಸಗಿದ್ದಾರೆ. ಏನೆಲ್ಲಾ ಆಗಿದೆಯೋ ಅದು ನಡೆದು ಹೋಗಿದೆ. ಈಗ ಅವರಿಗೆ ತನ್ನ ತಪ್ಪಿನ ಅರಿವಾಗಿದೆ. ಅವರು ನಮ್ಮ ಊರಿನ ಪಂಡಿತರು (ಅರ್ಚಕರು). ಹಾಗಾಗಿ ಆತನನ್ನು ಕ್ಷಮಿಸುವಂತೆ ಹಾಗೂ ಬಿಡುಗಡೆ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ರಾವತ್ ಹೇಳಿದ್ದಾರೆ.
ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಸಂತ್ರಸ್ತನಿಗೆ ಗಂಗಾಜಲ ಪ್ರೋಕ್ಷಿಸಿ ಕಾಂಗ್ರೆಸ್ 'ಶುದ್ಧೀಕರಣ'
ಮೂತ್ರವಿಸರ್ಜನೆ ಪ್ರಕರಣದ ಸಂತ್ರಸ್ತನಾದ ದಶ್ಮತ್ ರಾವತ್ ಅವರ ನಿವಾಸಕ್ಕೆ ಭೇಟಿ ನೀಡಿದ ಸ್ಥಳೀಯ ಕಾಂಗ್ರೆಸ್ ನಾಯಕರು (Congress leaders) ಆತನ ಮೇಲೆ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಿದ್ದಾರೆ. ರಾವತ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಾದ ತೊಳೆದ ಘಟನೆಯ ಬಳಿಕ ಕಾಂಗ್ರೆಸ್ ಶುದ್ಧೀಕರಣ ಕಾರ್ಯ ಮಾಡಿದೆ. ಪಕ್ಷದ ಕಾರ್ಯಕರ್ತರು ಮತ್ತು ರಾವತ್ ಅವರ ಕುಟುಂಬದ ಜೊತೆ ಈ ಕಾರ್ಯವನ್ನು ನೆರವೇರಿಸಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾವು ಗಂಗಾಜಲದಿಂದ ನಿಮ್ಮನ್ನು ಶುದ್ಧೀಕರಣ ಮಾಡಲು ಬಂದಿದ್ದೇವೆ. ನೀವು ಕಾಂಗ್ರೆಸ್ ಪಕ್ಷದ ಜೊತೆಗಿದ್ದೀರಿ. ನಿಮಗೆ ಯಾರು ತೊಂದರೆ ಕೊಡುವುದಿಲ್ಲ. ನಿಮಗೆ ಮನೆಯನ್ನು ಕಟ್ಟಿಕೊಡಲಾಗುವುದು. ನಮಗೆ ಶುದ್ಧೀಕರಣ ಮಾಡಲು ಅನುಮತಿ ಕೊಡಿ ಎಂದು ಕಾಂಗ್ರೆಸ್ಸಿಗರು ಕೇಳಿದರು. ಇದಕ್ಕೆ ರಾವತ್ ಒಪ್ಪಿಕೊಂಡರು.
ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ