ಬರೋಬ್ಬರಿ 10 ವರ್ಷದಿಂದ ಭಾರತದಲ್ಲಿ ನೇಹಾ ಹೆಸರಿನಲ್ಲಿ ನೆಲೆಸಿದ್ದ ಮಂಗಳಮುಖಿಯ ಅಸಲಿ ಮುಖ ಬಹಿರಂಗವಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಇದು ನೇಹಾ ಅಲ್ಲ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ.
ಭೋಪಾಲ್ (ಜು.19) ಭಾರತದಲ್ಲಿ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುತ್ತಿದೆ. ಸುಲಭವಾಗಿ ನಕಲಿ ಭಾರತದ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಮಾಡಿಸಿಕೊಂಡು ಭಾರತ ಪ್ರವೇಶಿಸುವ ಈ ಬಾಂಗ್ಲಾದೇಶಿ ನುಸುಳುಕೋರರು ಕರ್ನಾಟಕ ಪ್ರತಿ ಜಿಲ್ಲೆ ಜಿಲ್ಲೆಯಲ್ಲಿ ಸೇರಿ ದೇಶಾದ್ಯಂತ ಹರಡಿಕೊಂಡಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳದ ಹಿಂದೂ ಹೆಸರಿನಲ್ಲಿ ಹಲವರು ಭಾರತದಲ್ಲಿ ನೆಲೆಸಿದ್ದಾರೆ. ಇದೀಗ ಇದೇ ರೀತಿಯ ಅಚ್ಚರಿ ಘಟನೆ ಬಯಲಾಗಿದೆ. ಕಳೆದ 10 ವರ್ಷದಿಂದ ಮಂಗಳಮುಖಿಯಾಗಿ ನೆಲೆಸಿದ್ದ ನೇಹಾ ಇದೀಗ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ ಅಬ್ದುಲ್ ಕಲಾಂ ಎಂದು ಪತ್ತೆಯಾಗಿದೆ.
ಮುಂಬೈನಲ್ಲಿ 2 ವರ್ಷ, ಭೋಪಾಲ್‌ನಲ್ಲಿ 8 ವರ್ಷ
ಬಾಂಗ್ಲಾದೇಶದಿಂದ ಅಕ್ರಮವಾಗಿ ಮುಂಬೈಗೆ ಬಂದ ಅಬ್ದುಲ್ ಕಲಾಂ 2 ವರ್ಷ ಮುಂಬೈನಲ್ಲಿ ಹಲವೆಡೆ ಕೆಲಸ ಮಾಡಿದ್ದಾನೆ. ಬಳಿಕ ಭೋಪಾಲ್‌ಗೆ ತೆರಳಿದ ಇದೇ ಅಬ್ದುಲ್ ಕಲಾಂ, ರೈಲು ಇಳಿಯುತ್ತಿದ್ದಂತೆ ನೇಹಾ ಆಗಿ ಬದಲಾಗಿದ್ದ. ಮಂಗಳಮುಖಿಯಾಗಿ ವೇಷ ಬದಲಾಯಿಸಿದ ಅಬ್ದುಲ್ ಕಲಾಂ ಭೋಪಾಲ್ ನಗರದಲ್ಲಿ ಕಳೆದ 8 ವರ್ಷಗಳಿಂದ ನೆಲೆಸಿದ್ದ. ಮಂಗಳಮುಖಿ ವೇಷದಲ್ಲಿ ಪ್ರತಿ ದಿನ ಭೋಪಾಲ್ ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದ. ರಾತ್ರಿ ವೇಳೆ ಇದೇ ವೇಷದಲ್ಲಿ ಇದ್ದನೋ ಅಥವಾ ಬೇರೆ ಅಕ್ರಮ ಚಟುವಟಿಕೆಯಲ್ಲಿದ್ದನೋ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಭೋಪಾಲ್ ಪೊಲೀಸರು ಕಾರ್ಯಾಚರಣೆಯಲ್ಲಿ ನೇಹಾ ಅಲಿಯಾಸ್ ಅಬ್ದುಲ್ ಕಲಾಂ ಸಿಕ್ಕಿ ಬಿದ್ದಿದ್ದಾನೆ.
ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾತ್ರವಲ್ಲ ಇದೇ ಭಾರತದ ಪಾಸ್‌ಪೋರ್ಟ್
ಭಾರತಕ್ಕೆ ನುಸುಳುವ ಮೊದಲೇ ಇಲ್ಲಿನ ಮತದಾರರ ಚೀಟಿ, ಆಧಾರ್ ಕಾರ್ಡ್ ಮಾಡಿಕೊಡುವ ಹಲವು ಸಂಸ್ಥೆಗಳು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ. 20,000 ರೂಪಾಯಿ, 30,000 ರೂಪಾಯಿ ಸೇರಿದಂತೆ ಒಂದೊಂದು ಪ್ಯಾಕೇಜ್ ಮೂಲಕ ಈ ರಹಸ್ಯ ಎಜೆನ್ಸಿಗಳು ಹಣ ವಸೂಲಿ ಮಾಡಿ ಹಣಕ್ಕೆ ತಕ್ಕಂತೆ ನಕಲಿ ಆಧಾರ್ ಕಾರ್ಡ್, ಮತದಾರರ ಚೀಟಿ ಮಾಡಿಕೊಡುತ್ತದೆ ಅನ್ನೋದು ಈಗಾಗಲೇ ಹಲವು ತನಿಖೆಯಿಂದ ಬಯಲಾಗಿದೆ. ಇದೇ ರೀತಿ ಭಾರತ ಪ್ರವೇಶಿಸಿದ ಈತನ ಬಳಿ ಭಾರತದ ಆಧಾರ್ ಕಾರ್ಡ, ಭೋಪಾಲ್ ನಗರದಲ್ಲಿ ರೇಷನ್ ಕಾರ್ಡ್ ಇದೆ. ಇದೇ ದಾಖಲೆ ಬಳಸಿ ಈತ ನಕಲಿ ಭಾರತದ ಪಾಸ್‌ಪೋರ್ಟ್ ಕೂಡ ಮಾಡಿಸಿದ್ದಾನೆ.
ಈತನೊಬ್ಬನಲ್ಲ, ಇನ್ನೂ ಇದ್ದಾರೆ ಇದೇ ರೀತಿಯ ನಕಲಿ ಮಂಗಳಮುಖಿಯರು
ಭೋಪಾಲ್ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈತ ನಕಲಿ ಪಾಸ್‌ಪೋರ್ಟ್ ಬಳಸಿ ಹಲವು ಬಾರಿ ವಿದೇಶ ಪ್ರವಾಸ ಮಾಡಿದ್ದಾನೆ. ಮುಂಬೈನಲ್ಲಿನ ಮಂಗಳಮುಖಿ ಗ್ಯಾಂಗ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾನೆ. ಬಾಂಗ್ಲಾದೇಶದಿಂದ ಇದೇ ರೀತಿ ಅಕ್ರಮವಾಗಿ ನುಸುಳಿ ಇಲ್ಲಿ ಹಿಂದೂ ಹೆಸರಿನಲ್ಲಿ ತಲೆಮರೆಸಿಕೊಂಡಿರುವ ಪಟ್ಟಿ ಹೆಚ್ಚಾಗುತ್ತಿದೆ. ಇದೀಗ ಮಂಗಳಮುಖಿಯರ ರೂಪದಲ್ಲೂ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಹಲವು ಭಾರಿ ಮನೆ ಬದಲಿಸಿರುವ ಅಬ್ದುಲ್ಲಾ
ಭೋಪಾಲ್ ನಗರದ ಬಧ್ವಾರದಲ್ಲಿ ನೆಲೆಸಿದ್ದ ಈತ ಹಲವು ಬಾರಿ ಮನೆ ಬದಲಿಸಿದ್ದಾನೆ. ಅಬ್ದುಲ್ಲಾ ಬಂದನಧಿಂದ ಇದೀಗ ಭಾರತದಲ್ಲಿ ಈ ನಕಲಿ ಮಂಗಳಮುಖಿಯರ ಅತೀ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವ ಅನುಮಾನ ಬಲಗೊಂಡಿದೆ.
