ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರು ಪಂದ್ಯದ ನಡುವೆ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ಇಬ್ಬರು ನೂಕಾಟ, ತಳ್ಳಾಟ ನಡೆಸಿದ್ದಾರೆ. ಲೈವ್ ಪಂದ್ಯದಲ್ಲೇ ಈ ಘಟನೆ ನಡೆದಿದೆ.
ಢಾಕ(ಮೇ.29) ಸೌತ್ ಆಫ್ರಿಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಈ ಪ್ರವಾಸ ಇದೀಗ ವಿಶ್ವದಲ್ಲೇ ಭಾರಿ ಸದ್ದು ಮಾಡುತ್ತಿದೆ. ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಆಟಗಾರರ ಲೈವ್ ಪಂದ್ಯದಲ್ಲೇ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಕ್ರಿಕೆಟಿಗರ ಸ್ಲೆಡ್ಜಿಂಗ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಕ್ರೀಸ್‌ನಲ್ಲಿದ್ದ ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ನಡುವೆ ಸ್ಲೆಡ್ಜಿಂಗ್ ತಾರಕಕ್ಕೇರಿ ಹೊಡೆದಾಟವೇ ನಡೆದು ಹೋಗಿದೆ.
ತಾರಕಕ್ಕೇರಿದ ಸ್ಲೆಡ್ಜಿಂಗ್
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎಮರ್ಜಿಂಗ್ ಟೀಂ ಅಭ್ಯಾಸ ಪಂದ್ಯ ಆಡಿತ್ತು. ನಾಲ್ಕು ದಿನಗಳ ಈ ಪಂದ್ಯದಲ್ಲಿ ಬಾಂಗ್ಲಾದೇಶ ಎಮರ್ಜಿಂಗ್ ಟೀಂ ಹಾಗೂ ಸೌತ್ ಆಫ್ರಿಕಾ ಎಮರ್ಜಿಂಗ್ ಟೀಂ ಮುಖಾಮುಖಿಯಾಗಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಬಾಂಗ್ಲಾದೇಶ ಬ್ಯಾಟರ್ ರಿಪ್ಪೊನ್ ಮೊಂಡಾಲ್ ಹಾಗೂ ಸೌತ್ ಆಫ್ರಿಕಾದ ವೇಗಿ ಶೆಪೋ ಎನ್‌ಟುಲಿ ನಡುವೆ ಸ್ಲೆಡ್ಜಿಂಗ್ ಆರಂಭಗೊಂಡಿತ್ತು.ಪ್ರತಿ ಎಸೆತದ ಬಳಿಕ ಎನ್‌ಟುಲಿ ಸ್ಲೆಡ್ಜಿಂಗ್ ಮಾಡಿದರೆ, ಇತ್ರ ಮೊಂಡಾಲ್ ಕೂಡ ತಿರುಗೇಟು ನೀಡಿದ್ದಾರೆ. ಇದು ತಾರಕಕ್ಕೇರಿದೆ.
ಎನ್‌ಟುಲಿ ಎಸೆತದಲ್ಲಿ ರಿಪ್ಪನ್ ಮೊಂಡಾಲ್ ನೇರ ಸಿಕ್ಸರ್ ಸಿಡಿಸಿದ್ದಾರೆ. ವೇಗವಾಗಿ ಓಡಿ ಬಂದು ಹಾಕಿದ ಎಸೆತವನ್ನು ಅಷ್ಟೇ ವೇಗದಲ್ಲಿ ಸಿಕ್ಸರ್ ಸಿಡಿಸಿದ ಮೊಂಡಾಲ್ ವೇಗಿಗೆ ತಿರುಗೇಟು ನೀಡಿದ್ದಾನೆ, ಸಿಕ್ಸರ್ ಜೊತೆಗೆ ಸ್ಲೆಡ್ಜಿಂಗ್ ಮೂಲಕವೂ ತಿರುಗೇಟು ನೀಡಿದ ಕಾರಣ, ವೇಗಿ ಆಕ್ರೋಶ ಹೆಚ್ಚಾಗಿದೆ. ಬಳಸಿದ ಕೆಲ ಪದಗಳಿಂದ ವೇಗಿ ಎನ್‌ಟುಲಿ ನೇರವಾಗಿ ರಿಪ್ಪೊನ್ ಮೊಂಡಾಲ್ ಬಳಿ ತೆರಳಿ ದೂಡಿದ್ದಾರೆ. ತಳ್ಳಾಟ, ನೂಕಾಟ ನಡೆದಿದೆ, ರಿಪ್ಪೊನ್ ಮೊಂಡಾಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದೇ ವೇಳೆ ಇತರ ಆಟಗಾರರು ಸೇರಿಕೊಂಡಿದ್ದಾರೆ.
ಮಧ್ಯಪ್ರವೇಶಿಸಿದ ಅಂಪೈರ್
ಇವರಿಬ್ಬರ ಜಗಳ ತಾರಕಕ್ಕೇರಿದೆ. ಸಹ ಆಟಗಾರರ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಿದೆ. ಇತ್ತ ಅಂಪೈರ್ ಇಬ್ಬರು ಆಟಗಾರರ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು. ಕೊನೆಗೂ ಅಂಪೈರ್ ಮಧ್ಯಪ್ರವೇಶದಿಂದ ಜಗಳ ನಿಂತಿದೆ.ಇತ್ತ ಭದ್ರತಾ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿದ್ದಾರೆ.
ಕ್ರಿಕೆಟ್ ಪಂದ್ಯದಲ್ಲಿ ಸ್ಲೆಡ್ಜಿಂಗ್ ಸಾಮಾನ್ಯವಾಗಿದೆ. ಇದು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಸಾಮಾನ್ಯವಾಗಿ ಕ್ರಿಕೆಟಿಗರ ಸ್ಲೆಡ್ಜಿಂಗ್ ಬಳಿಕ ಜಗಳವಾಗಿ, ಮಾರಾಮಾರಿಯಾಗಿ ಬದಲಾದ ಪರಿಸ್ಥಿತಿಗಳು ಕಡಿಮೆ. ಮುಖಾಮುಖಿಯಾಗುವುದು, ಸ್ಲೆಡ್ಜಿಂಗ್‌ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮೂಲಕ ತಿರುಗೇಟು ನೀಡುವುದು ಸಾಮಾನ್ಯ. ಭಾರತ ಪಾಕಿಸ್ತಾನ ಪಂದ್ಯದಲ್ಲಿ ಈ ರೀತಿಯ ಸ್ಲೆಡ್ಜಿಂಗ್ ಹೆಚ್ಚಾಗಿತ್ತು. ಇನ್ನು ಆಸ್ಟ್ರೇಲಿಯಾ ತಂಡ ಕೂಡ ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮವಾಗಿದೆ.
