ಭೋಪಾಲ್‌ ಅನಿಲ ದುರಂತದಲ್ಲಿ ಸಾವು ಕಂಡ ವ್ಯಕ್ತಿಗಳಿಗೆ ನೀಡಿದ ಪರಿಹಾರ ಮೊತ್ತವನ್ನು ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಕೇಸ್‌ ಮತ್ತೆ ಓಪನ್‌ ಮಾಡಿದರೆ, ಸಂತ್ರಸ್ಥರಿಗೆ ತೊಂದರೆಗಳು ಹೆಚ್ಚಾಗುತ್ತದೆ ಎಂದು ಹೇಳಿದೆ. 

ನವದೆಹಲಿ (ಮಾ.14): ದೇಶದ ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳಿಗೆ ಕನ್ನಡಿಯಂತಿರುವ ಮಧ್ಯಪ್ರದೇಶದ ಭೋಪಾಲ್‌ ಅನಿಲ ದುರಂತದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಅನಿಲ ದುರಂತದ ಸಂತ್ರಸ್ತರಿಗೆ ನೀಡುವ ಪರಿಹಾರವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ಯೂನಿಯನ್‌ ಕಾರ್ಬೈಡ್‌ ಕಂಪನಿಯಿಂದ ಹೆಚ್ಚುವರಿಗಾಗಿ 7800 ಕೋಟಿ ರೂಪಾಯಿ ಪರಿಹಾರಕ್ಕೆ ಅನಿಲ ದುರಂತದ ಸಂತ್ರಸ್ತರು ಬೇಡಿಕೆ ಇಟ್ಟಿದನ್ನು ತಿಳಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಅಭಯ್ ಎಸ್. ಓಕ್, ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆಕೆ ಮಹೇಶ್ವರಿ ಅವರ ಪೀಠವು ಪ್ರಕರಣವನ್ನು ಪುನಃ ತೆರೆಯುವುದರಿಂದ ಸಂತ್ರಸ್ತರ ಕಷ್ಟಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂದು ಹೇಳಿದೆ. ಕೇಂದ್ರ ಸರ್ಕಾರವು 2010ರಲ್ಲಿ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಿದ್ದರೆ, ಇದರ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2023ರ ಜನವರಿ 12 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, ಅಇಲ ದುರಂತದ ಸಂತ್ರಸ್ಥರನ್ನು ಗೊಂದಲದಲ್ಲಿ ಇರಿಸಲು ಸಾಧ್ಯವಿಲ್ಲ ಎಂದಿತ್ತು.

ಕೇಂದ್ರ ಸರ್ಕಾರದ ಕ್ಯುರೇಟಿವ್‌ ಅರ್ಜಿಯನ್ನು ವಜಾ ಮಾಡುವ ಮುನ್ನ ತನ್ನ ತೀರ್ಪಿನಲ್ಲಿ ವಿವರಗಳನ್ನು ತಿಳಿಸಿದ ಸುಪ್ರೀಂ ಕೋರ್ಟ್‌, ಯೂನಿಯನ್‌ ಕಾರ್ಬೈಡ್‌ ಕಾರ್ಪೋರೇಷನ್‌ ಕಂಪನಿಗೆ ಹೆಚ್ಚಿನ ಪರಿಹಾರದ ಹೊರೆ ಹೇರಲು ಸಾಧ್ಯವಿಲ್ಲ. ಇನ್ನು ಎರಡು ದಶಕಗಳಿಂದ ಸರ್ಕಾರ ಈ ಬಗ್ಗೆ ಗಮನವೇ ನೀಡದಿರುವುದು ನಮಗೆ ಬೇಸರ ತಂದಿದೆ. ಈಗಾಗಲೇ ಸಂತ್ರಸ್ತರಿಗೆ ಅವರ ನಷ್ಟಕ್ಕಿಂತ ಆರು ಪಟ್ಟು ಹೆಚ್ಚಿನ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರವು ಆರ್ ಬಿಐ ಬಳಿ ಇರುವ 50 ಕೋಟಿ ರೂಪಾಯಿಗಳನ್ನು ಸಂತ್ರಸ್ತರ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು. ಈ ಪ್ರಕರಣ ಮತ್ತೆ ತೆರೆದರೆ ಯೂನಿಯನ್ ಕಾರ್ಬೈಡ್ ಕಂಪನಿಗೆ ಮಾತ್ರ ಅನುಕೂಲವಾಗಲಿದ್ದು, ಸಂತ್ರಸ್ತರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದೆ.

ಕ್ಯುರೇಟಿವ್‌ ಅರ್ಜಿ ಸಲ್ಲಿಸಿದ್ದ ಕೇಂದ್ರ: ಅನಿಲ ದುರಂತದ ನಂತರ ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ $ 470 ಮಿಲಿಯನ್ (ರೂ 715 ಕೋಟಿ) ಪರಿಹಾರವನ್ನು ಪಾವತಿಸಿದ ನಂತರ ಸಂತ್ರಸ್ತರು ಹೆಚ್ಚಿನ ಪರಿಹಾರವನ್ನು ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. 1984ರ ಅನಿಲ ದುರಂತದ ಸಂತ್ರಸ್ತರಿಗೆ ಡೌ ಕೆಮಿಕಲ್ಸ್ ನಿಂದ 7,844 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರವನ್ನು ಕೇಂದ್ರವು ಕೋರಿತ್ತು. ಇದಕ್ಕಾಗಿ 2010ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿತ್ತು.

Pollution Control: ಭೋಪಾಲ್ ದುರಂತದ ಸ್ಮರಣೆಯಲ್ಲಿ ಮಾಲಿನ್ಯ ನಿಯಂತ್ರಣ ದಿನ

ಗ್ಯಾಸ್ ಸಂತ್ರಸ್ತರ ಪಿಂಚಣಿ ಭೋಗಿ ಸಂಘರ್ಷ ಮೋರ್ಚಾ ಅಧ್ಯಕ್ಷ ಬಾಲಕೃಷ್ಣ ನಾಮದೇವ್ ಈ ಕುರಿತಾಗಿ ಮಾತನಾಡಿದ್ದು, 1997 ರಲ್ಲಿ ಸಾವಿನ ಹಕ್ಕುಗಳ ನೋಂದಣಿಯನ್ನು ನಿಲ್ಲಿಸಿದ ನಂತರ, ದುರಂತದಲ್ಲಿ 5,295 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳುತ್ತಿದೆ. 1997 ರಿಂದ ಸಾವಿರಾರು ಜನರು ದುರಂತದಿಂದ ಉಂಟಾದ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ. ನಿಜವಾದ ಸಾವಿನ ಸಂಖ್ಯೆ 25 ಸಾವಿರಕ್ಕೂ ಹೆಚ್ಚು ಎಂದಿದ್ದಾರೆ. ಅನಿಲ ಸೋರಿಕೆಯು ಶಾಶ್ವತ ಹಾನಿಯನ್ನುಂಟುಮಾಡುತ್ತದೆ ಎಂದು ಯೂನಿಯನ್ ಕಾರ್ಬೈಡ್ ತಿಳಿದಿತ್ತು. ಈ ವಿಷಯವನ್ನು ಸರಕಾರದಿಂದ ಮರೆಮಾಚಲಾಗಿತ್ತು ಎಂದು ಹೇಳಲಾಗಿದೆ.

308 ವರ್ಷಗಳ ಬಳಿಕ ಮಧ್ಯಪ್ರದೇಶದ ಇಸ್ಲಾಂ ನಗರದ ಮೂಲ ಹೆಸರು ವಾಪಾಸ್‌!

ಏನಿದು ಭೋಪಾಲ್‌ ಅನಿಲ ದುರಂತ: ಅನಿಲ ದುರಂತವು 2-3 ಡಿಸೆಂಬರ್ 1984 ರ ಮಧ್ಯರಾತ್ರಿ ಸಂಭವಿಸಿತ್ತು. ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಟ್ಯಾಂಕ್ ಸಂಖ್ಯೆ 610 ಅಪಾಯಕಾರಿ ರಾಸಾಯನಿಕ ಮೀಥೈಲ್ ಐಸೊಸೈನೈಡ್ ಅನ್ನು ಒಳಗೊಂಡಿತ್ತು. ಈ ಅನಿಲ ನೀರಿನ ಟ್ಯಾಂಕ್‌ಗೆ ತಲುಪಿದ್ದರಿಂದ ತಾಪಮಾನವು 200 ಡಿಗ್ರಿ ತಲುಪಿತು. ಸ್ಫೋಟದೊಂದಿಗೆ ಟ್ಯಾಂಕ್‌ನ ಸುರಕ್ಷತಾ ವಾಲ್ವ್‌ ಕೂಡ ಸ್ಪೋಟವಾಗಿತ್ತು. ಆ ವೇಳೆ 42 ಟನ್ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಆಗ ಆಂಡರ್ಸನ್ ಯೂನಿಯನ್ ಕಾರ್ಬೈಡ್ ನ ಮುಖ್ಯಸ್ಥರಾಗಿದ್ದರು. ಅಪಘಾತದ ನಾಲ್ಕು ದಿನಗಳ ನಂತರ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಕೋರ್ಟ್‌ನಿಂದ ಜಾಮೀನು ಪಡೆದ ಬೆನ್ನಲ್ಲಿಯೇ ಅವರು ಅಮೆರಿಕಕ್ಕೆ ಮರಳಿದ್ದರು. ಮತ್ತೆಂದೂ ಅವರು ಭಾರತದ ಕಾನೂನಿನ ಅಡಿಗೆ ಬಂದಿರಲಿಲ್ಲ. ಆತನನ್ನು ಕೋರ್ಟ್‌ ಪರಾರಿ ಎಂದು ಘೋಷಣೆ ಮಾಡಿತು. ಅಮೆರಿಕದಿಂದ ಗಡಿಪಾರು ಮಾಡುವ ಪ್ರಯತ್ನ ನಡೆದರೂ, ಇದು ವಿಫಲವಾಯಿತು. ಆಂಡರ್ಸನ್ 2014ರ ಸೆಪ್ಟೆಂಬರ್ 29 ರಂದು ಫ್ಲೋರಿಡಾದಲ್ಲಿ 92 ನೇ ವಯಸ್ಸಿನಲ್ಲಿ ನಿಧನರಾದರು.