ಅಂದಾಜು 308 ವರ್ಷಗಳ ಹಿಂದೆ ಔರಗಜೇಬನ ಸೈನ್ಯದಿಂದ ಪರಾರಿಯಾಗಿ ಹೋಗಿದ್ದ ಸೈನಿಕ ದೋಸ್ಟ್ ಮಹಮದ್ ಖಾನ್, ಜಗದೀಶ್‌ಪುರ ನಗರದ ಮೇಲೆ ಆಕ್ರಮಣ ಮಾಡಿದ್ದಲ್ಲದೆ, ನಗರದ ಹೆಸರನ್ನು ಇಸ್ಲಾಂ ನಗರ ಎಂದು ಬದಲಾಯಿಸಿದ್ದ.
ಭೋಪಾಲ್ (ಫೆ.2): ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ, ಭೋಪಾಲ್‌ನ ಬಳಿ ಇರುವ ಇಸ್ಲಾಮ್ ನಗರದ ಹೆಸರನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದೆ. ಭೋಪಾಲ್ ನಗರದಿಂದ 14 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ನಗರವಾದ ಇಸ್ಲಾಮ್ ನಗರದ ವೀಕ್ಷಣೆಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಬರುತ್ತಾರೆ. 308 ವರ್ಷಗಳ ಹಿಂದೆ 17ನೇ ಶತಮಾನದಲ್ಲಿ ಜಗದೀಶಪುರ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ನಗರದ ಮೇಲೆ ಔರಂಗಜೇಬನ ಸೈನ್ಯದಿಂದ ಪರಾರಿಯಾಗಿದ್ದ ಯೋಧ ದೋಸ್ತ್ ಮೊಹಮದ್ ಖಾನ್ ಆಕ್ರಮಣ ಮಾಡಿದ್ದ. ಈ ನಗರವನ್ನು ಗೆದ್ದು ಅದಕ್ಕೆ ಇಸ್ಲಾಮ್ ನಗರ ಎಂದು ಮರು ನಾಮಕರಣ ಮಾಡಿದ್ದ. ಈಗ ಮಧ್ಯಪ್ರದೇಶ ಸರ್ಕಾರ ನಗರಕ್ಕೆ 'ಜಗದೀಶ್‌ಪುರ' ಎನ್ನುವ ಹಳೆಯ ಹೆಸರನ್ನೇ ನೀಡಿದೆ.
ಈ ನಗರದ ಹೆಸರು ಬದಲಿಸಬೇಕು ಎಂದು ಕಳೆದ ಮೂರು ದಶಕಗಳಿಂದ ಬೇಡಿಕೆ ಇಡಲಾಗಿತ್ತು. ಈಗ ಅದು ಈಡೇರಿದೆ. ಕೇಂದ್ರ ಸರ್ಕಾರದಿಂದ ಹೆಸರು ಬದಲಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ರಾಜ್ಯ ಸರ್ಕಾರವೂ ಬುಧವಾರ ಅಧಿಸೂಚನೆ ಹೊರಡಿಸಿದೆ. ಈಗ ಭೋಪಾಲ್‌ನ ಇಸ್ಲಾಮ್ ನಗರದ ಹೆಸರು ಜಗದೀಶ್‌ಪುರ ಎಂದು ಬದಲಾಯಿಸಲಾಗಿದೆ. ಈಗ ಫಂಡಾ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತ್ ಇಸ್ಲಾಂ ನಗರವನ್ನು ಅದರ ಹಳೆಯ ಹೆಸರು ಜಗದೀಶ್‌ಪುರ ಎಂದೇ ಕರೆಯಲಾಗುತ್ತದೆ.
ಈ ಗ್ರಾಮವನ್ನು ಜಗದೀಶ್‌ಪುರ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಕಳೆದ ಮೂರು ದಶಕಗಳಿಂದ ಇತ್ತು. 17 ವರ್ಷಗಳ ಹಿಂದೆ ಇಲ್ಲಿನ ಪಂಚಾಯಿತಿ ಜಗದೀಶ್‌ಪುರ ಎಂದು ಮರುನಾಮಕರಣ ಮಾಡುವ ಇಚ್ಛೆ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಕಳೆದ ವರ್ಷವೂ ಈ ವಿಚಾರ ಇನ್ನಷ್ಟು ಬಿಸಿಯಾಗಿತ್ತು. ಹಜುರ್ ವಿಧಾನಸಭಾ ಕ್ಷೇತ್ರದ ಶಾಸಕ ಮಾತ್ರವಲ್ಲದೆ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕೂಡ ಈ ನಗರದ ಹೆಸರನ್ನು ಬದಲಾಯಿಸಬೇಕು ಎಂದು ಪಟ್ಟುಹಿಡಿದಿದ್ದರು.
ರಾಷ್ಟ್ರಪತಿ ಭವನದ ಬಳಿಕ ದೆಹಲಿ ವಿವಿಯ ಮೊಘಲ್ ಗಾರ್ಡನ್ ಹೆಸರೂ ಬದಲು!
ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ: ಹೆಸರು ಬದಲಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ ನಗರದಲ್ಲಿ ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಬೆರಾಸಿಯಾ ಶಾಸಕ ವಿಷ್ಣು ಖತ್ರಿ, ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್, ಹಜುರ್ ಶಾಸಕ ಮತ್ತು ಪುರಾತತ್ವ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಇನ್ನು ಮುಂದೆ 'ಅಮೃತ್ ಗಾರ್ಡನ್'!
ಭಯಾನಕ ಇತಿಹಾಸ: ಜಗದೀಶ್‌ಪುರ ಇಸ್ಲಾಮ್ ನಗರವಾದ ಇತಿಹಾಸವು ಅತ್ಯಂತ ಭಯಾನಕವಾಗಿದೆ. ದೋಸ್ತ್ ಮೊಹಮ್ಮದ್ ಖಾನ್ ಹಿಂದೂ ರಾಜನನ್ನು ಊಟಕ್ಕೆ ಆಹ್ವಾನಿಸಿ ಅವನನ್ನು ಕೊಂದು ಇಸ್ಲಾಮ್ ನಗರವನ್ನಾಗಿ ಮಾಡಿದ್ದ. 1715 ರಲ್ಲಿ, ಜಗದೀಶ್‌ಪುರದ ರಾಜನಾಗಿ ದೇವ್ರಾ ಚೌಹಾಣ್ ಆಳ್ವಿಕೆ ಮಾಡುತ್ತಿದ್ದರು. ಆತನ ಹೆಸರೇ ಇಡೀ ನಗರದ್ಲಿ ಪ್ರಖ್ಯಾತಿಯಾಗಿತ್ತು. ವಿಷಯ ಭೋಪಾಲ್ ನ ನವಾಬ್ ದೋಸ್ತ್ ಮೊಹಮ್ಮದ್ ಖಾನ್ ಗೆ ತಲುಪಿದಾಗ ಆತ ಸ್ನೇಹದ ಸಂಚು ರೂಪಿಸಿ ರಾಜನಿಗೆ ಸ್ನೇಹದ ಹಸ್ತ ಚಾಚಿದ್ದ. ಬೆಸ್ ನದಿಯ ದಡದಲ್ಲಿ ಔತಣಕ್ಕೆ ದೇವ್ರಾ ಚೌಹಾಣ್ ಅವರಿಗೆ ಆಹ್ವಾನ ನೀಡಿದ್ದ. ದೇವ್ರಾ ಚೌಹಾಣ್ ಮುಂದಿನ ಆಪತ್ತಿನ ವಿಚಾರ ಗೊತ್ತಿಲ್ಲದೆ ಔತಣಕ್ಕೆ ತೆರಳಿದ್ದರು. ಎರಡೂ ಕಡೆಯ ಜನರು ಬೆಸ್ ನದಿಯಲ್ಲಿ ಜಮಾಯಿಸಿದ್ದರು. ಪಾನ್ ತಿನ್ನುವ ನೆಪದಲ್ಲಿ ಗೆಳೆಯ ಮೊಹಮ್ಮದ್ ಖಾನ್ ಅಲ್ಲಿಂದ ಹೊರಟಾಗ ಆಗಷ್ಟೇ ಔತಣ ಕೂಟ ಶುರುವಾಗಿತ್ತು. ಆಗ ಟೆಂಟ್‌ನಲ್ಲಿ ಊಟ ಮಾಡುತ್ತಿದ್ದ ಅತಿಥಿಗಳು ಮೇಲೆ ಏಕಾಏಕಿ ದಾಳಿ ನಡೆದಿತ್ತು. ಟೆಂಟ್‌ಗಳನ್ನು ಕಿತ್ತು ಒಳನುಗ್ಗಿದ ಮೊಹಮದ್ ಖಾನ್‌ನ ಸೈನಿಕರು, ಅಲ್ಲಿದ ದೇವರಾ ಚೌಹಾಣ್ ಸೇರಿದಂತೆ ಅವರ ಸೈನಿಕರ ಕತ್ತು ಸೀಳಿ ಕೊಂದು ಹಾಕಿದರು. ಊಟ ಮಾಡುತ್ತಿದ್ದವರು ಅಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಜಗದೀಶ್‌ಪುರವನ್ನು ವಶಪಡಿಸಿಕೊಂಡಿದ್ದ ಮೊಹಮದ್ ಖಾನ್ ಅದರ ಹೆಸರನ್ನು ಇಸ್ಲಾಮ್ ನಗರವನ್ನಾಗಿ ಬದಲಾವಣೆ ಮಾಡಿದ್ದ.
