Pollution Control: ಭೋಪಾಲ್ ದುರಂತದ ಸ್ಮರಣೆಯಲ್ಲಿ ಮಾಲಿನ್ಯ ನಿಯಂತ್ರಣ ದಿನ
ಇಂದು (ಡಿಸೆಂಬರ್ 2) ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ. ಭೋಪಾಲ್ ಅನಿಲ ದುರ್ಘಟನೆಯ ಕರಾಳ ಛಾಯೆಯ ಹಿನ್ನೆಲೆಯಲ್ಲಿ ಮುಂದೆ ಇಂಥದ್ದೊಂದು ಪ್ರಮಾದ ಘಟಿಸಬಾರದು ಎನ್ನುವುದು ಮಾಲಿನ್ಯ ನಿಯಂತ್ರಣ ದಿನದ ಆಚರಣೆಯ ಆಶಯ.
ನಗರಗಳಲ್ಲಿ ಎಲ್ಲಿ ಹೋದರೂ ಒಂದೆರಡು ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಯಾವ ಮೂಲೆಗೆ ಹೋದರೂ ಕಾಡುವ ಆ ಸಂಗತಿಗಳೆಂದರೆ, ಹೊಗೆ, ಶಬ್ದ. ಇನ್ನು, ನಗರ ಪ್ರದೇಶಗಳಿಂದ ಚೂರು ಆಚೆಗೆ ಹೋದರೆ ಅಲ್ಲಿ ಹರಿಯುವುದೆಲ್ಲ ನಗರದ ಕೊಳಚೆ. ಅದೇ ನೀರಿನ ಆಸುಪಾಸಿನಲ್ಲಿ ತರಕಾರಿ, ಸೊಪ್ಪು ಕೃಷಿ ಮಾಡುವುದೂ ಇದೆ, ಅದು ಬೇರೆ ಸಂಗತಿ. ಆದರೆ, ನಗರದ ಕೊಳಚೆಯಿಂದ ಮಣ್ಣೂ ಶುದ್ಧವಾಗಿರುವುದಿಲ್ಲ. ಮಣ್ಣು ಶುದ್ಧವಾಗಿಲ್ಲದಿದ್ದ ಮೇಲೆ ಆ ಭಾಗದ ನೀರು ಶುದ್ಧವಾಗಿರುವುದಂತೂ ಅಸಾಧ್ಯ. ಒಟ್ಟಾರೆ, ಪ್ರಕೃತಿಯ ಎಲ್ಲ ಸಂಪನ್ಮೂಲಗಳೂ ಮಾಲಿನ್ಯಮಯ. ಹೌದು, ಮಾಲಿನ್ಯ ಆಧುನಿಕ ಜಗತ್ತಿನ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರಗತಿ ಬೇಕೆಂದಾದರೆ ಅಭಿವೃದ್ಧಿ ಕಾರ್ಯಗಳು ಬೇಕು, ಕೈಗಾರಿಕೆಗಳು, ಹೊಸ ಹೊಸ ನಿರ್ಮಾಣ ಘಟಕಗಳು ಬೇಕು, ವಿದ್ಯುತ್ ಉತ್ಪಾದನೆ ಹೆಚ್ಚಬೇಕು, ಸುಲಭವಾಗಿ ವಿದ್ಯುತ್ ಪಡೆಯಲು ಪರಮಾಣು ಘಟಕಗಳು ಬೇಕು. ಇವೆಲ್ಲದರಿಂದಾಗಿ ಪರಿಸರ ಈಗಾಗಲೇ ಹದಗೆಟ್ಟು ಹೋಗಿದೆ, ನಿರಂತರವಾಗಿ ಹದಗೆಡುತ್ತಲೇ ಇದೆ. ಮಾಲಿನ್ಯದ ಕುರಿತು ಎಚ್ಚೆತ್ತುಕೊಳ್ಳದೇ ಹೋದರೆ, ಪ್ರತಿಯೊಬ್ಬರೂ ತಮ್ಮಿಂದಾದ ಸಣ್ಣ ಪುಟ್ಟ ಕಾರ್ಯವನ್ನಾದರೂ ಮಾಡದೇ ಹೋದರೆ ಈ ನಮ್ಮ ಜಗತ್ತು ಮುಂದೇನಾಗುತ್ತದೆಯೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಮಾಲಿನ್ಯದ ಬಗ್ಗೆ ಅರಿತುಕೊಳ್ಳುವುದು ಸಾಕಷ್ಟಿದೆ. ಇಂದು ಡಿಸೆಂಬರ್ 2. ಇಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.
ಐತಿಹಾಸಿಕ ಕೈಗಾರಿಕಾ ಪ್ರಮಾದ
ಅಷ್ಟಕ್ಕೂ ಇಂದೇ ಏಕೆ ಮಾಲಿನ್ಯ ನಿಯಂತ್ರಣ (Pollution Control) ದಿನವನ್ನು ಏಕೆ ಆಚರಿಸುತ್ತೇವೆ ಎಂದು ಗೊತ್ತೇ? ಇದು ಭೋಪಾಲ್ ಗ್ಯಾಸ್ (Bhopal Gas) ಅನಿಲ ದುರಂತ (Disaster) ದಿನವನ್ನು ನೆನಪಿಸುತ್ತದೆ. ಭಾರತದ ಇತಿಹಾಸದಲ್ಲಿ ನಡೆದ ಬಹುದೊಡ್ಡ ಕೈಗಾರಿಕಾ (Industrial) ದುರಂತ ಭೋಪಾಲ್ ದುರ್ಘಟನೆ. ಇದು ನಿರ್ಮಿಸಿದ ದುರಂತಗಳ ಮಾಲೆ ಅನೂಹ್ಯ. ಕೈಗಾರಿಕೆಗಳ ರಾಸಾಯನಿಕಗಳ (Chemical) ಪರಿಣಾಮ ಮಾನವ ಜಗತ್ತನ್ನು ಹೇಗೆಲ್ಲ ವಿಕೃತಗೊಳಿಸಬಹುದು ಎನ್ನುವುದಕ್ಕೆ ಇದು ದೊಡ್ಡ ಉದಾಹರಣೆ. ಈಗಲೂ ನಮ್ಮ ದೇಶದ ಹಲವೆಡೆ ಅಲ್ಲಲ್ಲಿ ಕೈಗಾರಿಕೆಗಳ ಘಟಕಗಳಿಂದ (Unit) ಕೆಲವು ರಾಸಾಯನಿಕಗಳು ಸೋರಿಕೆ ಆಗುತ್ತಲೇ ಇರುತ್ತವೆ. ಅವುಗಳಿಂದಾಗಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಕೈಗಾರಿಕೆಗಳು ಇಂತಹ ದುರಂತಗಳನ್ನು ಭವಿಷ್ಯದಲ್ಲಿ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.
National Pollution Prevention Day: ಮಾಲಿನ್ಯ ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತೆ
ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಸಣ್ಣದೊಂದು ನಿರ್ಲಕ್ಷ್ಯದಿಂದ (Human Negligence) ಬಹುದೊಡ್ಡ ದುರಂತ ಸಂಭವಿಸಬಹುದು. ಕೈಗಾರಿಕೆಗಳ ಸೋರಿಕೆ ಅಂತಿಂಥ ಅಪಾಯವಲ್ಲ. ಅದು ಹಾಲಿ ಮನುಕುಲಕ್ಕೆ ಮಾತ್ರ ಕಂಟಕವಲ್ಲ, ಭವಿಷ್ಯದ ಕುಡಿಗಳಿಗೂ ಆತಂಕ ತಂದೊಡ್ಡುತ್ತದೆ. ಭವಿಷ್ಯದ ಜನಾಂಗ ಆರೋಗ್ಯಕರವಾಗಿ ಜೀವನ ಸಾಗಿಸಲು ವಾಯು (Air), ನೀರು (Water), ಮಣ್ಣು (Soil), ಶಬ್ದ (Sound) ಸೇರಿದಂತೆ ಎಲ್ಲ ರೀತಿಯ ಮಾಲಿನ್ಯಗಳ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳುವುದು ಅಗತ್ಯ.
Delhi Pollution: ಮಿತಿಮೀರಿದ ವಾಯಮಾಲಿನ್ಯ, ಕೆಮ್ಮಿನ ಕಾಟ ಮಾತ್ರವಲ್ಲ ಮಕ್ಳೂ ಆಗಲ್ಲ !
ಭೋಪಾಲ್ ದುರಂತ (Bhopal Tragedy)
ಭೋಪಾಲ್ ದುರಂತ ಮಾನವ ಇತಿಹಾಸ ಮರೆಯಬಾರದ ಘಟನೆ. ಇದು ನಡೆದದ್ದು 1984ರ ಡಿಸೆಂಬರ್ 2-3ರ ಮಧ್ಯರಾತ್ರಿ. ಅಂದು ಅಮೆರಿಕನ್ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಗೆ ಸೇರಿದ ಘಟಕದಲ್ಲಿ ಮಿಥೈಲ್ ಐಸೋಸೈನೇಟ್ (ಎಂಐಸಿ- Methyl Isocyanate) ಅನಿಲ ಸೋರಿಕೆಯಾಯಿತು. ಸೋರಿಕೆಯಾದದ್ದು ಚಿಕ್ಕಪುಟ್ಟ ಪ್ರಮಾಣದಲ್ಲಲ್ಲ, ಬರೋಬ್ಬರಿ 45 ಟನ್ ವಿಷಕಾರಿ (Toxic) ಅನಿಲ ಸೋರಿಕೆಯಾಗಿತ್ತು. ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನ ಹೇಳಹೆಸರಿಲ್ಲದೆ ಅಸು ನೀಗಿದರು. ಜೀವಭಯದಿಂದ ಸಾವಿರಾರು ಮಂದಿ ನಗರ ತೊರೆದರು. ಸಾವಿರಾರು ಮಕ್ಕಳನ್ನೂ ಬುದ್ಧಿಮಾಂದ್ಯರನ್ನಾಗಿ ಮಾಡಿತು ಈ ದುರ್ಘಟನೆ. ಅಲ್ಲಿಗೆ, ಅನೇಕ ತಲೆಮಾರುಗಳೇ ನಾಶವಾದವು. ಭೋಪಾಲ್ ಮೆಡಿಕಲ್ ಸಂಸ್ಥೆ ದಾಖಲೆಗಳ ಪ್ರಕಾರ, 15-20 ಸಾವಿರ ಜನ ಇದರಲ್ಲಿ ಸಾವಿಗೀಡಾದರು. 5 ಲಕ್ಷದಷ್ಟು ಜನ ಶ್ವಾಸಕೋಶ (Lungs), ಮಾನಸಿಕ (Mental), ದೃಷ್ಟಿ, ಶ್ರವಣ ಮತ್ತು ಇತರ ಅಂಗವೈಕಲ್ಯಗಳಿಂದ ನೋವುಂಡರು. ಕೈಗಾರಿಕಾ ಘಟಕದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಇದ್ದುದ್ದೇ ಇದಕ್ಕೆಲ್ಲ ಕಾರಣವಾಗಿತ್ತು. ಇಂಥದ್ದು ಮುಂದೆ ಸಂಭವಿಸಬಾರದು ಎನ್ನುವುದೇ ಸದ್ಯದ ಕಾಳಜಿ.