ತಿರುಪತಿ ಸಮೀಪವಿರುವ ಅಂಜನಾದ್ರಿಯನ್ನು ಆಂಜನೇಯನ ಜನ್ಮಸ್ಥಳದ ರೂಪದಲ್ಲಿ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ, ಈ ಸಂಬಂಧ ಅಭಿವೃದ್ಧಿ ಕಾರ್ಯಗಳಿಗೆ ಬುಧವಾರ (ಫೆ.16) ಭೂಮಿಪೂಜೆ ನೆರವೇರಿಸಲು ನಿರ್ಧರಿಸಿದೆ.

ಹೈದರಾಬಾದ್‌ (ಫೆ.15): ತಿರುಪತಿ (Tirupati) ಸಮೀಪವಿರುವ ಅಂಜನಾದ್ರಿಯನ್ನು (Anjanadri) ಆಂಜನೇಯನ ಜನ್ಮಸ್ಥಳದ (Anjaneya Birthplace) ರೂಪದಲ್ಲಿ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ, ಈ ಸಂಬಂಧ ಅಭಿವೃದ್ಧಿ ಕಾರ್ಯಗಳಿಗೆ ಬುಧವಾರ (ಫೆ.16) ಭೂಮಿಪೂಜೆ ನೆರವೇರಿಸಲು ನಿರ್ಧರಿಸಿದೆ.

ಇದರಲ್ಲಿ ಭಾಗಿಯಾಗುವಂತೆ ವಿಶಾಖ ಶಾರದ ಪೀಠದ ಸ್ವರೂಪಾನಂದ ಸರಸ್ವರಿ ಸ್ವಾಮೀಜಿ, ರಾಮ ಜನ್ಮಭೂಮಿ ಟ್ರಸ್ಟ್‌ ಖಜಾಂಚಿ ಗೋವಿಂದೇವ ಗಿರಿ ಮಹಾರಾಜ್‌, ಚಿತ್ರಕೂಟ ಸ್ವಾಮೀಜಿ ರಾಮಭದ್ರಾಚಾರ್ಯಲು, ಕೋಟೇಶ್ವರ ಶರ್ಮಾ ಮತ್ತು ಇನ್ನಿತರೆ ಹಲವು ಧಾರ್ಮಿಕ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಕರ್ನಾಟಕದ ವಿರೋಧ: ಕರ್ನಾಟಕದ ಶ್ರೀ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌, ‘ಅಂಜನಾದ್ರಿ ಹನುಮನ ಜನ್ಮಸ್ಥಳ ಅಲ್ಲ. ಕರ್ನಾಟಕ ಕೊಪ್ಪಳ ಜಿಲ್ಲೆಯ ಹಂಪಿ ಬಳಿ ಇರುವ ಕಿಷ್ಕಿಂದೆಯೇ ಹನುಮನ ಜನ್ಮಸ್ಥಳ’ ಎಂದು ವಾದಿಸಿದೆ. ಇಲ್ಲಿಯೇ ರಾಮ, ಲಕ್ಷ್ಮಣರು ಮೊದಲ ಬಾರಿಗೆ ಆಂಜನೇಯನನ್ನು ಭೇಟಿ ಮಾಡಿದ್ದರು. ಅದರ ಕುರುಹು ಎಂಬಂತೆ ಬೆಟ್ಟದ ಮೇಲೆ ರಾಮ, ಲಕ್ಷ್ಮಣ, ಸೀತೆ, ಅಂಜನಾ ದೇವಿಯ ಕಲ್ಲಿನ ಪ್ರತಿಮೆಗಳಿವೆ ಎಂದು ವಾಲ್ಮೀಕಿ ರಾಮಾಯಣದಲ್ಲಿದೆ ಎಂದು ವಾದಿಸಿದೆ.

ಆಂಜನೇಯ ಜನ್ಮಸ್ಥಳ ಗೊಂದಲ ಎಬ್ಬಿಸುವುದು ಸರಿಯಲ್ಲ: ಮೋದಿ

ಆದರೆ ಟಿಟಿಡಿ ತಿರುಪತಿ ಬಳಿ ಇರುವ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂದು ಒಂದಿಷ್ಟುಶಿಲಾಶಾಸನಗಳು, ಭೌಗೋಳಿಕ ಮತ್ತು ವೈಜ್ಞಾನಿಕ ದಾಖಲೆಗಳನ್ನು ಮುಂದಿಟ್ಟು ತಮ್ಮ ವಾದವೇ ಸರಿ ಎಂದು ಪಟ್ಟು ಹಿಡಿದಿತ್ತು. ಈ ವಾದವನ್ನು ಕರ್ನಾಟಕ ತಿರಸ್ಕರಿಸುತ್ತಲೇ ಇದ್ದರೂ ಇದೀಗ ತಿರುಪತಿ ಸಮೀಪದ ಅಂಜನಾದ್ರಿಯನ್ನು ಹೊಸ ಧಾರ್ಮಿಕ ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ.

ತಿರುಪತಿಯೇ ಹನುಮ ಜನ್ಮಸ್ಥಳ: ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು ಇತ್ತೀಚೆಗೆ ಘೋಷಿಸಿದ್ದ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಸಂಶೋಧನೆಗೆ ಈಗ ಮತ್ತಿಷ್ಟುಪಂಡಿತರು ಬಲ ನೀಡುವ ಯತ್ನ ಮಾಡಿದ್ದಾರೆ. 

ಟಿಟಿಡಿಯ (ತಿರುಪತಿ ತಿರುಮಲ ದೇವಸ್ಥಾನ ಸಮಿತಿ) ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್‌ ಆಫ್‌ ಹೈಯರ್‌ ವೇದಿಕ್‌ ಸ್ಟಡೀಸ್‌ ಮತ್ತು ರಾಷ್ಟ್ರೀಯ ಸಂಸ್ಕೃತ ವಿವಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ತಮಿಳುನಾಡಿನ ಕೋರ್ಟಲ್ಲಂ ಸಿದ್ದೇಶ್ವರ ಪೀಠದ ಶ್ರೀ ಸಿದ್ದೇಶ್ವರಾನಂದ ಭಾರತೀ ಸ್ವಾಮೀಜಿ, ಟಿಟಿಡಿ ಪಂಡಿತ ಪರಿಷತ್‌ ಮುಖ್ಯಸ್ಥ ಆಚಾರ‍್ಯ ವಿ. ಮುರಳೀಧರ ಶರ್ಮ, ಆಚಾರ‍್ಯ ಸಮುದ್ರ ರಂಗ ರಾಮಾನುಚಾರ್ಯರು, ‘ರಾಮಾಯಣ ಹಾಗೂ ಪುರಾಣಗಳು ತಿರುಮಲದ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳ ಎಂದು ಹೇಳಿವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ತಿರುಪತಿಯೇ ಹನುಮ ಜನ್ಮಸ್ಥಳ: ಮತ್ತಷ್ಟು ಪಂಡಿತರ ವಾದ!

ತಮಿಳುನಾಡಿನ ಸಿದ್ದೇಶ್ವರ ಪೀಠದ ಶ್ರೀ ಸಿದ್ದೇಶ್ವರಾನಂದ ಭಾರತೀ ಸ್ವಾಮೀಜಿ ಪ್ರತಿಪಾದಿಸಿದ್ದಾರೆ. ‘ತಿರುಪತಿಯೇ ಜನ್ಮಸ್ಥಳ ಎಂದು ವಾಲ್ಮೀಕಿ ರಾಮಾಯಣದಲ್ಲೂ ಸ್ಪಷ್ಟವಾಗಿ ನಮೂದಿಸಲ್ಪಟ್ಟಿದೆ. ಆಂಜನೇಯ ಹುಟ್ಟಿದ್ದು ಕರ್ನಾಟಕದ ಕಿಷ್ಕಿಂಧೆಯಲ್ಲಿ ಎಂಬ ವಾದಗಳಿಗೆ ಪುರಾಣಗಳು ಮತ್ತು ಇತರೆ ಯಾವುದೇ ಸಾಂಪ್ರದಾಯಿಕ ಸಾಕ್ಷ್ಯಗಳು ಇಲ್ಲ. ಪುರಾಣಗಳ ಜ್ಞಾನ ಇಲ್ಲದವರು ಆಂಜನೇಯನ ಜನ್ಮಸ್ಥಾನದ ಕುರಿತು ಮಾತನಾಡಲು ಅನರ್ಹರು’ ಎಂದು ಹೇಳಿದ್ದಾರೆ.