ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ; Tibetan Mastiff ಶ್ವಾನ ನೋಡಲು ಮುಗಿಬಿದ್ದ ಜನ!
- ಶಿವಮೊಗ್ಗ ದಸರಾ ಶ್ವಾನ ಪ್ರದರ್ಶನದಲ್ಲಿ ಜನಮನ ಸೆಳೆದ ದೇಶ-ವಿದೇಶಗಳ ವಿವಿಧ ತಳಿಯ 150ಕ್ಕೂ ಅಧಿಕ ಶ್ವಾನಗಳು.
- 10 ಕೋಟಿ ರೂ. ಬೆಲೆಯ ಟಿಬೇಟಿಯನ್ ಮಸ್ತಿಫ್‌ಗೆ ಜನ ಫಿದಾ
ಶಿವಮೊಗ್ಗ (ಅ.3) : ದೇಶ, ವಿದೇಶಗಳ ವಿವಿಧ ತಳಿಯ 150ಕ್ಕೂ ಹೆಚ್ಚು ಶ್ವಾನಗಳು ಒಟ್ಟಿಗೆ ನೆರೆದಿದ್ದವು. ಶ್ವಾನಗಳು ಕೂಡ ತಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕಿದವು. ಇದನ್ನು ಕಂಡ ಶ್ವಾನ ಪ್ರಿಯರು ಸಖತ್ ಎಂಜಾಯ್ ಮಾಡಿದರಲ್ಲದೇ, ಶ್ವಾನ ಪ್ರದರ್ಶನಕ್ಕೆ ಶಿವಮೊಗ್ಗದ ಜನರು ಫಿದಾ ಆದರು.
ಯುವ ದಸರಾದಲ್ಲಿ ಯುವ ಮನಸ್ಸುಗಳ ಸಾಮ್ರಾಟ್: ದಸರಾ ಹಬ್ಬದ ಮೆರುಗು ಹೆಚ್ಚಿಸಿದ ಪವರ್ ಸ್ಟಾರ್!
ಹೌದು. ರೈತ ದಸರಾ ಕಾರ್ಯಕ್ರಮ ಅಂಗವಾಗಿ ಭಾನುವಾರ ನಗರದ ಗಾಂಧಿ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ ‘ಕುಳಿತಿಕೋ’ ಎಂದರೆ ಕೂರುವ, ‘ನಿಲ್ಲು’ ಎಂದರೆ ನಿಲ್ಲುವ ಮೂಲಕ ಮಾಲೀಕನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಶ್ವಾನಗಳ ಪ್ರದರ್ಶನ ಪ್ರಾಣಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಮಾಲೀಕ ಹೇಳುವ ಮಾತನ್ನು ಕೇಳುತ್ತಿದ್ದ ಶ್ವಾನಗಳನ್ನು ಕಂಡ ವೀಕ್ಷಕರು ನಾವೂ ನಾಯಿ ಸಾಕಬೇಕು ಎನ್ನುತ್ತ ನಾನಾ ಜಾತಿಗೆ ಸೇರಿದ ಮರಿಶ್ವಾನಗಳ ಬೆಲೆಯನ್ನು ಹಲವರು ಕೇಳಿ ತಿಳಿದುಕೊಳ್ಳುತ್ತಿದ್ದರು.
ಟಿಬೇಟಿಯನ್ ಮಸ್ತಿಫ್, ಗ್ರೇಟ್‌ಡೇನ್, ಶಿಟ್ಜು, ಮುಧೋಳ್, ಲ್ಯಾಬ್ರಡಾರ್, ಗೋಲ್ಡನ್ ರಿವರ್ಸ್, ರಿಟ್ರೈವರ್, ರಾರಯಟ್ ವೀಲರ್, ಪಗ್, ಡ್ಯಾಷ್ ಹೌಂಡ್, ಡಾಬರ್‌ಮನ್ ಹೀಗೆ ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿದವು. ಪ್ರದರ್ಶನದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ ಶ್ವಾನಗಳು ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ರಂಜಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡವು.
.10 ಕೋಟಿ ಶ್ವಾನ ನೋಡಲು ಮುಗಿಬಿದ್ದ ಜನ:
ದಸರಾ ಅಂಗವಾಗಿ ನಡೆದ ಶ್ವಾನ ಪ್ರದರ್ಶನದ ಉದ್ಘಾಟನೆಗೆ ಕ್ಯಾಡಬೊಮ್ಸ್ ಸತೀಸ್ ಅವರ .10 ಕೋಟಿ ಮೌಲ್ಯದ ಟಿಬೇಟಿಯನ್ ಮಾಸ್ಟಿಫ್ ತಳಿಯ ಭೀಮಾ ಶ್ವಾನವನ್ನು ಪ್ರದರ್ಶನಕ್ಕೆ ಕರೆಸಲಾಗಿತ್ತು. ಈ ದುಬಾರಿ ಮೌಲ್ಯದ ಶ್ವಾನವನ್ನು ನೋಡಲು ಚಿಕ್ಕಮಕ್ಕಳಿಂದ ಹಿಡಿದು ವೃದ್ಧರೂ ಮುಗಿಬಿದ್ದಿದ್ದರು. ಪ್ರದರ್ಶನಕ್ಕೆ ಈ ಶ್ವಾನ ಆಗಮಿಸುತ್ತಿದ್ದಂತೆ ಜನರು ಕಿಕ್ಕಿರಿದು ಸೇರಿದ್ದರು. ಹಲವರು ಈ ಶ್ವಾನದ ಮುಂದೆ ನಿಂತು ಸೆಲ್ಫಿ ಕ್ಲಿಸಿಕೊಂಡರೆ, ಇನ್ನೂ ಹಲವರು ಶ್ವಾನವನ್ನು ಕಣ್ತುಂಬಿಕೊಳ್ಳಲು ಹರಸಾಹಸಪಟ್ಟರು.
ಟಿಬೇಟಿಯನ್ ಮಾಸ್ಟಿಫ್ ಶ್ವಾನವು ಹೆಚ್ಚಿನ ತಾಪವನ್ನು ತಡೆದುಕೊಳ್ಳದ ಕಾರಣ ಪ್ರದರ್ಶನದಲ್ಲಿ ಎಸಿ ವ್ಯವಸ್ಥೆ ಮಾಡಲಾಗಿತ್ತು. ಶ್ವಾನ ಪ್ರದರ್ಶನವನ್ನು ನೋಡಲು ಬಂದಿದ್ದ ಸಾರ್ವಜನಿಕರು ಭೀಮಾ ಹೆಸರಿನ ಟಿಬೇಟಿಯನ್ ಮಸ್ತೀಫ್ ಜೊತೆ ಪೋಟೊ ತೆಗೆಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದರು.
ಇತ್ತ, ಶ್ವಾನ ಪ್ರದರ್ಶನಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೀಮ ಶ್ವಾನವನ್ನು ಕುತೂಹಲದಿಂದ ನೋಡಿದರು. ಶ್ವಾನದ ಜೊತೆ ಪೋಟೋ ತೆಗೆಸಿಕೊಂಡು ಸಂತಸಪಟ್ಟರು.
ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಶ್ವಾನದ ಮಾಲೀಕ ಸತೀಶ್ ಅವರಿಂದ ಶ್ವಾನದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್, ಎಚ್.ಸಿ.ಯೋಗೀಶ್, ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಕ್ಸರ್ ಶ್ವಾನಕ್ಕೆ ಪ್ರಥಮ ಬಹುಮಾನ
ಗಾಂಧಿ ಪಾರ್ಕ್ನಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಉಡುಪಿಯ ಕೆ.ಎಸ್.ಸಂದೀಪ್ ಮಾಲೀಕತ್ವದ ಬಾಕ್ಸರ್ ಶ್ವಾನ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಹರಿಹರದ ಗಂಗಾಧರ್ ಮಾಲೀಕತ್ವದ ರಾರಯಟ್ ವೀಲರ್ ಶ್ವಾನ ದ್ವಿತೀಯ ಬಹುಮಾನಕ್ಕೆ ಭಾಜನವಾಯಿತು. ಭದ್ರಾವತಿಯ ಗುರುರಾಜ್ ಮಾಲೀಕ್ವತದ ಶ್ವಾನ ಮೂರನೇ ಬಹುಮಾನಕ್ಕೆ ತೃಪ್ತಿಪಟ್ಟಿಕೊಂಡಿತು. ಹಾನಸದ ಚೇತನ್ ಮಾಲೀಕತ್ವದ ಡಾಬರ್‌ಮನ್ ಶ್ವಾನ ನಾಲ್ಕನೇ ಬಹುಮಾನ ಪಡೆದುಕೊಂಡಿತು.
ಯುವ ದಸರಾದಲ್ಲಿ ಪುನೀತ್ Gandhada Gudi ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ
ಶ್ವಾನಗಳ ಕಾಂಪಿಟೇಶನ್ ಸೂಪರ್
ಇಷ್ಟೊಂದು ವಿವಿಧ ತಳಿಯ ಶ್ವಾನಗಳನ್ನು ಒಂದೇ ಕಡೆ ನೋಡುವುದು, ಅವುಗಳ ಕಾಂಪಿಟೇಷನ್ ಎಲ್ಲವೂ ಸೂಪರ್. ಇವತ್ತು ರಜೆ ಬೇರೆ. ಶ್ವಾನಗಳ ಪ್ರದರ್ಶನ ಚೆನ್ನಾಗಿದೆ. ಎಲ್ಲರೊಂದಿಗೆ ಎಂಜಾಯ್ ಮಾಡಿದ್ದೇವೆ ಎಂದು ಶಿವಮೊಗ್ಗ ವಿನೋಬನಗರದ ಅನಿತಾ, ವಿನುತಾ, ಅಂಕಿತ ಮತ್ತಿತರರು ಅನಿಸಿಕೆ ಹಂಚಿಕೊಂಡಿದ್ದರು.