ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಹ್ವಾನವನ್ನು ವಿರೋಧಿಸಿ ಪ್ರತಿಭಟಿಸಿದ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ವಿವಿ ವಿದ್ಯಾರ್ಥಿಗಳ ಮೇಲೆ ಭಾರತದ ವಕೀಲರ ಪರಿಷತ್ತು ಕಠಿಣ ಕ್ರಮ ಕೈಗೊಂಡಿದೆ. 2026ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ನೋಂದಣಿಗೆ ತಡೆ ನೀಡಿದ್ದು, ವಿವಿಯಿಂದ ವರದಿ ಕೇಳಿದೆ.
ನವದೆಹಲಿ (ಆ.14): ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸೂರ್ಯಕಾಂತ್ ಅವರನ್ನು ಘಟಿಕೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದಿಂದ 2026ರಲ್ಲಿ ಪದವಿ ಪಡೆದ ಯಾರೊಬ್ಬರನ್ನೂ ನೋಂದಣಿ ಮಾಡಿಕೊಳ್ಳದಂತೆ ಭಾರತದ ವಕೀಲರ ಪರಿಷತ್ತು ಎಲ್ಲಾ ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ದೇಶಿಸಿದೆ. ಮುಂದಿನ ಆದೇಶದ ವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.
ಸಿಜೆಪಿ ಆಯೋಜಿತ ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿಡಿಯೋ ನೋಡಲು ಸಮಯವಿಲ್ಲ ಎಂದ ಸಿಜೆಐ ಅವರನ್ನು ಘಟಿಕೋತ್ಸವಕ್ಕೆ ಕರೆಯಬಾರದು ಎಂದು ವಿವಿಯ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ, ಆ ಪ್ರತಿಭಟನೆ ಬಗ್ಗೆ 3 ದಿನದಲ್ಲಿ ವರದಿ ಕೊಡುವಂತೆ ಕುಲಪತಿಗೆ ಬಾರ್ ಕೌನ್ಸಿಲ್ ಆದೇಶಿಸಿದೆ ಹಾಗೂ ಆ.19ರಂದು ಅದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಜತೆಗೆ ಪ್ರತಿಭಟನೆಗೆ ಕರೆ ನೀಡಿದವರು, ಭಾಗಿಯಾದವರು ಯಾರು? ಯಾವುದಾದರೂ ವಿದ್ಯಾರ್ಥಿ ಸಂಘಟನೆ ಭಾಗಿಯಾಗಿತ್ತೇ? ಅಧ್ಯಾಪಕರು ಕೂಡ ಭಾಗಿಯಾಗಿದ್ದರೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೇಳಿದೆ. ಅಂತಿಮ ನಿರ್ಧಾರವನ್ನು ವಕೀಲರ ಕಾಯಿದೆ, 1961ರ ಅನ್ವಯ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.


