ವಿಪಕ್ಷಗಳ ತೀವ್ರ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಯೊಂದಿಗೆ ಮುಕ್ತಾಯಗೊಂಡಿದೆ. ಚರ್ಚೆಯಿಲ್ಲದೆ 12 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಅಧಿವೇಶನದ ಕೊನೆಯ ದಿನ ಉಭಯ ಸದನಗಳಲ್ಲಿ ಮೊದಲ ಬಾರಿಗೆ 'ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಿ ಇತಿಹಾಸ ಬರೆಯಲಾಯಿತು.

ನವದೆಹಲಿ (ಆ.14): ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನವು ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ.

ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಉತ್ತರಕ್ಕೆ ಪಟ್ಟು ಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು.

12 ಮಸೂದೆ ಅಂಗೀಕಾರ: ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೂ, ಈ ಬಾರಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಕೇವಲ ಒಂದು ಮಸೂದೆ ಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಪಡೆಯಲಾಗಿದೆ. ಉಳಿದ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಪಾಸು ಮಾಡಲಾಗಿದೆ. ಲೋಕಸಭೆ ಶೇ.19 ಹಾಗೂ ರಾಜ್ಯಸಭೆ ಶೇ.39ರಷ್ಟು ಉತ್ಪಾದಕತೆಯನ್ನು ಸಾಧಿಸಿವೆ.

ಆರೋಪ-ಪ್ರತ್ಯಾರೋಪ: ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗುತ್ತಿವೆ ಮತ್ತು ಕಲಾಪವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡುತ್ತಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಮತ್ತು ಗೌರವ್ ಗೊಗೋಯ್, ‘ಸರ್ಕಾರವೇ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ. ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ನಾಯಕನ ಅಹಂಕಾರ, ಅಶಿಸ್ತಿಗೆ ಅಧಿವೇಶನ ಬಲಿ

ನವದೆಹಲಿ: ಸಂಸತ್‌ ಚರ್ಚೆ ವೇಳೆ ರಾಹುಲ್‌ ಗಾಂಧಿ ಪದೇ ಪದೇ ತಮ್ಮ ಗುರಿಗಳನ್ನು ಬದಲಿಸುತ್ತಾರೆ. ಒಬ್ಬ ವ್ಯಕ್ತಿಯ ಅಹಂಕಾರ, ಅಶಿಸ್ತಿಗೆ ಇಡೀ ಅಧಿವೇಶನ ಬಲಿ ಆಯಿತು ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ರವಿಶಂಕರ್‌ ಪ್ರಸಾದ್‌, ‘ರಾಹುಲ್‌ಗೆ ರಾಜಕೀಯ ಔಚಿತ್ಯವೇ ಇಲ್ಲ. ಅವರೊಬ್ಬ ಜವಾಬ್ದಾರಿ ಇಲ್ಲದ ಅಪಕ್ವ ವ್ಯಕ್ತಿ. ಮೊದಲಿಗೆ ರಾಹುಲ್ ನೀಟ್‌ ವಿಷಯದ ಬಗ್ಗೆ ಚರ್ಚೆಗೆ ಆಗ್ರಹಿಸಿದರು. ಸರ್ಕಾರ ಸಿದ್ಧ ಎಂದಾಗ ಮೋದಿಯೇ ಉತ್ತರ ನೀಡಬೇಕು ಎಂದರು. ಬಳಿಕ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಚರ್ಚೆ ಆಗಬೇಕು ಎಂದರು. ನಾವು ರೆಡಿ ಎಂದರೂ ಕಾಂಗ್ರೆಸ್‌ ಕಲಾಪ ನಡೆಯಲೇ ಬಿಡಲಿಲ್ಲ’ ಎಂದು ಕಿಡಿಕಾರಿದರು.

ಈ ನಡುವೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಯಿಂದ ಹಿಂದೆ ಸರಿಯುವ ಮೂಲಕ ರಾಹುಲ್ ಗಾಂಧಿ ಸಂಸತ್ತಿನ ಹಿರಿಮೆಗೆ ಅಪಚಾರ ಎಸಗಿದ್ದಾರೆ. ಅವರು ಒಂದೆಡೆ ಸಂಸತ್ತಿನಲ್ಲಿ ಚರ್ಚೆಯಿಂದ ದೂರ ಉಳಿಯುತ್ತಾರೆ, ಆದರೆ ವಿದೇಶಿ ನೆಲದಲ್ಲಿ ನಿಂತು ದೇಶದ ಬಗ್ಗೆ ಮಾತುಗಳನ್ನು ಆಡುತ್ತಾರೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.

ಕೋತಿಯ ಗೊಂಬೆ ಪ್ರದರ್ಶಿಸಿ ಮೋದಿ ಬಗ್ಗೆ ಕಾಂಗ್ರೆಸ್‌ ಅಣಕ

ನವದೆಹಲಿ: ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ, ಸಂಸತ್‌ ಆವರಣ ನಾಟಕೀಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪವನ್‌ ಖೇರಾ ಕೋತಿಯ ಗೊಂಬೆಯೊಂದನ್ನು ಪ್ರದರ್ಶಿಸಿದರು. ಈ ವೇಳೆ ಉಳಿದ ಸದಸ್ಯರು, ‘56 ಇಂಚಿನ ಪುಟ್ಟ ಕೋತಿಯೇ, ಬೇಗನೆ ಸದನಕ್ಕೆ ಬಾ’ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆ ಕೂಗಿದರು.

ಅತ್ತ ಜಾರ್ಖಂಡ್‌ನ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ಕ್ರಮವನ್ನು ವಿರೋಧಿಸಿ ಎನ್‌ಡಿಎ ಸದಸ್ಯರೂ ಪ್ರತಿಭಟನೆ ನಡೆಸಿದರು. ಎರಡೂ ಕಡೆಯವರು ಸಂಸತ್ತಿನ ಮಕರ ದ್ವಾರದ ಬಳಿ ಮುಖಾಮುಖಿಯಾದಾಗ ಭದ್ರತಾ ಸಿಬ್ಬಂದಿ ತಡೆಗೋಡೆಯಾಗಿ ನಿಂತ ಪ್ರಸಂಗ ನಡೆಯಿತು.

ಸಂಸತ್ತಿನಲ್ಲಿ ‘ವಂದೇ ಮಾತರಂ’ ಪ್ರಸಾರ, ಇದೇ ಮೊದಲ ದಾಖಲೆ

ನವದೆಹಲಿ: ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಗಿದೆ. ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತಿನ ಉಭಯ ಸದನಗಳಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು. ರಾಷ್ಟ್ರೀಯ ಗೀತೆಗೆ ಕಾನೂನು ರಕ್ಷಣೆ ಮತ್ತು ಅಧಿಕೃತವಾಗಿ ಈ ಗೀತೆ ಹಾಡುವ ಸಂಬಂಧದ ನಿಯಮಗಳು ಜಾರಿಗೆ ಬಂದ ಬೆನ್ನಲ್ಲೇ ಸಂಸತ್ತಿನಲ್ಲಿ ವಂದೇ ಮಾತರಂ ಗೀತೆ ಮೊಳಗಿದೆ.

ಪ್ರಧಾನಿ ಮೋದಿ, ಕಾಂಗ್ರೆಸ್‌ ಸಂಸದ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿ ಬಹುತೇಕ ಎಲ್ಲ ಸಚಿವರು, ಸಂಸದರ ಉಪಸ್ಥಿತಿಯಲ್ಲಿ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಯಿತು. ವಂದೇ ಮಾತರಂ ಗೀತೆ ಪ್ರಸಾರದ ಬಳಿಕ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ರಾಷ್ಟ್ರಗೀತೆ ಜನಗಣ ಮನದ ಮಾದರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡಿಗೆ ಉದ್ದೇಶಪೂರ್ಕವಾಗಿ ಮಾಡುವ ಅಡ್ಡಿಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇಮಾತರಂನ ಆರು ಚರಣಗಳನ್ನು ಹಾಡುವುದು ಕಡ್ಡಾಯವಾಗಲಿದೆ.