ಮಹಾರಾಷ್ಟ್ರದ ಪ್ರತಿಷ್ಠಿತ ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಚ್ಚರಿಯ ರೀತಿಯಲ್ಲಿ ಹಿಂಪಡೆದಿದೆ. ಹಿರಿಯ ನಾಯಕರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಂಡಿದ್ದು, ಇದರಿಂದ ಎನ್‌ಸಿಪಿ (ಅಜಿತ್ ಪವಾರ್ ಬಣ) ಅಭ್ಯರ್ಥಿ ಸುನೇತ್ರಾ ಪವಾರ್ ಅವರ ಗೆಲುವಿನ ಹಾದಿ ಸುಗಮವಾಗಿದೆ.
ಮುಂಬೈ/ಬಾರಾಮತಿ (ಏ.9): ಮಹಾರಾಷ್ಟ್ರ ರಾಜಕಾರಣದ ಪ್ರತಿಷ್ಠಿತ ಕಣವಾದ ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಕಾಂಗ್ರೆಸ್ ಅಚ್ಚರಿಯ ರೀತಿಯಲ್ಲಿ ಹಿಂದೆ ಸರಿದಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದ್ದು, ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಳ್ ಅವರು ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಿದರು. ಬಾರಾಮತಿ ಉಪಚುನಾವಣೆಗಾಗಿ ಕಾಂಗ್ರೆಸ್ ಈ ಮೊದಲು ಆಕಾಶ್ ಮೋರೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ಈಗ ಮೋರೆ ಅವರು ಕಣದಿಂದ ಹಿಂದೆ ಸರಿದಿರುವುದರಿಂದ, ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿ ಸುನೇತ್ರಾ ಪವಾರ್ ಅವರ ಗೆಲುವಿನ ಹಾದಿ ಸುಗಮವಾದಂತಾಗಿದೆ.
ಅಜಿತ್ ಪವಾರ್ ವಿರುದ್ಧ ಸಪ್ಕಾಳ್ ವಾಗ್ದಾಳಿ
ಗಾಂಧಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರ್ಷವರ್ಧನ್ ಸಪ್ಕಾಳ್, ಅಭ್ಯರ್ಥಿಯನ್ನು ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸುತ್ತಲೇ ಅಜಿತ್ ಪವಾರ್ ಬಣದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. "ಅಜಿತ್ ಪವಾರ್ ಅವರಂತಹ ದೊಡ್ಡ ನಾಯಕರು ಅಧಿಕಾರಕ್ಕಾಗಿ ಬಿಜೆಪಿ ಎಂಬ ವಿಷಕಾರಿ ಪಕ್ಷದೊಂದಿಗೆ ಕೈಜೋಡಿಸಿ ಲಾಚಾರಿಯಾಗಬಾರದಿತ್ತು' ಎಂದಿದ್ದಾರೆ. ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು "ಅಪಘಾತ ಮತ್ತು ನಂಬಿಕೆ ದ್ರೋಹ" ಎಂದು ಕರೆದ ಅವರು, ಸರ್ಕಾರವು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಹಿಂದೆ ಸರಿಯಲು ಕಾರಣವೇನು?
ಕಾಂಗ್ರೆಸ್ ಅಭ್ಯರ್ಥಿಯನ್ನು ವಾಪಸ್ ಪಡೆಯಲು ಪ್ರಬಲ ಒತ್ತಡ ಮತ್ತು ವಿನಂತಿಗಳು ಬಂದಿದ್ದವು ಎಂದು ಸಪ್ಕಾಳ್ ಬಹಿರಂಗಪಡಿಸಿದರು. ಇಂದು ಬೆಳಿಗ್ಗೆಯಷ್ಟೇ ಶಾಸಕ ರೋಹಿತ್ ಪವಾರ್ ಅವರು ಹರ್ಷವರ್ಧನ್ ಸಪ್ಕಾಳ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣದಿಂದ ಇಳಿಸದಂತೆ ವಿನಂತಿಸಿದ್ದರು. ಎನ್‌ಸಿಪಿ ಮುಖ್ಯಸ್ಥ ಶರತ್ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ಕೂಡ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕೆಂದು ನಿರೀಕ್ಷೆ ವ್ಯಕ್ತಪಡಿಸಿದ್ದರು.
ವಿಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ಮತ್ತು ಹಿರಿಯ ನಾಯಕರ ಮನವಿಗೆ ಸ್ಪಂದಿಸಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾರಾಮತಿಯಲ್ಲಿ ಈಗ ಸುನೇತ್ರಾ ಪವಾರ್ ಅವರಿಗೆ ಪ್ರಬಲ ಎದುರಾಳಿ ಇಲ್ಲದಂತಾಗಿದ್ದು, ಅವರ ಹಾದಿ ಸರಳವಾಗಿದೆ.


