ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನ್ ಸ್ವಾತಂತ್ರ್ಯ ಘೋಷಿಸಿದ್ದು, ಭಾರತದ ಬೆಂಬಲ ಕೋರಿದೆ. ಜೊತೆಗೆ ವಿಶ್ವಸಂಸ್ಥೆಯಿಂದ ಮಾನ್ಯತೆ ಮತ್ತು ದೆಹಲಿಯಲ್ಲಿ ರಾಯಭಾರ ಕಚೇರಿ ಸ್ಥಾಪನೆಗೆ ಬಲೂಚ್ ಮನವಿ ಮಾಡಿದೆ.
ನವದೆಹಲಿ: ಭಾರತದ ವಿರುದ್ಧ ನಿರಂತರ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಆದರದ್ದೇ ಭಾಗವಾಗಿರುವ ಬಲೂಚಿಸ್ತಾನ್ ತಿರುಗಿ ಬಿದ್ದಿದ್ದು, ಸ್ವಾಂತಂತ್ರ ಘೋಷಿಸಿಕೊಂಡಿದೆ. ಭಾರತ ಆಪರೇಷನ್ ಸಿಂಧೂರ್ ನಡೆಸಿದ ಮರುದಿನವೇ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿರುವ ಬಲೂಚಿಸ್ತಾನ್ ನಿನ್ನೆಯಷ್ಟೇ ಬಾಂಬ್ ದಾಳಿ ನಡೆಸಿ ಪಾಕಿಸ್ತಾನದ 14 ಯೋಧರ ಬಲಿ ಪಡೆದಿತ್ತು. ಆದರೆ ಇಂದು ಬಲೂಚಿಸ್ತಾನ್ ನಾಯಕರು ಪಾಕಿಸ್ತಾನದಿಂದ ಬೇರೆಯಾಗಿ ಸ್ವಾತಂತ್ರ ದೇಶವಾಗಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಭಾರತ ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆಯೇ ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವಾತಂತ್ರಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಅಲ್ಲದೇ ಬಲೂಚಿಸ್ತಾನಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಅವರು ದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ಸ್ಥಾಪಿಸಲು ಭಾರತಕ್ಕೆ ಮನವಿ ಮಾಡಿದ್ದಾರೆ. ಮತ್ತು ತಮ್ಮ ಈ ಪ್ರದೇಶದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲಕರು ಆಗಮಿಸಬೇಕು ಎಂದು ಅವರು ಕೋರಿದ್ದಾರೆ.
ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವಲ್ಲಿ ಹೆಸರುವಾಸಿಯಾಗಿರುವ ಮೀರ್ ಯಾರ್ ಬಲೂಚ್, ಟ್ವಿಟ್ಟರ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನಿ ಸೈನ್ಯವು ಈ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಗಂಭೀರ ಘರ್ಷಣೆಯ ಮಧ್ಯೆ ಈ ಹೇಳಿಕೆ ಬಂದಿದೆ. ಮೇ 7 ರಂದು, ಭಾರತವು ಆಪರೇಷನ್ ಸಿಂಧೂರ್‌ನ ಭಾಗವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಆದರೆ ಈ ವೇಳೆ ಪಾಕಿಸ್ತಾನದ ಯಾವುದೇ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿರಲಿಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುರುವಾರ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ತೀವ್ರವಾದ ಫಿರಂಗಿ ಶೆಲ್ಲಿಂಗ್‌ಗಳ ಮೂಲಕ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಾರತದ ದಾಳಿ ಮಾಡಲು ಯತ್ನಿಸಿದ್ದು, ಇದರಿಂದ ಎರಡು ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪಾಕ್‌ನ ಡ್ರೋಣ್ ದಾಳಿಗೆ ಭಾರತವೂ ತಕ್ಕ ಪ್ರತ್ಯುತ್ತರ ಕೊಟ್ಟಿದ್ದು, ಪಾಕಿಸ್ತಾನದ ಯುದ್ಧ ವಿಮಾನಗಳು ಹಾಗೂ ರಾಡಾರ್‌ಗಳನ್ನು ಧ್ವಂಸಗೊಳಿಸಿದೆ.
ಇದೇ ಸಮಯದಲ್ಲಿ ಬಲೂಚಿಸ್ತಾನದ ಪರ ವಕಾಲತು ಮಾಡುವ ಮಿರ್ ಯಾರ್ ಬಲೂಚ್ ಟ್ವಿಟ್ಟರ್‌ನಲ್ಲಿ ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವಾತಂತ್ರಗೊಂಡಿದೆ ಎಂದು ಟ್ವಿಟ್ ಮಾಡಿದ್ದಾರೆ. ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಪತನ ಹತ್ತಿರವಾಗಿರುವುದರಿಂದ ಶೀಘ್ರದಲ್ಲೇ ಸಂಭವನೀಯ ಘೋಷಣೆ ಮಾಡಬೇಕು. ನಾವು ನಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ ಮತ್ತು ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಸ್ಥಾಪಿಸಲು ಅನುಮತಿಸುವಂತೆ ನಾವು ಭಾರತವನ್ನು ವಿನಂತಿಸುತ್ತೇವೆ ಎಂದಿದ್ದಾರೆ.
ಬಲೂಚಿಸ್ತಾನದ ಕರೆನ್ಸಿ ಮತ್ತು ಪಾಸ್‌ಪೋರ್ಟ್ ಮುದ್ರಣಕ್ಕಾಗಿ ಶತಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ವಿಶ್ವಸಂಸ್ಥೆಯು ತನ್ನ ಶಾಂತಿಪಾಲನಾ ತಂಡವನ್ನು ಬಲೂಚಿಸ್ತಾನಕ್ಕೆ ತಕ್ಷಣವೇ ಕಳುಹಿಸುವಂತೆ ಮತ್ತು ಪಾಕಿಸ್ತಾನ ಆಕ್ರಮಿತ ಸೈನ್ಯವು ಬಲೂಚಿಸ್ತಾನದ ಪ್ರದೇಶಗಳು, ವಾಯುಪ್ರದೇಶ ಮತ್ತು ಸಮುದ್ರವನ್ನು ಖಾಲಿ ಮಾಡುವಂತೆ ಮತ್ತು ಬಲೂಚಿಸ್ತಾನದಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಆಸ್ತಿಯನ್ನು ಪಾಕಿಸ್ತಾನ ಬಿಟ್ಟು ಬಿಡುವಂತೆ ನಾವು ಒತ್ತಾಯಿಸುತ್ತೇವೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಸೇನೆ, ಗಡಿನಾಡು ದಳ, ಪೊಲೀಸ್, ಮಿಲಿಟರಿ ಗುಪ್ತಚರ, ಐಎಸ್ಐ ಮತ್ತು ನಾಗರಿಕ ಆಡಳಿತದಲ್ಲಿರುವ ಎಲ್ಲಾ ಬಲೂಚಿಸ್ತಾನದವರಲ್ಲದ ಸಿಬ್ಬಂದಿಗಳು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯಬೇಕು ಎಂದು ಅವರು ಹೇಳಿದ್ದಾರೆ. ಬಲೂಚಿಸ್ತಾನದ ನಿಯಂತ್ರಣವನ್ನು ಶೀಘ್ರದಲ್ಲೇ ಸ್ವತಂತ್ರ ಬಲೂಚಿಸ್ತಾನ್ ರಾಜ್ಯದ ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಮತ್ತು ಶೀಘ್ರದಲ್ಲೇ ಪರಿವರ್ತನಾ ನಿರ್ಣಾಯಕ ಮಧ್ಯಂತರ ಸರ್ಕಾರವನ್ನು ಘೋಷಿಸಲಾಗುವುದು. ಸಂಪುಟದಲ್ಲಿ ಬಲೂಚ್ ಮಹಿಳೆಯರ ಪ್ರಾತಿನಿಧ್ಯವು ನಮ್ಮ ರಾಷ್ಟ್ರದ ಭರವಸೆಯ ಈಡೇರಿಕೆಯಾಗಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.


