ಉತ್ತರಾಖಂಡದ ಶ್ರೀಕ್ಷೇತ್ರ ಬದರಿನಾಥ ಸನಿಹದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆಯ (ಬ್ರೋ) 50 ಕಾರ್ಮಿಕರನ್ನು ಹೊರತರಲಾಗಿದ್ದು, ಅವರಲ್ಲಿ 4 ಜನ ಮೃತಪಟ್ಟಿದ್ದಾರೆ.

ಡೆಹ್ರಾಡೂನ್‌ (ಮಾ.02): ಉತ್ತರಾಖಂಡದ ಶ್ರೀಕ್ಷೇತ್ರ ಬದರಿನಾಥ ಸನಿಹದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆಯ (ಬ್ರೋ) 50 ಕಾರ್ಮಿಕರನ್ನು ಹೊರತರಲಾಗಿದ್ದು, ಅವರಲ್ಲಿ 4 ಜನ ಮೃತಪಟ್ಟಿದ್ದಾರೆ. ಇನ್ನೂ 5 ಕಾರ್ಮಿಕರ ರಕ್ಷಣೆ ಬಾಕಿ ಇದೆ. ಈ ಬಗ್ಗೆ ಮಾತನಾಡಿರುವ ಸೇನಾ ವಕ್ತಾರರು, ‘ಭಾರತೀಯ ಸೇನೆಯ 3, ವಾಯುಪಡೆಯ 3 ಹಾಗೂ ಸೇನೆ ಬಾಡಿಗೆಗೆ ಪಡೆದಿರುವ 1 ಸೇರಿ 6 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳು ಕಾರ್ಮಿಕರ ರಕ್ಷಣೆ ಹಾಗೂ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ರಸ್ತೆಗಳು ಹಿಮಾವೃತವಾಗಿರುವ ಕಾರಣ ಸಂಚಾರಕ್ಕೆ ತೊಡಕಾಗಿದ್ದು, ಬದರಿನಾಥ ಹಾಗೂ ಜೋಶಿಮಠದ ನಡುವಿನ ಹೆದ್ದಾರಿ 15ರಿಂದ 20 ಕಡೆಗಳಲ್ಲಿ ಮುಚ್ಚಿಹೋಗಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ. ಬ್ರೋ ಕ್ಯಾಂಪ್‌ಗಳ ಬಳಿ ಕಾರ್ಮಿಕರು ಇದ್ದ 8 ಕಂಟೇನರ್‌ಗಳಿದ್ದು, ಅವುಗಳಲ್ಲಿ 5 ಮಾತ್ರ ಪತ್ತೆಯಾಗಿವೆ. ಉಳಿದ 3 ಇನ್ನೂ ಪತ್ತೆಯಾಗಿಲ್ಲ.

ಹಿಮದ ಅಡಿ ಸಿಲುಕಿದ 41 ಕಾರ್ಮಿಕರು, 16 ಪಾರು: ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಬದರಿನಾಥದಿಂದ 3 ಕಿ.ಮೀ. ದೂರದಲ್ಲಿರುವ ಚಮೋಲಿ ಜಿಲ್ಲೆಯ ಮಾಣಾ ಎಂಬಲ್ಲಿ ಶುಕ್ರವಾರ ಭಾರೀ ಹಿಮಕುಸಿತ ಸಂಭವಿಸಿದೆ. ಹಿಮ ತೆರವು ಕೆಲಸಕ್ಕೆ ನಿಯೋಜಿಸಲಾಗಿದ್ದ 57 ಕಾರ್ಮಿಕರು ಅದರಡಿ ಸಿಲುಕಿದ್ದು, ಅವರಲ್ಲಿ ಈಗಾಗಲೇ 16 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 41 ಕಾರ್ಮಿಕರ ರಕ್ಷಣೆಗೆ ಯತ್ನ ನಡೆದಿದೆ. ಈವರೆಗೆ ಯಾವುದೇ ಸಾವು ವರದಿಯಾಗಿಲ್ಲ. ಭಾರತ ಹಾಗೂ ಟಿಬೆಟ್‌ ಗಡಿಯ ಬಳಿ 3,200 ಮೀ. ಎತ್ತರದಲ್ಲಿರುವ ಮಾಣಾ ಹಾಗೂ ಬದರಿನಾಥ ನಡುವಿದ್ದ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಕ್ಯಾಂಪ್‌ಗಳ ಮೇಲೆ ಹಿಮ ಕುಸಿದಿದ್ದು, ಅದು ಹೂತುಹೋಗಿದೆ. ಕೂಡಲೇ ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂದೀಪ್‌ ತಿವಾರಿ ತಿಳಿಸಿದ್ದಾರೆ.

ಇಡ್ಲಿಗೆ ಡೆಡ್ಲಿ ಪ್ಲಾಸ್ಟಿಕ್‌ ಬಳಸಿದವರಿಗೆ ನೋಟಿಸ್‌ ಜಾರಿ: ಸಚಿವ ದಿನೇಶ್ ಗುಂಡೂರಾವ್‌

ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ಟಿಬೆಟ್‌ ಗಡಿ ಕಡೆ ಸೇನಾ ವಾಹನ ತೆರಳಲು ಅನುಕೂಲವಾಗುವಂತೆ ಹಿಮ ತೆರವುಗೊಳಿಸುತ್ತಿದ್ದ ಕಾರ್ಮಿಕರು ಹಿಮಪಾತಕ್ಕೆ ಸಿಲುಕಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರೊಂದಿಗೆ ಮಾತನಾಡಿದೆ. ಆಡಳಿತವು ಸಂತ್ರಸ್ತರಿಗೆ ಸಾಧ್ಯವಾದ ಎಲ್ಲಾ ನೆರವನ್ನು ನೀಡುತ್ತದೆ. ಹಿಮದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಸೇನಾ ತುಕಡಿಗಳೂ ಕೈಜೋಡಿಸಿವೆ. ನಿರಂತರ ಹಿಮಪಾತ ಹಾಗೂ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಿಧಾನ ಗತಿಯಲ್ಲಿ ನಡೆಯುತ್ತಿದೆ’ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ರಕ್ಷಣಾ ಕಾರ್ಯಕ್ಕೆ ಸಹಾಯದ ಭರವಸೆ ನೀಡಿದ್ದಾರೆ.