ನವದೆಹಲಿ: (ಜೂ.  08)  ಕಳೆದ ಲಾಕ್ ಡೌನ್ ಸಂದರ್ಭ ವೈರಲ್ ಆಗಿದ್ದ ಬಾಬಾ ಕಾ ಡಾಬಾ ವೃದ್ಧ ದಂಪತಿಗೆ ಈಗ ಮತ್ತೆ ತಮ್ಮ ಹಳೆಯ ಬೀದಿ ಬದಿ ಅಂಗಡಿಯೇ ಗತಿಯಾಗಿದೆ.  ದಕ್ಷಿಣ ದೆಹಲಿ ಮಾಲಾವಿಯ ನಗರದಲ್ಲಿ ಇರುವ ತಮ್ಮ ಡಾಬಾದಲ್ಲಿ ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾಂತಾ ಪ್ರಸಾದ್ ದಂಪತಿ ತಮ್ಮ ಅದೇ ಹಳೆಯ  ಜೀವನಕ್ಕೆ ಮರಳುವುದು ಅನಿವಾರ್ಯವಾಗಿದೆ.

ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಡಾಬಾದಲ್ಲಿ ವ್ಯಾಪಾರವಿಲ್ಲದೆ ಅನುಭವಿಸುತ್ತಿರುವ ಕಷ್ಟವನ್ನು ಶೇರ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಆಗಿ ನೆರವು ಹರಿದು ಬಂದಿತ್ತು.

ಬಾಬಾ ಕಾ ಡಾಬಾದ ಮುಂದೆ ನೂರಾರು ಗ್ರಾಹಕರು ಸಾಲುಸಾಲಾಗಿ ನಿಂತರು. ವೈರಲ್ ಆದ ಅಜ್ಜನ ಬಳಿ ಸೆಲ್ಫಿ ತಗೆದುಕೊಂಡರು, ದಂಪತಿಗೆ ಹಣ ಸಹಾಯ ಮಾಡಿದರು. ಜೊಮ್ಯಾಟೋ ಕೂಡ ತನ್ನ ಪಟ್ಟಿಯಲ್ಲಿ ಈ ಡಾಬಾದ ಹೆಸರು ಸೇರಿಸಿತ್ತು.

ವೃದ್ಧರ ಜೀವನದಲ್ಲಿ ಬದಲಾವಣೆ ಗಾಳಿ ಬೀಸಿತ್ತು.  ಕಾಂತಾ ಪ್ರಸಾದ್ ಹೊಸ ಹೋಟೆಲ್ ತೆಗೆದು ತಮ್ಮ ಹಳೆಯ ಸಾಲವನ್ನೆಲ್ಲಾ ತೀರಿಸಿದ್ದರು. ಜೊತೆಗೆ ತನಗೆ ಮತ್ತು ಕುಟುಂಬದವರಿಗೆ ಸ್ಮಾರ್ಟ್‍ಫೋನ್‍ ಕೊಂಡಿದ್ದರು.  ಆದರೆ ಹೊಸ ಹೋಟೆಲ್ ನಿರೀಕ್ಷೆಯಂತೆ ನಡೆಯಲೇ ಇಲ್ಲ. ಫೆಬ್ರವರಿಯಲ್ಲಿ ಅದನ್ನು ಮುಚ್ಚಿ ತಮ್ಮ ಹಳೆಯ ಡಾಬಾಕ್ಕೆ ಮರಳಿದ್ದಾರೆ.

ಬಾಬಾ ಕಾ ಡಾಬಾ ಹೊಸ ರೆಸ್ಟೋರೆಂಟ್ ಹೇಗಿತ್ತು? 

ಲಾಕ್‍ಡೌನ್ ಇರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.  ಲಾಕ್‍ಡೌನ್‍ಗೆ ಮೊದಲು ನಿತ್ಯ 3500 ರೂಪಾಯಿ ವ್ಯಾಪಾರವಾಗುತ್ತಿತ್ತು. ಈಗ ಅದು 1,000 ರೂಪಾಯಿಗೆ ಇಳಿದಿದೆ. ನಮ್ಮ 8 ಜನರ ಕುಟುಂಬ ನಿರ್ವಹಿಸಲು ಈ ಹಣ ಸಾಲದು ಎಂದು ವೃದ್ಧರು ಪರಿಸ್ಥಿತಿ ವಿವರಿಸುತ್ತಾರೆ.

ಹೊಸ ಹೋಟೆಲ್ ನಿರ್ಮಾಣಕ್ಕೆ  5  ಲಕ್ಷ ರೂ.  ಬಂಡವಾಳ ಹಾಕಿದ್ದೆ. ಆದರೆ  ಕೇಚಲ 36 ಸಾವಿರ ರೂ. ಸಂಪಾದನೆ ಮಾಡಲಾಗಿದೆ.  ಮೂರು ಜನ ಕೆಲಸಗಾರರನ್ನಿಟ್ಟುಕೊಂಡು ಹೋಟೆಲ್ ನಡೆಸುತ್ತಿದ್ದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.. 

ಕಳೆದ ವರ್ಷ ಗೌರವ್ ವಾಸನ್ ಎಂಬುವರು ಯೂಟ್ಯೂಬ್ ವಿಡಿಯೋ ಮೂಲಕ ಕಾಂತಾ ಪ್ರಸಾದ್ ಅವರ ರಸ್ತೆ ಬದಿ ಡಾಬಾದ ದುಸ್ಥಿತಿಯನ್ನು ಬೆಳಕಿಗೆ ತಂದಿದ್ದರು. ಆದರೆ ಆ ಬಳಿಕ ಕಾಂತಾ ಪ್ರಸಾದ್ ದೇಣೆಗೆಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾಸನ್ ಮತ್ತವರ ಸಂಗಡಿಗರ ಮೇಲೆ ವಂಚನೆಯ ದೂರು ದಾಖಲಿಸಿದ್ದ ಘಟನೆಯೂ ನಡೆದಿತ್ತು. ಆದರೆ ನಾನು ಹಣ ಇಟ್ಟುಕೊಂಡಿಲ್ಲ ಎಲ್ಲವನ್ನು ವೃದ್ಧರಿಗೆ ತಲುಪಿಸಿದ್ದೇನೆ ಎಂದು  ಗೌರವ್ ವಾಸನ್ ದಾಖಲೆ ಸಮೇತ ವಿವರಣೆ ನೀಡಿದ್ದರು.