ನವದೆಹಲಿ(ಡಿ.22):  ಇತ್ತೀಚೆಗಷ್ಟೇ ‘ಬಾಬಾ ಕಾ ಡಾಬಾ’ ಎಂಬ ಹೆಸರಿನಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ಅದರ ಮಾಲೀಕ ಕಾಂತ ಪ್ರಸಾದ್‌(80) ಅವರು ಕೊನೆಗೂ ದಿಲ್ಲಿಯಲ್ಲಿ ಹೊಸ ರೆಸ್ಟೋರೆಂಟ್‌ವೊಂದನ್ನು ಆರಂಭಿಸಿದ್ದಾರೆ. ಅಲ್ಲದೆ ತಮ್ಮ ಹೋಟೆಲ್‌ ಉದ್ಯಮ ಆರಂಭಕ್ಕೆ ನೆರವಾದ ಜನತೆಗೆ ಕಾಂತ ಪ್ರಸಾದ್‌ ಅಭಿನಂದನೆ ಸಲ್ಲಿಸಿದರು.

ತಮ್ಮ ಹೋಟೆಲ್‌ನಲ್ಲಿ ಭಾರತೀಯ ಮತ್ತು ಚೈನಾದ ಆಹಾರಗಳು ಲಭ್ಯವಿರಲಿದೆ. ಕೆಲಸಕ್ಕಾಗಿ ಇಬ್ಬರು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದೇನೆ. ಹಳೆಯ ಡಾಬಾವನ್ನೂ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ಏನಿದು ಬಾಬಾ ಕಾ ಡಾಬಾ?:

ಹಿರಿಯ ದಂಪತಿಯಾದ ಕಾಂತ ಪ್ರಸಾದ್‌ ಮತ್ತು ಅವರ ಪತ್ನಿ ಬಾದಾಮಿ ದೇವಿ ಅವರು ಕಳೆದ 30 ವರ್ಷಗಳಿಂದ ಇಲ್ಲಿನ ಮಾಳವೀಯ ನಗರದಲ್ಲಿ ರಸ್ತೆ ಬದಿ ಹೋಟೆಲ್‌ ನಡೆಸುತ್ತಿದ್ದರು. ಆದರೆ ಕೊರೋನಾ ಲಾಕ್‌ಡೌನ್‌ನಿಂದ ಯಾವುದೇ ಗಿರಾಕಿಗಳಿಲ್ಲದೆ ತಾವು ತೀವ್ರ ಸಂಕಷ್ಟಕ್ಕೀಡಾಗಿದ್ದಾಗಿ ಮತ್ತು ತಮಗೆ ನೆರವಾಗಬೇಕೆಂದು ಜನತೆಗೆ ಕಾಂತ ಪ್ರಸಾದ್‌ ಕೋರಿದ ವಿಡಿಯೋ ಅಕ್ಟೋಬರ್‌ನಲ್ಲಿ ವೈರಲ್‌ ಆಗಿತ್ತು. ಈ ವೇಳೆ ಅವರಿಗೆ ನೆರವಿನ ಮಹಾಪೂರವೇ ಹರಿದಿತ್ತು.