ಅಯೋಧ್ಯೆ ತೀರ್ಪು: ರಾಮಜನ್ಮಭೂಮಿ ಸನಿಹ ಮಸೀದಿಗಿಲ್ಲ ಜಾಗ?
ಅಯೋಧ್ಯೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗ ನೀಡಿಕೆ ಕ್ಷೀಣ | ಸರಯೂ ನದಿ ಆಚೆ ಬಾಬ್ರಿ ಮಸೀದಿ ನಿರ್ಮಾಣ ಸಾಧ್ಯ | ಸೋಮ್‌ಪುರ ವಿನ್ಯಾಸದಂತೆ ರಾಮಮಂದಿರ ನಿರ್ಮಿಸಿ: ಕೇಂದ್ರಕ್ಕೆ ವಿಎಚ್‌ಪಿ ಆಗ್ರಹ
ಅಯೋಧ್ಯೆ (ನ. 10): ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ‘ಬಾಬ್ರಿ ಮಸೀದಿ ಧ್ವಂಸದ ಪರಿಹಾರಾರ್ಥವಾಗಿ, ಪ್ರತ್ಯೇಕ ಮಸೀದಿ ಕಟ್ಟಲು 5 ಎಕರೆ ಜಾಗವನ್ನು ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು’ ಎಂದು ಮೊನ್ನೆ ಆದೇಶಿಸಿತ್ತು. ಆದರೆ ಈ ಜಮೀನು ರಾಮಜನ್ಮಭೂಮಿ ಸನಿಹ ದೊರಕುವ ಸಾಧ್ಯತೆ ಇಲ್ಲ. ಸರಯೂ ನದಿಯ ಆಚೆ, ಅಂದರೆ ಜನ್ಮಭೂಮಿಯಿಂದ 15 ಕಿ.ಮೀ. ದೂರದಲ್ಲಿ ಜಮೀನು ಲಭ್ಯತೆ ಸಾಧ್ಯವಿದೆ ಎಂದು ತಿಳಿದುಬಂದಿದೆ.
ಸುಪ್ರೀಂ ತೀರ್ಪಿನ ಬಳಿಕ ಹೇಗಿದೆ ಅಯೋಧ್ಯೆ ಜೀವನ
‘ಅಯೋಧ್ಯೆ ಜನನಿಬಿಡ ನಗರವಾಗಿದ್ದು, ಇಲ್ಲಿ ಈ ಮುಂಚಿನ ಅಯೋಧ್ಯೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಷ್ಟೊಂದು ವಿಶಾಲ ಜಮೀನು ಲಭ್ಯವಿಲ್ಲ. ಅಲ್ಲದೆ, ಸರಯೂ ನದಿ ದಂಡೆಯ ಈಚೆ ಕೂಡ ಭೂಮಿ ಲಭ್ಯತೆ ಇಲ್ಲ’ ಎಂದು
ಅಧಿಕಾರಿಗಳು ಹೇಳಿದ್ದಾರೆ. ‘ರಾಮಜನ್ಮಭೂಮಿ ಸುತ್ತಲಿನ 15 ಕಿ.ಮೀ. ವ್ಯಾಪ್ತಿಯನ್ನು ‘ಶಾಸ್ತ್ರೀಯ ಪರಿಧಿ’ ಎಂದು ಕರೆಯಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಭೂಮಿಯ ಲಭ್ಯತೆ ಕ್ಷೀಣವಾಗಿದೆ.
ಮೇಲಾಗಿ ನ್ಯಾಯಾಲಯವು ಪ್ರಮುಖ ಸ್ಥಳದಲ್ಲಿ ಮಸೀದಿಗೆ ಜಮೀನು ನೀಡಿ ಎಂದು ಹೇಳಿದೆಯೇ ವಿನಾ, ಇಂಥದ್ದೇ ಸ್ಥಳದಲ್ಲಿ ನೀಡಿ ಎಂದಿಲ್ಲ. ಅಯೋಧ್ಯೆ-ಫೈಜಾಬಾದ್ ರಸ್ತೆಯಲ್ಲಿನ ಪಂಚಕೋಶಿ ಎಂಬ ಸ್ಥಳದ ಆಚೆ (೧೫ ಕಿ.ಮೀ. ಪರಿಧಿಯ ಆಚೆ) ಮಸೀದಿ ನಿರ್ಮಾಣಕ್ಕೆ ಜಾಗ ನೀಡುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.
ಈ ನಡುವೆ ಮಂದಿರ ಕೆಡವಿದ್ದ ಎನ್ನಲಾದ ಮುಘಲ್ ಅರಸ ಬಾಬರ್‌ನ ಕಮಾಂಡರ್ ಮೀರ್ ಬಾಕಿ ಎಂಬಾತನ ಸಮಾಧಿ ಇರುವ ಶಹಜಾನ್‌ವಾಲಾ ಗ್ರಾಮದಲ್ಲಿ ಮಸೀದಿ ನಿರ್ಮಿಸಬೇಕು ಎಂಬ ಆಗ್ರಹಗಳಿವೆ. ಆದರೆ ಇದು ೧೫ ಕಿ.ಮೀ. ಪರಿಧಿಯ ಒಳಗೆ ಬರುತ್ತದೆ.
ಈ ಉಸಾಬರಿ ಬೇಕಿತ್ತಾ? ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಸಿಕೊಂಡ ಪಾಕಿಸ್ತಾನ!
ಮಸೀದಿ ಜಮೀನು ಪಡೆಯಲು ಸುನ್ನಿ ಮಂಡಳಿ ಮೀನ-ಮೇಷ
ಸುಪ್ರೀಂ ಕೋರ್ಟ್ ಆದೇಶಾನುಸಾರ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ೫ ಎಕರೆ ಜಮೀನು ನೀಡಬೇಕಿದೆ. ಆದರೆ ಈ ಜಮೀನನ್ನು ಸ್ವೀಕರಿಸಬೇಕೇ ಬೇಡವೇ ಎಂಬ ಬಗ್ಗೆ ಸುನ್ನಿ ವಕ್ಫ್ ಮಂಡಳಿ ಜಿಜ್ಞಾಸೆಯಲ್ಲಿದ್ದು, ನ.26 ರಂದು ನಿರ್ಧರಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಜಫರ್ ಫಾರೂಖಿ ಅವರು ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯ ಜತೆ ಮಾತನಾಡಿ, ‘ಜಮೀನನ್ನು ಸ್ವೀಕರಿಸಬೇಕ ಬೇಡವೇ ಎಂಬ ಬಗ್ಗೆ ಭಿನ್ನ-ವಿಭಿನ್ನ ಅಭಿಪ್ರಾಯ ಕೇಳಿಬರತೊಡಗಿವೆ.
ಹೀಗಾಗಿ 5 ಎಕರೆ ಜಮೀನನ್ನು ಸರ್ಕಾರದಿಂದ ಸ್ವೀಕರಿಸಬೇಕಾ ಎಂಬ ಬಗ್ಗೆ ನವೆಂಬರ್ 26 ರಂದು ನಡೆಸಲು ಉದ್ದೇಶಿಸಿರುವ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು. ಈ ನಡುವೆ, ಕೋರ್ಟ್ ಆದೇಶವನ್ನು ಪ್ರಶ್ನಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ಸರ್ಕಾರದ ಜಮೀನು ಬೇಡ: ಮುಸ್ಲಿಮರ ಗುಂಪೊಂದು, ‘ಮಸೀದಿ ಕಟ್ಟಲು ನಮಗೆ ಸರ್ಕಾರದ ಜಮೀನು ಬೇಕಿಲ್ಲ’ ಎಂದಿದೆ.