ಪಂಜಾಬ್ ವಿಧಾನಸಭಾ ಚುನಾವಣೆಗೆ ಭರ್ಜರಿ ಭರವಸೆ ನೀಡಿದ AAP ಪಂಜಾಬ್‌ನಲ್ಲಿ AAP ಸರ್ಕಾರ ರಚಿಸಿದರೆ ಭರ್ಜರಿ ಆಫರ್ ಘೋಷಿಸಿದ ಕೇಜ್ರಿವಾಲ್ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ

ಪಂಜಾಬ್(ನ.22): ದೆಹಲಿ ಸಿಎಂ ಅರವಿಂದ್ರ ಕೇಜ್ರಿವಾಲ್(Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ(AAP) ಇದೀಗ ದೆಹಲಿ ಬಳಿಕ ಪಂಜಾಬ್‌ನಲ್ಲಿ(Punjab) ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ರೈತರ ಅನುಕಂಪ ಗಿಟ್ಟಿಸಿರುವ AAP ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ(Assembly elections 2022) ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸರ್ಕಸ್ ನಡೆಸುತ್ತಿದೆ. ಇದೀಗ ಪಂಜಾಬ್ ಪ್ರವಾಸದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರ್ಜರಿ ಆಫರ್ ನೀಡಿದ್ದಾರೆ. ಪಂಜಾಬ್‌ನಲ್ಲಿ AAP ಪಕ್ಷವನ್ನು ಅಧಿಕಾರಕ್ಕೆ ತಂದರೆ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಎರಡು ದಿನ ಪಂಜಾಬ್ ಪ್ರವಾಸ ಕೈಗೊಂಡಿರುವ ಅರವಿಂದ ಕೇಜ್ರಿವಾಲ್(Delhi CM), ಮೊದಲ ದಿನವೇ ಭರ್ಜರಿ ಘೋಷಣೆ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಹಿಂದಿನ ಪ್ರವಾಸದಲ್ಲಿ ಅಮೃತಸರದಲ್ಲಿ ಅರವಿಂದ್ ಕೇಜ್ರಿವಾಲ್ ಮಹಿಳೆಯರ ಸಬಲೀಕರಣಕ್ಕೆ(women empowerment) ಆಮ್ ಆದ್ಮಿ ಪಾರ್ಟಿ ಬಹುದೊಡ್ಡ ಯೋಜನೆ ಘೋಷಿಸಲಿದೆ ಎಂದಿದ್ದರು. ಇಂದು(ನ.22) ಮೊಗಾದಲ್ಲಿ ನಡೆದ AAP ಸಮಾವೇಶದಲ್ಲಿ ಕೇಜ್ರಿವಾಲ್ ಪ್ರತಿ ತಿಂಗಳು 1,000 ರೂಪಾಯಿ ಭರವಸೆ ನೀಡಿದ್ದಾರೆ. 

Farm Bills’ repeal| ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ: ಕಾಯ್ದೆ ರದ್ದಿಗೆ ಕಾರಣಗಳೇನು?

ಸಾವಿರ ರೂಪಾಯಿ ಭರವಸೆ ನೀಡಿದ ಬಳಿಕ ಅರವಿಂದ್ ಕೇಜ್ರಿವಾಲ್, ಇದು ವಿಶ್ವದ ಅತೀ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಪಂಜಾಬ್‌ನಲ್ಲಿ ನಮಗೆ ಅಧಿಕಾರ ಕೊಡಿ, ಪಂಜಾಬ್ ಮಹಿಳೆಯರ ಸಬಲೀಕರಣ ಚಿಂತೆ ಬಿಡಿ. ಸಮಗ್ರ ಅಭಿವೃದ್ಧಿಗೆ AAP ಯೋಜನೆ ರೂಪಿಸಲಿದೆ. ಹೀಗಾಗಿ ಪಂಜಾಬ್ ಸರ್ವಾಂಗೀಣ ಅಭಿವೃದ್ಧಿಗೆ AAP ಒಂದೇ ಮಾರ್ಗ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ಹಾಗೂ ಹರ್ಯಾಣ ಭಾಗದ ರೈತರು ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ನೀಡಿದ್ದರು. ಅವರಿಗೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿದ್ದರು. ಈ ಮೂಲಕ ಬಿಜೆಪಿ ವಿರುದ್ಧ ತಿರುಗಿಬಿದ್ದ ರೈತರನ್ನು ತಮ್ಮತ್ತ ಸೆಳೆದಿದ್ದರು. ಹಲವು ಬಾರಿ ರೈತರ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಹುರಿದಂಬಿಸಿದ್ದರು. 

ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!

ದೆಹಲಿ ಹೊರತು ಪಡಿಸಿದರೆ ಆಮ್ ಆದ್ಮಿ ಪಕ್ಷಕ್ಕೆ ಅತೀ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ಪಂಜಾಬ್‌ನಲ್ಲಿ. ಇದಕ್ಕೆ ಪೂರಕವಾಗಿ ಪಂಜಾಬ್ ಕಾಂಗ್ರೆಸ್‌ನಲ್ಲಿನ ಒಳಜಗಳ ಕೂಡ ಅರವಿಂದ್ ಕೇಜ್ರಿವಾಲ್‌ಗೆ ನೆರವಾಗಿತ್ತು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷ ತೊರೆದು ಹೊಸ ಪಕ್ಷ ಘೋಷಣೆ ಮಾಡಿ, ಬಿಜೆಪಿ ಜೊತೆ ಸೀಟು ಹಂಚಿಕೆಗೆ ಮುಂದಾದರೋ ಅಲ್ಲಿಂದ ಕೇಜ್ರಿವಾಲ್ ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ದಿಲ್ಲಿ ಸರ್ಕಾರದ ಸಚಿವರು, ಶಾಸಕರು ದಿಲ್ಲಿಗಿಂತೆ ಹೆಚ್ಚು ಪಂಜಾಬ್‌ನಲ್ಲಿ ಸುತ್ತಾಡುತ್ತಿದ್ದಾರೆ. ಮತಗಳಿಕೆಗೆ ಸಮಾವೇಶಗಳನ್ನು ನಡೆಸುತ್ತಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆ 2022:
ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರವರಿ 2022 ರಿಂದ ಮಾರ್ಚ್ 2022ರ ಒಳಗೆ ನಡೆಯಲಿದೆ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಅವಧಿ ಮಾರ್ಚ್ 2022ಕ್ಕೆ ಅಂತ್ಯಗೊಳ್ಳಲಿದೆ. 117 ವಿಧಾನಸಭಾ ಕ್ಷೇತ್ರಗಳ ಪಂಜಾಬ್ ಚುನಾವಣೆ ಇದೀಗ ಭಾರಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಪಂಜಾಬ್‌ನಲ್ಲಿನ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ, ಆಮ್ ಆದ್ಮಿ ಪಾರ್ಟಿ. ಇನ್ನು ಬಿಜೆಪಿ, ಕ್ಯಾಪ್ಟನ್ ಅಮರಿಂದರ್ ಇತ್ತೀಚೆಗೆ ಘೋಷಿಸಿದ ಪಂಜಾಬ್ ಲೊಕ ಕಾಂಗ್ರೆಸ್ ಮೈತ್ರಿ ಮೂಲಕ ಅಖಾಡಕ್ಕಿಳಿಯಲಿದೆ. 

2017ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 117 ಸ್ಥಾನಗಳ ಪೈಕಿ 77 ಸ್ಥಾನ ಗೆದ್ದುಕೊಂಡಿತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆಲ್ಲುವ ಮೂಲಕ 2ನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಿತು.