* ಪಂಜಾಬ್‌ನಲ್ಲಿ ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ* ಕಾಯ್ದೆ ರದ್ದಿಗೆ ಕಾರಣಗಳೇನು?

ಚಂಡೀಗಢ(ನ.20): ಕೃಷಿ ಕಾಯ್ದೆಗಳ ಹಿಂಪಡೆತವು (Farm Bills’ repeal) ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ (Punjab Assembly Elections) ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್‌ (Amamrinder singh) ನೇತೃತ್ವದ ಹೊಸ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಬಿಜೆಪಿ (BJP) ಹಾದಿ ಸುಗಮವಾಗಿದೆ.

ಈ ಕೃಷಿ ಕಾಯ್ದೆಗಳ ವಿರುದ್ಧ ರೈತರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಪ್ರಚಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೇ ಚುನಾವಣಾ ಸಮೀಕ್ಷೆ ನಡೆಸಿದ್ದ ಎಬಿಪಿ ಸುದ್ದಿ ವಾಹಿನಿ, ಬಿಜೆಪಿ ಒಂದು ಸೀಟನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿತ್ತು.

ಈ ನಡುವೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಕಾಂಗ್ರೆಸ್ಸಿಗ ಅಮರೀಂದರ್‌ ಸಿಂಗ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಲ್ಲಿ, ಪಂಜಾಬ್‌ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಗೆ ಸಿದ್ಧ ಎಂದು ಸಿಂಗ್‌ ಘೋಷಣೆ ಮಾಡಿದ್ದರು. ಅದರಂತೆ ಈಗ ಕೃಷಿ ಕಾಯ್ದೆಗಳು ರದ್ದಾಗಿದ್ದು, ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಂಗ್‌, ಬಿಜೆಪಿ ಜತೆಗಿನ ಮೈತ್ರಿಗೆ ಸಿದ್ಧ ಎಂಬ ಸುಳಿವು ನೀಡಿದ್ದಾರೆ.

* ಕಾಯ್ದೆ ರದ್ದಿಗೆ ಕಾರಣಗಳೇನು?

- ಕೃಷಿ ಕಾಯ್ದೆಗೆ ದೇಶವ್ಯಾಪಿ ರೈತ ಸಮುದಾಯದಿಂದ ವ್ಯಕ್ತವಾಗಿರುವ ವಿರೋಧ ಹಿನ್ನೆಲೆ

- ರೈತ ಹೋರಾಟ ಸ್ಥಳದಲ್ಲಿ ವಿದೇಶಿ ದುಷ್ಟಶಕ್ತಿಗಳ ಪ್ರವೇಶ ಆತಂಕ, ಭದ್ರತೆ ಕಳವಳ

- ರೈತರು ಪ್ರಮುಖ ಪಾತ್ರವಹಿಸಲಿರುವ ಮುಂದಿನ ವರ್ಷದ ಪಂಚ ರಾಜ್ಯ ಚುನಾವಣೆ

- ಇತ್ತೀಚಿನ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ‘ಪಂಜಾಬಲ್ಲಿ ಬಿಜೆಪಿಗೆ ಶೂನ್ಯ ಗಳಿಕೆ’ ಭವಿಷ್ಯ

- ನೆಲೆ ಕಳೆದುಕೊಂಡಿರುವ ಪಂಜಾಬ್‌ನಲ್ಲಿ ಅಮರೀಂದರ್‌ ಜತೆ ಮೈತ್ರಿಗಾಗಿ ಕಾಯ್ದೆ ರದ್ದು

- ಉ.ಪ್ರ. ಚುನಾವಣೆಯಲ್ಲಿ ಬಿಜೆಪಿಗೆ 100 ಸ್ಥಾನ ಕಳೆದುಕೊಳ್ಳುವ ಭೀತಿ

- ರಾಜಕೀಯವಾಗಿ ಮಹತ್ವವಾಗಿರುವ ಉತ್ತರಪ್ರದೇಶದಲ್ಲಿ ನೆಲೆ ಕಾಪಾಡಿಕೊಳ್ಳುವುದು

- ಕೃಷಿ ಕಾಯ್ದೆಯನ್ನು ವಿಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿ ಬಳಸುವುದನ್ನು ತಪ್ಪಿಸುವುದು

ರಾಜಕೀಯ ಲಾಭಕ್ಕೆ ಕಾಯ್ದೆ ರದ್ದು: ಸುಪ್ರೀಂ ರೈತ ಸಮಿತಿ ಸದಸ್ಯ ಕಿಡಿ

ವಿವಾದಿತ ಎನ್ನಲಾದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ಈ ಕುರಿತು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕೃಷಿ ಸಮಿತಿಯ ಸದಸ್ಯ ಅನಿಲ್‌ ಘನ್ವಾತ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಾತನಾಡಿದ ಘನ್ವಾತ್‌ ಅವರು, ‘ಮೋದಿ ಅವರು ರೈತರ ಸುಧಾರಣೆ ಬದಲಿಗೆ ರಾಜಕೀಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕೃಷಿ ಕಾಯ್ದೆಗಳಲ್ಲಿರುವ ಸಮಸ್ಯೆ ಇತ್ಯರ್ಥಕ್ಕಾಗಿ ನಮ್ಮ ಸಮಿತಿ ಹಲವು ತಿದ್ದುಪಡಿ ಮತ್ತು ಪರಿಹಾರಗಳನ್ನು ಸೂಚಿಸಲಾಗಿತ್ತು. ಆದರೆ ಅವುಗಳನ್ನು ಬಳಸಿಕೊಂಡು ಬಿಕ್ಕಟ್ಟು ಪರಿಹರಿಸಿಕೊಳ್ಳುವ ಬದಲಿಗೆ ಮೋದಿ ಮತ್ತು ಬಿಜೆಪಿ ತಮ್ಮ ಹೆಜ್ಜೆಯನ್ನು ಹಿಂದೆ ಇಟ್ಟಿದೆ. ಅವರಿಗೆ ಚುನಾವಣೆ ಗೆಲುವು ಹೊರತುಪಡಿಸಿ, ಬೇರೇನೂ ಬೇಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

* ವಿವಾದಕ್ಕೆ ಕಾರಣವಾಗಿದ್ದ 3 ಕಾಯ್ದೆಗಳು

1. ರೈತರ ಬೆಳೆ ವ್ಯಾಪಾರ ಮತ್ತು ಉದ್ಯಮ (ಉತ್ತೇಜನ ಮತ್ತು ನೆರವು) ಕಾಯ್ದೆ 2020:

ಈ ಕಾಯ್ದೆಯು, ರೈತರಿಗೆ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಕಾಯ್ದೆಯಡಿ ನೊಂದಾಯಿತ ಮಾರುಕಟ್ಟೆಗಳಿಂದ ಹೊರಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತಿತ್ತು. ಈ ಕಾಯ್ದೆ ಎಲ್ಲಾ ರಾಜ್ಯಗಳ ಎಪಿಎಂಸಿ ಕಾಯ್ದೆಯನ್ನು ಅನೂರ್ಜಿತಗೊಳಿಸುತ್ತಿತ್ತು.

2. ರೈತರ (ಸಬಲೀಕರಣ ಮತ್ತು ರಕ್ಷಣೆ) ದರ ಖಾತರಿ ಒಪ್ಪಂದ ಮತ್ತು ಕೃಷಿ ಸೇವಾ ಕಾಯ್ದೆ 2020:

ಈ ಕಾಯ್ದೆಯು, ರೈತರಿಗೆ ಗುತ್ತಿಗೆ ಕೃಷಿ ಚಟುವಟಿಕೆ ಒಪ್ಪಂದಕ್ಕೆ ಅಗತ್ಯ ಕಾನೂನು ಚೌಕಟ್ಟನ್ನು ಒದಗಿಸುತ್ತಿತ್ತು. ಈ ಕಾಯ್ದೆಯಡಿ ಬಿತ್ತನೆಗೆ ಮೊದಲೇ ರೈತರು, ಖರೀದಿದಾರನ ಜೊತೆಗೆ ಪೂರ್ವ ನಿಗದಿತ ಬೆಲೆಗೆ ತನ್ನ ಉತ್ಪನ್ನ ಮಾರಾಟ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಬಹುದಿತ್ತು. ಆದರೆ ಈ ಕಾಯ್ದೆಯು, ಖರೀದಿದಾರನು ರೈತನಿಗೆ ಆಫರ್‌ ಮಾಡಬೇಕಾದ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಯಾವುದೇ ಪ್ರಸ್ತಾಪ ಹೊಂದಿರಲಿಲ್ಲ.

3. ಅಗತ್ಯ ಸರಕು (ತಿದ್ದುಪಡಿ) ಕಾಯ್ದೆ, 2020:

ಈ ತಿದ್ದುಪಡಿ ಕಾಯ್ದೆಯ ಮೂಲಕ, ಅತ್ಯಂತ ಗಂಭೀರ ಪರಿಸ್ಥಿತಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಯಾವುದೇ ಕೃಷಿ ಉತ್ಪನ್ನಗಳ ಸಂಗ್ರಹದ ಮೇಲೆ ಮಿತಿ ಹೇರುವ ಕೇಂದ್ರ ಸರ್ಕಾರದ ಅಧಿಕಾರವನ್ನು ತೆಗೆದುಹಾಕಿತ್ತು.