Asianet Suvarna News Asianet Suvarna News

UP Elections 2022: ನಕಲಿ ಸಮಾಜವಾದಿಗಳು ಗೆದ್ದರೆ ಜನರನ್ನು ಹಸಿವಿಗೆ ನೂಕುತ್ತಾರೆ : ಮೋದಿ ವಾಗ್ದಾಳಿ!

*ರೈತರ ನೆರವನ್ನು ನಿಲ್ಲಿಸಿ ಜನರನ್ನು ಹಸಿವಿಗೆ ದೂಡುತ್ತಾರೆ
*ಆ ಪಕ್ಷ ಗೆದ್ದರೆ ಹಲವು ಸಮಸ್ಯೆ ಖಚಿತ
*5 ಜಿಲ್ಲೆಗಳಲ್ಲಿ ಆನ್‌ಲೈನ್‌ ಮೂಲಕ ಪ್ರಧಾನಿ ಪ್ರಚಾರ
*ಗೋರಖ್‌ಪುರ: ಶಾ ಸಮ್ಮುಖದಲ್ಲಿ ಯೋಗಿ ನಾಮಪತ್ರ
*ಪಕ್ಷಾಂತರ ಮಾಡಲ್ಲ ಎಂದು ಮತ್ತೆ ಕಾಂಗ್ರೆಸ್ಸಿಗರ ಪ್ರಮಾಣ
*ಹೈಕಮಾಂಡ್‌ ವಿರುದ್ಧವೇ ಸಿಧು ಆಕ್ರೋಶ

Assembly Elections 2022 Samajwadi Party promotes fake socialism in Uttar Pradesh says PM Narendra Modi at virtual rally mnj
Author
Bengaluru, First Published Feb 5, 2022, 8:29 AM IST | Last Updated Feb 5, 2022, 8:29 AM IST

ನವದೆಹಲಿ (ಫೆ. 05): ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಮಾಜವಾದಿಗಳು ನಕಲಿ. ಮತ ಹಾಕುವಾಗ ಬಹಳ ಎಚ್ಚರಿಕೆ ವಹಿಸಿ. ಕುಟುಂಬದವರು ಮುನ್ನಡೆಸುತ್ತಿರುವ ಆ ಪಕ್ಷ ಗೆದ್ದರೆ ಹಲವು ಸಮಸ್ಯೆಯಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಪಶ್ಚಿಮ ಉತ್ತರಪ್ರದೇಶದ 5 ಜಿಲ್ಲೆಗಳ ಮತದಾರರನ್ನು ಉದ್ದೇಶಿಸಿ ಶುಕ್ರವಾರ ವರ್ಚುವಲ್‌ ರಾರ‍ಯಲಿಯಲ್ಲಿ ಮಾತನಾಡಿದ ಅವರು, ಪರದೆಯ ಹಿಂದೆ ದೊಂಬಿಕೋರರು ಹಾಗೂ ಮಾಫಿಯಾದವರು ಉತ್ತರಪ್ರದೇಶವನ್ನು (Uttar Pradesh) ಆಳಲು ಬಿಡಬೇಡಿ. ಅಂತಹ ನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದೀರಿ ಎಂಬುದನ್ನು ತಿಳಿದು ಸಂತೋಷವಾಗಿದೆ ಎಂದು ಹೇಳಿದರು.

ನಕಲಿ ಸಮಾಜವಾದಿಗಳು ಗೆದ್ದರೆ ರೈತರಿಗೆ ಸಿಗುತ್ತಿರುವ ನೆರವನ್ನು ನಿಲ್ಲಿಸುತ್ತಾರೆ. ಈ ನಕಲಿ ಸಮಾಜವಾದಿಗಳು ನಿಮ್ಮನ್ನು ಹಸಿವಿಗೆ ದೂಡುತ್ತಾರೆ. ಈಗ ನಡೆಯುತ್ತಿರುವ ಚುನಾವಣೆ ಉತ್ತರಪ್ರದೇಶದ ಭದ್ರತೆ, ಗೌರವ ಹಾಗೂ ಸಂಪತ್ತನ್ನು ಮುಂದುವರಿಸುವುದಾಗಿದೆ. ರೌಡಿಶೀಟರ್‌ಗಳನ್ನು ದೂರ ಇಟ್ಟು, ಹೊಸ ಇತಿಹಾಸ ಸೃಷ್ಟಿಸುವುದಾಗಿದೆ ಎಂದು ಹೇಳಿದರು.

ಉತ್ತರಪ್ರದೇಶದ ಕ್ರಿಮಿನಲ್‌ಗಳನ್ನು ಈ ಪರಿ ನಿಯಂತ್ರಿಸಬಹುದು ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಯೋಗಿ ಆದಿತ್ಯನಾಥ್‌ ಅವರು ನೆಲದ ಕಾನೂನನ್ನು ಉತ್ತರಪ್ರದೇಶದಲ್ಲಿ ಸ್ಥಾಪಿಸಿದ್ದಾರೆ. ಡಬಲ್‌ ಸ್ಪೀಡ್‌ನಲ್ಲಿ ಕಾರ್ಯನಿರ್ವಹಿಸುವ ಸರ್ಕಾರ ಉತ್ತರಪ್ರದೇಶಕ್ಕೆ ಬೇಕು. ಡಬಲ್‌ ಎಂಜಿನ್‌ ಸರ್ಕಾರ ಮಾತ್ರ ಅದನ್ನು ಸಾಕಾರಗೊಳಿಸಬಲ್ಲದು ಎಂದು ಹೇಳಿದರು. ಪಶ್ಚಿಮ ಉತ್ತರಪ್ರದೇಶದ 5 ಜಿಲ್ಲೆಗಳಲ್ಲಿ 23 ವಿಧಾನಸಭಾ ಕ್ಷೇತ್ರಗಳು ಇವೆ.

ಇದನ್ನೂ ಓದಿ: Punjab Election : ಪಂಜಾಬ್ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಧು-ಚನ್ನಿ ಜಟಾಪಟಿ!

ಶಾ ಸಮ್ಮುಖದಲ್ಲಿ ಯೋಗಿ ನಾಮಪತ್ರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೋರಖ್‌ಪುರ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಹಾಜರಿದ್ದರು.ಯೋಗಿ ಈ ಮೊದಲು ಐದು ಬಾರಿ ಗೋರಖ್‌ಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಆದರೆ ಮೊದಲ ಬಾರಿ ಈ ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಎದುರಿಸಲಿದ್ದಾರೆ.

ನಾಮಪತ್ರ ಸಲ್ಲಿಕೆ ನಂತರದ ರ‍್ಯಾಲಿಯಲ್ಲಿ ಪಾಲ್ಗೊಂಡ ಗೃಹ ಸಚಿವ ಅಮಿತ್‌ ಶಾ ‘ಯೋಗಿ ರಾಜ್ಯದಲ್ಲಿರುವ ರೌಡಿಗಳನ್ನು ಸಮರ್ಥವಾಗಿ ಮಟ್ಟಹಾಕಿದ್ದಾರೆ. 25 ವರ್ಷಗಳ ನಂತರ ಯೋಗಿ ಕಾರಣದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪನೆಯಾಗಿದೆ’ ಎಂದು ಪ್ರಶಂಸಿಸಿದರು.

ಗೋರಖ್‌ಪುರ ಮೊದಲು ಕ್ರಿಮಿನಲ್‌ಗಳ ಜಾಗವಾಗಿತ್ತು. ಈಗ ಗೋರಖ್‌ಪುರದ ಜಿ ಎಂದರೆ ಗಂಗಾ ಎಕ್ಸ್‌ಪ್ರೆಸ್‌ವೇ, ಒ ಎಂದರೆ ಸಾವಯವ ಕೃಷಿ, ಆರ್‌ ಎಂದರೆ ರಸ್ತೆ, ಎ ಎಂದರೆ ಏಮ್ಸ್‌ ಆಸ್ಪತ್ರೆ, ಕೆಎಚ್‌ ಎಂದರೆ ಗೊಬ್ಬರ ತಯಾರಿಕೆ ಕಾರ್ಖಾನೆ, ಪಿಯು ಎಂದರೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಹಾಗೂ ಆರ್‌ ಎಂದರೆ ವಲಯ ವೈದ್ಯಕೀಯ ಸಂಶೋಧನಾ ಕೇಂದ್ರ ಎಂದು ವ್ಯಾಖ್ಯಾನಿಸಿದರು.ಯೋಗಿ ಆಡಳಿತದಲ್ಲಿ ಕ್ರಿಮನಲ್‌ಗಳನ್ನು ಕೇವಲ ಜೈಲುಗಳಲ್ಲಿ ಅಥವಾ ಸಮಾಜವಾದಿ ಪಕ್ಷದ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಕಾಣಬಹುದು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Goa Election 2022 : ಕಾಂಗ್ರೆಸ್ ದುರಾಡಳಿತದ ಕಾರಣದಿಂದಾಗಿ ನಾನು ರಾಜಕೀಯಕ್ಕೆ ಬಂದೆ ಎಂದ ಕೇಜ್ರಿವಾಲ್!

ಹೈಕಮಾಂಡ್‌ ವಿರುದ್ಧವೇ ಸಿಧು ಆಕ್ರೋಶ: ಪಂಜಾಬ್‌ ಹಾಲಿ ಮುಖ್ಯ​ಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಜತೆ ಪಂಜಾಬ್‌ನ ಮುಂದಿನ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನವ​ಜೋತ್‌ ಸಿಂಗ್‌ ಸಿಧು, ಈಗ ಹೈಕಮಾಂಡ್‌ ವಿರುದ್ಧವೇ ಗುಡುಗಿದ್ದಾರೆ. ಶುಕ್ರವಾರ ಮಾತ​ನಾ​ಡಿದ ಸಿಧು, ‘ಮೇಲಿನ ಹುದ್ದೆ​ಯ​ಲ್ಲಿ​ರು​ವ​ ಜನ​ರು ತಮ್ಮ ತಾಳಕ್ಕೆ ಕುಣಿ​ಯುವ ದುರ್ಬಲ ವ್ಯಕ್ತಿ​ಗಳು ಮುಖ್ಯ​ಮಂತ್ರಿ​ಯಾ​ಗ​ಬೇಕು ಎಂದು ಆಸೆ​ಪ​ಡು​ತ್ತಾರೆ’ ಎಂದು ಹೇಳಿ​ದ್ದಾರೆ.

ಆದರೆ, ಅವರು ತಮ್ಮದೇ ಪಕ್ಷದ ಕೇಂದ್ರೀಯ ನಾಯ​ಕ​ತ್ವದ ವಿರುದ್ಧ ಮಾತ​ನಾ​ಡಿ​ದ್ದಾ​ರೆಯೇ ಅಥವಾ ಅನ್ಯ ಪಕ್ಷ​ಗಳನ್ನು ಉದ್ದೇ​ಶಿಸಿ ಈ ಹೇಳಿಕೆ ನೀಡಿ​ದ್ದಾ​ರೆಯೇ ಎಂಬುದು ಸ್ಪಷ್ಟ​ವಾ​ಗಿಲ್ಲ. ಆದರೆ, ಸಿಧು ಅವರು ಕೇಂದ್ರದ ಬಿಜೆಪಿ ಸರ್ಕಾ​ರದ ವಿರುದ್ಧ ಈ ಹೇಳಿಕೆ ನೀಡಿ​ದ್ದಾರೆ ಎಂದು ಅವರ ಮಾಧ್ಯಮ ಸಲ​ಹೆ​ಗಾ​ರರು ಸ್ಪಷ್ಟಪಡಿಸಿದ್ದಾರೆ.ಭಾನು​ವಾರ ಪಕ್ಷದ ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯನ್ನು ರಾಹುಲ್‌ ಗಾಂಧಿ ಅವರು ಪ್ರಕ​ಟಿ​ಸ​ಲಿದ್ದಾರೆ. ಈ ನಡು​ವೆಯೇ, ಹೊರ​ಬಿ​ದ್ದಿ​ರುವ ಸಿಧು ಹೇಳಿ​ಕೆಯು ಕಾಂಗ್ರೆಸ್‌ ಅನ್ನೇ ಉದ್ದೇ​ಶಿ​ಸಿದೆ ಎನ್ನ​ಲಾ​ಗಿದೆ.

ಪಕ್ಷಾಂತರ ಮಾಡಲ್ಲ ಎಂದು ಮತ್ತೆ ಕಾಂಗ್ರೆಸ್ಸಿಗರ ಪ್ರಮಾಣ:ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳು ಹಿರಿಯ ನಾಯಕ ರಾಹುಲ್‌ ಗಾಂಧಿ ಅವರ ಎದುರು ತಾವು ಪಕ್ಷಾಂತರ ಮಾಡುವುದಿಲ್ಲ ಎಂಬ ಅಫಿಡವಿಟ್‌ ಸಲ್ಲಿಸಿ, ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಗೋವಾ ಫಾರ್ವಡ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಫಾರ್ವರ್ಡ್‌ ಪಕ್ಷದ ಅಭ್ಯರ್ಥಿಗಳು ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ಸಿಗರು ಈ ರೀತಿ ಪ್ರಮಾಣ ಸ್ವೀಕರಿಸುತ್ತಿರುವುದು ಇದು 2ನೇ ಸಲ.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ 17 ಶಾಸಕರಲ್ಲಿ 15 ಜನ ಪಕ್ಷಾಂತರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಸಲ ಕಾಂಗ್ರೆಸ್‌ ಪಕ್ಷ ಆಣೆ-ಪ್ರಮಾಣದ ಮೊರೆ ಹೋಗಿದೆ. ಫೆ. 14 ರಂದು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಇತ್ತೀಚೆಗೆ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಕೂಡ ಪಕ್ಷಾಂತರ ಮಾಡುವುದಿಲ್ಲ ಎಂದು ಅಫಿಡವಿಟ್‌ ಸಲ್ಲಿಸಿದ್ದರು

Latest Videos
Follow Us:
Download App:
  • android
  • ios