ಅಸ್ಸಾಂನಲ್ಲಿ ನಡೆದ ಸುಖೋಯ್ ಯುದ್ಧ ವಿಮಾನ ದುರಂತದಲ್ಲಿ ಮಡಿದ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮದುವೆಗೆ ಸಿದ್ಧರಾಗಿದ್ದ ಅನುಜ್ ಅವರ ಅಂತ್ಯಸಂಸ್ಕಾರದಲ್ಲಿ ಅವರ ಭಾವಿ ಪತ್ನಿ ಕೂಡ ಭಾಗವಹಿಸಿದ್ದರು.

ಮದುವೆಗೆ ಸಿದ್ಧತೆ ನಡಿತಿರುವಾಗಲೇ ಸುಖೋಯ್ ದುರಂತಕ್ಕೆ ಬಲಿಯಾದ ಪೈಲಟ್

ರೋಹ್ಟಕ್: ಶುಕ್ರವಾರ ಅಸ್ಸಾಂನ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡ ಸುಖೋಯ್ ಯುದ್ಧ ವಿಮಾನ (SU-30MKI) ದುರಂತದಲ್ಲಿ ಮಡಿದ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ರೋಹ್ಟಕ್ ಜಿಲ್ಲೆಯ ಕಾಕ್ರಾನಾದಲ್ಲಿ ಪೂರ್ಣ ಮಿಲಿಟರಿ ಮತ್ತು ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆಯಿತು. ಸಾವಿರಾರು ಜನರು ಯೋಧನ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಅಂತಿಮ ದರ್ಶನ ಪಡೆದು ಗೌರವ ಸೂಚಿಸಿದರು. ಈ ಸುಖೋಯ್ ಯುದ್ಧ ವಿಮಾನದ ದುರಂತದಲ್ಲಿ ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದರು.

ಕಣ್ಣೀರಿಡುತ್ತಲೇ ಕಳುಹಿಸಿಕೊಟ್ಟ ಭಾವಿ ಪತ್ನಿಯಾಗಬೇಕಿದ್ದ ಮಹಿಳಾ ಪೈಲಟ್

ಇವರಲ್ಲಿ ಅನುಜ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಸಿದ್ಧತೆಗಳು ನಡೆದಿದ್ದವು, ಏರ್‌ಪೋರ್ಸ್‌ನಲ್ಲಿ ಸಹೋದ್ಯೋಗಿಯಾಗಿದ್ದ ಮಹಿಳಾ ಪೈಲಟ್ ಜೊತೆಗೆ ಅವರ ಮದುವೆ ಕೆಲ ತಿಂಗಳ ಹಿಂದೆ ನಿಶ್ಚಯವಾಗಿದ್ದು, ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದು ಕೆಲ ತಿಂಗಳಲ್ಲೇ ಅವರು ಹಸೆಮಣೆ ಏರಬೇಕಿತ್ತು. ಅಷ್ಟರಲ್ಲಿ ಅವರು ಸುಖೋಯ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದು, ಅವರ ಕುಟುಂಬವನ್ನು ಮಾತ್ರವಲ್ಲದೇ ಅವರ ಭಾವಿ ಪತ್ನಿಯನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಅಂತ್ಯಸಂಸ್ಕಾರದ ಸ್ಥಳದಲ್ಲಿ ಅವರ ಪೋಷಕರು ಮಾತ್ರವಲ್ಲದೇ ಅವರ ಭಾವಿ ಪತ್ನಿಯೂ ಕೂಡ ಒತ್ತರಿಸಿ ಬರುವ ದುಃಖವನ್ನು ಹಿಡಿದಿಡಲು ಪ್ರಯತ್ನಿಸಿ ಸೋತು ಕಣ್ಣೀರಿಡುತ್ತಲೇ ಯೋಧ ಅನೂಜ್‌ಗೆ ಸೆಲ್ಯೂಟ್ ಹೊಡೆಯುತ್ತಾ ಗೌರವ ಸೂಚಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಅನೇಕರನ್ನು ಭಾವುಕರಾಗಿಸಿದೆ.

ತ್ರಿವರ್ಣ ಧ್ವಜವನ್ನು ಸುತ್ತಿ, ಅಲಂಕರಿಸಿದ ಅಧಿಕಾರಿಯ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಗ್ರಾಮಕ್ಕೆ ತರಲಾಯಿತು, ಗ್ರಾಮಸ್ಥರು, ಸಂಬಂಧಿಕರು ಮತ್ತು ಗಣ್ಯರು ಅವರ ಅಂತಿಮ ನಮನ ಸಲ್ಲಿಸಲು ಅಲ್ಲಿ ನೆರೆದಿದ್ದರು. ಶಹೀದ್ ಅನುಜ್ ವಶಿಷ್ಟ್ ಅಮರ್ ರಹೇಂ ಎಂಬ ಘೋಷಣೆಗಳು ಮೊಳಗುತ್ತಿದ್ದವು, ಜನರು ಯುವ ಅಧಿಕಾರಿಗೆ ಕಣ್ಣೀರಿನ ವಿದಾಯ ಹೇಳುತ್ತಿದ್ದಂತೆ ಅಲ್ಲಿ ವಾತಾವರಣವು ಶೋಕದಿಂದ ಮೊಳಗಿತು. ಅಂತಿಮ ವಿಧಿವಿಧಾನಗಳನ್ನು ಅವರ ಕಿರಿಯ ಸಹೋದರ ಮನುಜ್ ನೆರವೇರಿಸಿದರೆಭಾರತೀಯ ವಾಯುಪಡೆಯ ತುಕಡಿಯು ಅವರಿಗೆ ಔಪಚಾರಿಕ ಗಾರ್ಡ್ ಆಫ್ ಹಾನರ್ ಅನ್ನು ನೀಡಿತು.

ಇದನ್ನೂ ಓದಿ: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಕೇಸ್ ಹಾಕಿದ್ದ ಅಶುತೋಷ್ ವಿರುದ್ಧ ಚಲಿಸುವ ರೈಲಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ

ಆಗಸ್ಟ್ 9, 1993 ರಂದು ಕಾಕ್ರಾನಾ ಗ್ರಾಮದಲ್ಲಿ ಜನಿಸಿದ ಅನುಜ್ ವಶಿಷ್ಠ್ ತಮ್ಮ 7ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಗುರುಗ್ರಾಮ್‌ಗೆ ವಲಸೆ ಹೋಗಿದ್ದರು. ಅಲ್ಲಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಬಾಲ್ಯದಿಂದಲೂ ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದ ಅನುಜ್ ಶಿಸ್ತಿಗೆ ಹೆಸರುವಾಸಿಯಾಗಿದ್ದರು. 2015 ರಲ್ಲಿ ಭಾರತೀಯ ವಾಯುಪಡೆಗೆ ಆಯ್ಕೆಯಾಗುವ ಮೂಲಕ ತಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕನಸನ್ನು ನನಸಾಗಿಸಿಕೊಂಡಿದ್ದರು.

ತರಬೇತಿ ಮುಗಿದ ನಂತರ, ಅವರು 2016 ರಲ್ಲಿ ತಮ್ಮ ಹಳ್ಳಿಗೆ ಮರಳಿದಾಗ ಅಲ್ಲಿನ ನಿವಾಸಿಗಳು ಅವರಿಗೆ ಆತ್ಮೀಯ ಮತ್ತು ಸಂಭ್ರಮಾಚರಣೆಯ ಸ್ವಾಗತವನ್ನು ನೀಡಿದರು. ಈ ನೆನಪುಗಳನ್ನು ಗ್ರಾಮಸ್ಥರು ಇನ್ನೂ ಮರೆತಿಲ್ಲ, ಆಗಲೇ ಅವರ ಸಾವಿನ ಸುದ್ದಿ ಬಂದಿದ್ದು, ಇದು ಅನೇಕರನ್ನು ಭಾವುಕರನ್ನಾಗಿಸಿದೆ.

ಇದನ್ನೂ ಓದಿ: ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ: ವೀಡಿಯೋ ಭಾರಿ ವೈರಲ್

ಅನುಜ್ ಸಶಸ್ತ್ರ ಪಡೆಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುವ ಕುಟುಂಬದಿಂದ ಬಂದವರು. ಅವರ ತಂದೆ ಆನಂದ್ ಕುಮಾರ್, ಸೇನೆಯ ನಿವೃತ್ತ ಸುಬೇದಾರ್. ಅವರ ಕಿರಿಯ ಸಹೋದರ ಮನುಜ್, ಎಂಜಿನಿಯರಿಂಗ್ ಪದವೀಧರರಾಗಿದ್ದು, ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ದುರಂತದ ಸುದ್ದಿ ತಿಳಿದ ನಂತರ ಭಾರತಕ್ಕೆ ಮರಳಿದ್ದ, ಸೋದರ ಅಂತಿಮ ಸಂಸ್ಕಾರವನ್ನು ಅವರೇ ನೆರವೇರಿಸಿದ್ದಾರೆ.

ಅನುಜ್ ಅವರ ವಿವಾಹವನ್ನು ಇತ್ತೀಚೆಗೆ ನಿಶ್ಚಯಿಸಲಾಗಿದ್ದು, ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು ಎಂದು ಕುಟುಂಬ ಸದಸ್ಯರು ಬಹಿರಂಗಪಡಿಸಿದ್ದಾರೆ. ಅವರು ಮದುವೆಯಾಗಲಿರುವ ಮಹಿಳೆ ಕೂಡ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದು, ಕುಟುಂಬಕ್ಕೆ ಈ ನಷ್ಟವು ಇನ್ನಷ್ಟು ನೋವಿನಿಂದ ಕೂಡಿದೆ. ಶನಿವಾರ, ಕಾಕ್ರಾನಾ ಗ್ರಾಮವು ತನ್ನ ಧೈರ್ಯಶಾಲಿ ಮಗನಿಗೆ ವಿದಾಯ ಹೇಳುತ್ತಿದ್ದಂತೆ, ದುಃಖವು ಹೆಮ್ಮೆಯೊಂದಿಗೆ ಬೆರೆತು ಹೋಯಿತು.

Scroll to load tweet…

View post on Instagram