ಇಬ್ಬರು ಹಿರಿಯ ಇಂಜಿನಿಯರ್‌ಗಳ ಹೆಸರು ಬರೆದಿಟ್ಟು PWD ಕಿರಿಯ ಇಂಜಿನಿಯರ್ ಒಬ್ಬರು ಸಾವಿಗೆ ಶರಣಾದ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ. 

ಇಬ್ಬರು ಹಿರಿಯ ಇಂಜಿನಿಯರ್‌ಗಳ ಹೆಸರು ಬರೆದಿಟ್ಟು PWD ಕಿರಿಯ ಇಂಜಿನಿಯರ್ ಒಬ್ಬರು ಸಾವಿಗೆ ಶರಣಾದ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಇಂಜಿನಿಯರ್ ಜ್ಯೋತಿಶಾ ದಾಸ್ ಅವರು ಸಾವಿಗೆ ಶರಣಾಗಿದ್ದಾರೆ.

ಸಾವಿಗೂ ಮೊದಲು ಬರೆದ ಡೆತ್‌ನೋಟ್‌ನಲ್ಲಿ ನಕಲಿ ಬಿಲ್‌ ಕ್ಲಿಯರ್ ಮಾಡುವಂತೆ ಒತ್ತಾಯ ಮಾಡಿದರು ಎಂದು ಜ್ಯೋತಿಶಾ ದಾಸ್‌ ಅವರು ಹಿರಿಯ ಎಂಜಿನಿಯರ್‌ಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದು ಲೋಕಪಯೋಗಿ ಇಲಾಖೆಯಲ್ಲಿ ಇರುವ ಪ್ರಚಂಡ ಭ್ರಷ್ಟಾಚಾರದ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಸರ್ಮಾ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ವಿವರವಾದ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.

ಪೂರ್ಣಗೊಳ್ಳದೇ ಇದ್ದ ಕೆಲಸಗಳ ಬಿಲ್ ಪಾವತಿಸುವಂತೆ ತನಗೆ ಇಬ್ಬರು ಹಿರಿಯ ಅಧಿಕಾರಿಗಳು ನಿರಂತರವಾಗಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ತೀವ್ರ ಒತ್ತಡಕ್ಕೊಳಗಾಗಿದ್ದೇನೆ. ನನ್ನ ಕೆಲಸದ ಸ್ಥಳದಲ್ಲಿ ಇರುವ ತೀವ್ರವಾದ ಒತ್ತಡದಿಂದಾಗಿ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಆ ಕಚೇರಿಯಲ್ಲಿ ನನಗೆ ಸರಿಯಾಗಿ ಮಾರ್ಗದರ್ಶನ ಮಾಡುವುದಕ್ಕೆ ಯಾರೂ ಇಲ್ಲ, ಈ ಘಟನೆಗಳಿಂದ ನನಗೆ ಸಾಕಾಗಿದ್ದು , ಬೇರೆ ಯಾವುದೇ ಮಾರ್ಗವಿಲ್ಲ. ನನ್ನ ಪೋಷಕರು ನನ್ನ ಬಗ್ಗೆ ಚಿಂತೆ ಮಾಡ್ತಿದ್ದಾರೆ ಎಂದು ಸಾವಿಗೂ ಮೊದಲು ಬರೆದ ಡೆತ್‌ನೋಟ್‌ನಲ್ಲಿ ಜ್ಯೋತಿಶಾ ದಾಸ್ ಬರೆದಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಈಗ ಜ್ಯೋತಿಶಾ ದಾಸ್ ಪೋಷಕರು ದೂರು ನೀಡಿದ್ದು, ಪೊಲೀಸರು ಡೆತ್‌ನೋಟ್‌ನಲ್ಲಿ ಇರುವ ಮಾಹಿತಿ ಆಧರಿಸಿಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ದಿನೇಶ್ ಮೆಧಿ ಶರ್ಮಾ ಹಾಗೂ ಅಮಿನುಲ್ ಇಸ್ಲಾಂ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ದಿನೇಶ್ ಮೆಧಿ ಶರ್ಮಾ ಅವರು ಇತ್ತೀಚೆಗಷ್ಟೇ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಪ್ರಮೋಷನ್ ಪಡೆದಿದ್ದರು. ಇದಕ್ಕೂ ಮೊದಲು ಬೊಂಗೈಗಾಂವ್‌ ಬಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ಅಮಿನುಲ್ ಇಸ್ಲಾಂ ಬೊಂಗೈಗಾಂವ್‌ನಲ್ಲಿ ಉಪ ವಿಭಾಗೀಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇಬ್ಬರ ವಿರುದ್ಧವೂ ಈಗ ಎಫ್‌ಐಆರ್ ದಾಖಲಾಗಿದ್ದು, ಬಂಧನವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ನಾವು ಎಲ್ಲಾ ಅಂಶಗಳನ್ನು ತನಿಖೆ ಮಾಡುತ್ತಿದ್ದೇವೆ. ಬಿಲ್‌ಗಳನ್ನು ಮಾಡಲಾಗಿದೆ ಎಂದು ಹೇಳಲಾದ ಕಟ್ಟಡದ ಬಗ್ಗೆಯೂ ತನಿಖೆ ನಡೆಸಲಾಗುವುದು. ಕೆಲಸದ ವೆಚ್ಚವನ್ನು ನಾವು ಮರು ಮೌಲ್ಯಮಾಪನ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.