ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕಲಿಮಾ ಪಠಿಸುತ್ತಿದ್ದರಿಂದ ಪ್ರಾಧ್ಯಾಪಕ ದೇಬಶೀಶ್ ಬಚಾವಾಗಿದ್ದಾರೆ. ಉಗ್ರನು ಪಕ್ಕದಲ್ಲಿದ್ದವರಿಗೆ ಗುಂಡು ಹಾರಿಸಿದ ನಂತರ, ದೇಬಶೀಶ್ ಕಲಿಮಾ ಪಠಿಸಿದ್ದರಿಂದ ಆತ ಬೇರೆಡೆಗೆ ಹೋದ. ಕುಟುಂಬ ಸಮೇತರಾಗಿ ಓಡಿ ಬಚಾವಾದ ದೇಬಶೀಶ್, ಶ್ರೀನಗರದಲ್ಲಿ ಮನೆಗೆ ಮರಳಲು ಕಾಯುತ್ತಿದ್ದಾರೆ. ಈ ದಾಳಿಯಲ್ಲಿ ೨೬ ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ನವದೆಹಲಿ (ಏ.23): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ರಾಕ್ಷಸೀಯ ಭಯೋತ್ಪಾದಕ ದಾಳಿಯ ಬಳಿಕ, ಇಡೀ ಘಟನೆಯ ಒಂದೊಂದೇ ವಿವರಗಳು ಹೊರಬರುತ್ತಿವೆ. ಈ ನಡುವೆ ಅಸ್ಸಾಂ ವಿಶ್ವವಿದ್ಯಾಲಯದ ಬೆಂಗಾಲಿ ಡಿಪಾರ್ಟ್‌ಮೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ದೇಬಶೀಶ್ ಭಟ್ಟಾಚಾರ್ಯ ಇಡೀ ಪೈಶಾಚಿಕ ಘಟನೆಯನ್ನು ಕಣ್ಣಾರೆ ಕಂಡಿದ್ದು ಮಾತ್ರವಲ್ಲದೆ,ಸಾವಿನಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ. ಬೈಸರಣ್ ಕಣಿವೆಯಲ್ಲಿ ನಡೆದ ಈ ಪೈಶಾಚಿಕ ಕೃತ್ಯದಲ್ಲಿ ದೇಬಶೀಶ್ ಬದುಕಿದ್ದೇ ಅತ್ಯಂತ ರೋಚಕ ಕಥೆ. ನಂಬಿಕೆ ಹಾಗೂ ಸಂಪೂರ್ಣ ಅದೃಷ್ಟದ ಕಥೆ ಎಂದು ಹೇಳಬಹುದಾಗಿದೆ.
'ಘಟನೆ ನಡೆಯುವ ಸಂದರ್ಭದಲ್ಲಿ ನಾನು ನನ್ನ ಕುಟುಂಬದವರೊಂದಿಗೆ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಈ ವೇಳೆ ನನ್ನ ಪಕ್ಕದಲ್ಲಿದ್ದ ವ್ಯಕ್ತಿ ಏನೂ ಗೊಣಗುತ್ತಿರುವುದು ಕೇಳಿದರು. ಅವರು ಕಲಿಮಾ ಹೇಳುತ್ತಿದ್ದರು' ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ. ಅದೇನು ಅನಿಸಿತೋ ಏನೋ, ನಾನು ಕೂಡ ಇದನ್ನು ಹೇಳಲು ಅರಂಭಿಸಿದೆ. ಇದು ನಡೆಯುತ್ತಿರುವ ಹೊತ್ತಿನಲ್ಲಿಯೇ ನಮ್ಮ ಬಳಿ ಬಂದ ಉಗ್ರನೊಬ್ಬನನ್ನು ನೋಡಿದೆ. ಸೇನಾ ಸಮವಸ್ತ್ರವನ್ನು ಆತ ಧರಿಸಿದ್ದ. ನಮ್ಮ ಬಳಿ ನಡೆದುಕೊಂಡು ಬರುತ್ತಿದ್ದ ಆತ, ನನ್ನ ಪಕ್ಕದಲ್ಲಿದ್ದ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ' ಎಂದು ತಿಳಿಸಿದ್ದಾರೆ.
ಆ ಬಳಿಕ ಉಗ್ರ ನನ್ನ ಕಡೆ ತಿರುಗಿದ. ನನ್ನ ಕಣ್ಣುಗಳನ್ನೇ ನೇರವಾಗಿ ನೋಡಿದ ಆತ, 'ಏನ್ ಮಾಡ್ತಾ ಇದ್ದೀಯಾ?' ಎಂದು ಕೇಳಿದ. ನಾನೇನೂ ಮಾತನಾಡದೆ ಕಲಿಮಾವನ್ನು ಇನ್ನಷ್ಟು ಜೋರಾಗಿ ಹೇಳಲು ಆರಂಭಿಸಿದೆ. ಯಾಕೆ ನಾನು ಇದನ್ನು ಹೇಳಲು ಆರಂಭಿಸಿದೆ ಅನ್ನೋದು ಈಗಲೂ ಗೊತ್ತಾಗಿಲ್ಲ. ಬಳಿಕ ಏನೂ ಕಾರಣಕ್ಕೆ ಆತ ಬೇರೆ ಕಡೆಗೆ ತಿರುಗಿ ಆ ಕಡೆ ನಡೆದುಕೊಂಡು ಹೋದ' ಎಂದು ತಿಳಿಸಿದ್ದಾರೆ.
ಬದುಕುಳಿಯುವ ಅವಕಾಶ ಎಂದು ಅರಿತ ಪ್ರೊಫೆಸರ್ ತಕ್ಷಣವೇ ಅಲ್ಲಿಂದ ಎದ್ದು ಹೆಂಡತಿ ಹಾಗೂ ಮಕ್ಕಳೊಂದಿಗೆ ಓಡಲು ಆರಂಭಿಸಿದರು. "ನಾವು ಬೆಟ್ಟ ಹತ್ತಿದೆವು, ಬೇಲಿಯನ್ನು ದಾಟಿದೆವು ಮತ್ತು ದಾರಿಯಲ್ಲಿ ಕುದುರೆಗಳ ಗೊರಸಿನ ಗುರುತುಗಳನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಲೇ ಇದ್ದೆವು. ಕೊನೆಗೆ, ನಾವು ಕುದುರೆ ಸವಾರನನ್ನು ಭೇಟಿಯಾದೆವು ಮತ್ತು ನಮ್ಮ ಹೋಟೆಲ್‌ಗೆ ಹಿಂತಿರುಗುವಲ್ಲಿ ಯಶಸ್ವಿಯಾದೆವು."ಎಂದು ತಿಳಿಸಿದ್ದಾರೆ. "ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ. ಕುಟುಂಬವು ಈಗ ಶ್ರೀನಗರದಲ್ಲಿದ್ದು, ಮನೆಗೆ ಮರಳಲು ಇರುವ ಅವಕಾಶಕ್ಕಾಗಿ ಕಾಯುತ್ತಿದೆ.
ಕಲಿಮಾ ಎಂದರೇನು?: ಕಲಿಮಾ ಎನ್ನುವುದು ಇಸ್ಲಾಮಿಕ್‌ನಲ್ಲಿ ಬಹುಮುಖ್ಯವಾದ ಒಂದು ಪದ. ಇದರ ಅರ್ಥ "ಶಬ್ದ" ಅಥವಾ "ವಾಕ್ಯ" ಎಂಬುದಾಗಿದೆ. "ಅಲ್ಲಾಹ್ ಹೊರತು ಬೇರೆ ದೇವರು ಇಲ್ಲ. ಮುಹಮ್ಮದ್ (ಸ) ಅವರು ಅಲ್ಲಾಹ್‌ನ ದೂತರು' ಎನ್ನುವುದು ಇದರ ತಾತ್ಪರ್ಯ.
ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಿಗ್ಗೆ ಪ್ರವಾಸಿಗರ ಗುಂಪೊಂದು ದೃಶ್ಯವೀಕ್ಷಣೆಗೆ ಹೋಗಿದ್ದ ವೇಳೆ ಬೈಸರನ್‌ನಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ವಿಭಾಗವಾದ ರೆಸಿಸ್ಟೆನ್ಸ್ ಫ್ರಂಟ್‌ನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಮೃತರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರೂ ಮತ್ತು ಇಬ್ಬರು ಸ್ಥಳೀಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಲಿಯಾದವರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ಭಾರತೀಯ ರಾಜ್ಯಗಳ ಪ್ರವಾಸಿಗರು ಸೇರಿದ್ದಾರೆ.
'ಮಮ್ಮಿ ನನಗೆ ಏನೂ ಬೇಡ, ಪಪ್ಪ ಎಲ್ಲಿ..' ಪಹಲ್ಗಾಮ್ ದಾಳಿ ಎಷ್ಟು ಭೀಕರ ಈ ವಿಡಿಯೋ ನೋಡಿ!
ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಭಯೋತ್ಪಾದಕರು ಎಲ್ಲರನ್ನೂ ಒಟ್ಟುಗೂಡಿಸಿ, ಅವರ ಗುರುತನ್ನು ದೃಢಪಡಿಸುವ ಮೊದಲು ಅವರನ್ನು ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದರು. ಕೆಲವು ಸಂತ್ರಸ್ಥರನ್ನು ಸ್ನೈಪರ್ ತರಹದ ತಂತ್ರವನ್ನು ಬಳಸಿ ದೂರದಿಂದ ಗುಂಡು ಹಾರಿಸಲಾಗಿದೆ. ಇನ್ನೂ ಕೆಲವರು ಬ್ಲಡ್ ಲಾಸ್‌ನಿಂದ ಸಾವು ಕಂಡಿದ್ದಾರೆ. ಸಾಮಾನ್ಯವಾಗಿ ಇಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುವ ಕಾರಣಕ್ಕಾಗಿ ಈ ಪ್ರದೇಶವನ್ನು ಉಗ್ರರು ಆರಿಸಿಕೊಂಡಿದದ್ದರು. ಇದರಿಂದ ಸಾವು ನೋವುಗಳನ್ನು ಹೆಚ್ಚಿಸಬಹುದು ಎನ್ನುವುದು ಉಗ್ರರ ಉದ್ದೇಶವಾಗಿತ್ತು ಅನ್ನೋದು ತಿಳಿದುಬಂದಿದೆ.
ಮುಸ್ಲಿಮರಿಗೆ ದುರ್ಬಲ ಅನ್ನೋ ಭಾವನೆ ಬರ್ತಿದೆ, ಈ ದಾಳಿ ಮೋದಿಗೆ ಕೊಟ್ಟ ಸಂದೇಶ: ಸೋನಿಯಾ ಗಾಂಧಿ ಅಳಿಯ
