ಅಸ್ಸಾಂ ವಿಧಾನಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ, ಮದುವೆ, ವಿಚ್ಛೇದನ, ಮತ್ತು ಸಹಜೀವನಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವ ಹೊಸ ಕಾನೂನನ್ನು ಜಾರಿಗೆ ತಂದ ನಾಲ್ಕನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ.
ಗುವಾಹಟಿ: ವಿಪಕ್ಷಗಳ ವಿರೋಧದ ನಡುವೆಯೂ ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆ ಬುಧವಾರ ಅಂಗೀಕಾರವಾಗಿದೆ. ಈ ಮೂಲಕ, ಮದುವೆ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನದಂತಹ ವಿಷಯಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಕಾನೂನು ಜಾರಿಗೆ ತಂದ 4ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದೆ.
2016ರಲ್ಲೇ ರೂಪಿಸಲಾಗಿರುವ ಮಸೂದೆಯ ಬಗೆಗಿನ ಸುದೀರ್ಘ ಚರ್ಚೆಯ ಬಳಿಕ ಅದನ್ನು ಅಂಗೀಕಾರಕ್ಕಾಗಿ ಸದನದಲ್ಲಿ ಮಂಡಿಸುವಂತೆ ರಾಜ್ಯಪಾಲರು ಸಿಎಂ ಹಿಮಂತ ಬಿಸ್ವ ಶರ್ಮಾ ಅವರಿಗೆ ಸೂಚಿಸಿದರು. ಈ ವೇಳೆ, ಮಂಡನೆಗೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸಬೇಕೆಂದು ಪಟ್ಟು ಹಿಡಿದ ವಿಪಕ್ಷದವರು ಬಾವಿಗೆ ಇಳಿದು ಪ್ರತಿಭಟಿಸಿದರು. ಇದನ್ನು ತಿರಸ್ಕರಿಸಿದ ಸ್ಪೀಕರ್, ಧ್ವನಿಮತಕ್ಕೆ ಅನುವು ಮಾಡಿಕೊಟ್ಟರು. ಬಳಿಕ ‘ಭಾರತ ಮಾತಾ ಕಿ ಜೈ’, ‘ಜೈ ಶ್ರೀರಾಮ್’ ಘೋಷಣೆಗಳ ನಡುವೆ ಮಸೂದೆ ಪಾಸ್ ಆಗಿದೆ ಎಂದು ಘೋಷಿಸಿದರು.
ಯುಸಿಸಿ ಅಡಿಯಲ್ಲಿ ಮದುವೆ ವಯಸ್ಸು ನಿಗದಿ, ಮದುವೆ, ವಿಚ್ಛೇದನ, ಸಹಜೀವನದ ನೋಂದಣಿ ಇತ್ಯಾದಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳು ಜಾರಿಗೆ ಬರಲಿದ್ದು, ಇವು ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯಿಸಲಿದೆ. ಈಗಾಗಲೇ ಉತ್ತರಾಖಡ ಮತ್ತು ಗುಜರಾತ್‌ನಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ ಸ್ವಾತಂತ್ರ್ಯಪೂರ್ವದಿಂದಲೇ ಜಾರಿಯಲ್ಲಿದೆ.
ಮಸೂದೆಯಲ್ಲಿ ಏನಿದೆ?:
ಮದುವೆಯಾಗಲು ಸ್ತ್ರೀಗೆ ಕನಿಷ್ಠ 18 ಹಾಗೂ ಪುರುಷನಿಗೆ 21 ವರ್ಷ ಆಗಿರಬೇಕು. ಮದುವೆ ಮತ್ತು ವಿಚ್ಛೇದನ 60 ದಿನಗಳೊಳಗೆ ನೋಂದಣಿ ಆಗದಿದ್ದರೆ 10 ಸಾವಿರ ರು. ದಂಡ, ನಕಲಿ ದಾಖಲೆ ಒದಗಿಸಿದರೆ 3 ತಿಂಗಳು ಜೈಲು ಅಥವಾ 25 ಸಾವಿರ ರು. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ದ್ವಿಪತ್ನಿತ್ವ ಅಥವಾ ಬಹುಪತ್ನಿತ್ವ ಪಾಲಿಸುವವರಿಗೆ 7 ವರ್ಷ ಜೈಲು ಶಿಕ್ಷೆ.
ಸಹಜೀವನ ನಡೆಸುತ್ತಿರುವವರು 1 ತಿಂಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ವಿಫಲವಾದಲ್ಲಿ 3 ತಿಂಗಳು ಸೆರೆವಾಸ ಅಥವಾ 10 ಸಾವಿರು ರು. ದಂಡ ವಿಧಿಸಲಾಗುವುದು. ಒಂದೊಮ್ಮೆ ನೋಂದಣಿ ವೇಳೆ ವೈವಾಹಿಕ ಸಂಬಂಧ ಅಥವಾ ಇತರೆ ಮಾಹಿತಿ ಮುಚ್ಚಿಟ್ಟರೆ 3 ತಿಂಗಳು ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಲಾಗುವುದು. ಅಕ್ರಮವಾಗಿ ವಿಚ್ಛೇದನ ಪಡೆಯುವವರಿಗೆ 3 ವರ್ಷ ಸೆರೆವಾಸದಂತಹ ಶಿಕ್ಷೆಗಳನ್ನು ವಿಧಿಸಲಾಗುವುದು. ಆದರೆ ಪರಿಶಿಷ್ಟ ಪಂಗಡಗಳನ್ನು ಮಾತ್ರ ಇದರಿಂದ ಹೊರಗಿಡಲಾಗುವುದು.
ಏನಿದು ಯುಸಿಸಿ?:
ಮದುವೆ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಯುಸಿಸಿ ಅಡಿ ಎಲ್ಲಾ ಧರ್ಮದವರಿಗೆ ಅನ್ವಯವಾಗುವ ಕಾನೂನನ್ನು ಜಾರಿಗೆ ತರಲಾಗುತ್ತದೆ.


